ಬಿಎಸ್‌ವೈ ಪದಚ್ಯುತಿಗೊಳಿಸಿದರೆ ಬಿಜೆಪಿ ಕಥೆ ಮುಗಿದಂತೆ

ಬೆಂಗಳೂರು,ಜು.19-ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿ ಕಥೆ ಮುಗಿದ ಹಾಗೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಲ್ಲೊಬ್ಬರಾದ ಡಾ. ಶಾಮನೂರು ಶಿವಶಂಕರಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂದಿಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ತಮ್ಮನ್ನು ಭೇಟಿ ಮಾಡಿದ್ದ ಪತ್ರಕರ್ತರೊಂದಿಗೆ ಮಾತನಾಡಿದ ಎಸ್ಸೆಸ್, ವೀರಶೈವ ಮಹಾಸಭಾವು ಯಡಿಯೂರಪ್ಪ ಪರ ಇರುತ್ತದೆ ಎಂದರು. 

ಎಸ್ಸೆಸ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದಲ್ಲದೇ, ಅವರ ಪರ ನೀಡಿರುವ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬಿಜೆಪಿಗೆ ಲಿಂಗಾಯತರ ಅವಕೃಪೆ : ಯಡಿಯೂರಪ್ಪ ಅವರನ್ನು ಮುಖ್ಯ ಸ್ಥಾನ ದಿಂದ ಪದಚ್ಯುತಗೊಳಿಸಿದರೆ ನಿಶ್ಚಿತವಾಗಿ ಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಎಚ್ಚರಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂದು ನನ್ನ ವೈಯಕ್ತಿಕ ಅನಿಸಿಕೆ ಎಂದಿದ್ದಾರೆ. 

ಯಡಿಯೂರಪ್ಪನವರು ದೆಹಲಿಗೆ ತೆರಳುವುದಕ್ಕೂ ಮುನ್ನ ಎಂ.ಬಿ. ಪಾಟೀಲ್, ಸರ್ಕಾರಿ ನಿವಾಸ ಕಾವೇರಿಗೆ ತೆರಳಿ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.