ಬಿಎಸ್‌ವೈ ನನಗೇನೂ ಹೇಳಿಲ್ಲ

ದಾವಣಗೆರೆ, ಜು.23- ವೀರಶೈವ ಮಹಾ ಸಭಾದಿಂದ ಯಡಿಯೂರಪ್ಪ ಅವರೇ ಮುಖ್ಯ ಮಂತ್ರಿಯಾಗಿ ಮುಂದುವರೆಯಲಿ ಎಂಬುದಾಗಿ ಬೆಂಬಲ ನೀಡಿದ್ದೇವೆ. ಸಿಎಂ ಬದಲಾವಣೆ ವಿಚಾರವಾಗಿ ಇನ್ನೂ ಮೂರು ದಿನ ಕಾದು ನೋಡಿ, ಬಿಜೆಪಿ ಹೈಕಮಾಂಡ್ ಏನು ಹೇಳಲಿದೆ ಎಂದು ಕಾಂಗ್ರೆಸ್ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. 

ಇಂದಿಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಸಿಎಂ ಆಗುತ್ತಾರೆ ಎಂಬುದನ್ನು ಮೂರು ದಿನ ಕಾದು ನೋಡಿ. ನಾನು ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ ಯಾರು ಸಿಎಂ ಆಗುತ್ತಾರೆ ಎಂದು ಅವರು ಹೇಳಿಲ್ಲ. ಪಕ್ಷದ ತೀರ್ಮಾನ ಏನೆಂದು ಅವರು ಕಾಯುತ್ತಿದ್ದಾರೆ ಎಂದರು. 

ನೀವು ಸಿಎಂ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ನನಗೆ ವಯಸ್ಸಾಗಿದೆ, ವಯಸ್ಸು ಇದ್ದಿದ್ದರೇ ಮುಖ್ಯಮಂತ್ರಿ ಆಗುತ್ತಿದ್ದೆ. ಏನು ಮಾಡುವುದು ವಯಸ್ಸು ಇಲ್ಲ. ಇದೇ ಕಾರಣಕ್ಕೆ ಸುಮ್ಮನಿದ್ದೇನೆ. ಈಗ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಸ್ಥಾನ ಇದೆ. ಅದೇ ಸ್ಥಾನ ಸಾಕು ಎಂದು ಮುಗುಳ್ನಕ್ಕರು.