ಕುಲ ಕಸುಬಿಗರ ದನಿಯಾಗಿ ನಿಲ್ಲುವೆ

ಕುಲ ಕಸುಬಿಗರ ದನಿಯಾಗಿ ನಿಲ್ಲುವೆ

ನ್ಯಾಮತಿ, ಜು.15-  ರಾಜ್ಯದಲ್ಲಿ ಕುಲ ಕಸುಬುಗಳನ್ನು ಅವಲಂಬಿಸಿರುವ ಎಲ್ಲಾ ಸಮು ದಾಯಗಳ ಧ್ವನಿಯಾಗಿ ನಿಂತು ಅವರ ಆಶೋತ್ತರಗಳ ಈಡೇರಿಕೆಗಾಗಿ ಹೋರಾಟ ನಡೆಸುವೆ. ಈ ನಿಟ್ಟಿನಲ್ಲಿ ತಾನು ರಾಜ್ಯಾದ್ಯಂತ ಸಂಚರಿಸಿ ಬಂಜಾರ ಸಮುದಾಯವೂ ಸೇರಿದಂತೆ ಎಲ್ಲಾ ಶ್ರಮಿಕ ವರ್ಗದ ಸಮುದಾಯ ಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನ್ಯಾಮತಿ ತಾಲ್ಲೂಕು ಬಂಜಾರ ಸಮುದಾಯದ ಪವಿತ್ರ ಧಾರ್ಮಿಕ ಕ್ಷೇತ್ರ ಸೂರಗೊಂಡನಕೊಪ್ಪಕ್ಕೆ ಇಂದು ಭೇಟಿ ನೀಡಿ ಬಂಜಾರ ಸಮುದಾಯ ಮುಖಂಡರು ಹಾಗೂ ಜನರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈಗಾಗಲೇ ಮೀನುಗಾರ ಸಮುದಾಯದ ವರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಕೇಳಿ ತಿಳಿದುಕೊಂಡಿದ್ದು ಬಂಜಾರ, ಮಡಿವಾಳ, ನೇಕಾರರು, ದರ್ಜಿಗಳು, ಕಮ್ಮಾರಿಕೆ ,ಬಡಿಗೆ ಕೆಲಸ ಮಾಡುವ ಜನಸಮುದಾಯದವರನ್ನು  ಭೇಟಿ ಮಾಡಿ ಅವರೊಂದಿಗೆ ನೇರವಾಗಿ ಸಂವಾದ ನಡೆಸುವ ಮೂಲಕ ಅವರ ಮೂಲ ಸಮಸ್ಯೆಗಳನ್ನು ಅರಿಯುವ ಜೊತೆಗೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅವರ ಧ್ವನಿಯಾಗಿ ಸರ್ಕಾರದ ಹಂತದಲ್ಲಿ  ಹೋರಾಟ ಮಾಡಿ ಅವರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡುವುದಾಗಿ  ತಿಳಿಸಿದರು. 

ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಬೇಕು: ಸಂವಾದ ಕಾರ್ಯ ಕ್ರಮದಲ್ಲಿ ಗಿರೀಶ್ ಎಂಬುವವರು ಮಾತನಾಡಿ, ಇಂದಿಗೂ ಕೂಡ ಲಂಬಾಣಿಗಳು ತಾಂಡಾಗಳಲ್ಲಿ ವಾಸಿಸುತ್ತಿದ್ದು, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಾಂಡಾಗಳನ್ನು ಕೂಡಲೇ ಕಂದಾಯ ಗ್ರಾಮಗಳನ್ನಾಗಿಸಬೇಕು ಎಂದು ಆಗ್ರಹಿಸಿದರು.

ಪತ್ರಕರ್ತೆ ರೇಷ್ಮಾಬಾಯಿ ಮಾತನಾಡಿ, ಬಂಜಾರ ಸಮುದಾಯದವರು ಹೊಟ್ಟೆಪಾಡಿಗಾಗಿ ಗುಳೇ ಹೋಗುವುದು ಸಾಮಾನ್ಯವಾಗಿದೆ. ಗುಳೇ ಹೋಗುವ ಪೋಷಕರ ಮಕ್ಕಳಿಗೆ  ಸಂಚಾರಿ ವಸತಿ ಶಾಲೆಗಳ ವ್ಯವಸ್ಥೆ ಮಾಡಬೇಕು. ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ಮತಾಂತರ ತಡೆಗಟ್ಟುವಂತೆ ತಾಂಡಾ ಅಭಿವೃದ್ಧಿ ನಿಗಮಕ್ಕೆ ಅನೇಕ ಬಾರಿ ಮನವಿ ಮಾಡಿರುವುದಾಗಿ ತಿಳಿಸಿದರು.

ಬಂಜಾರ ಉಡುಗೆ ತೊಟ್ಟ ಬಡ ಮಹಿಳೆಯೊಬ್ಬರು ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮ ಎಂದರೆ ಕೇವಲ ರಸ್ತೆ, ಚರಂಡಿ ಮುಂತಾದ ಕೆಲಸಗಳನ್ನು ಮಾಡುವುದಲ್ಲ. ಈ ಜನಾಂಗದ ಕಡು ಬಡ ಮಹಿಳೆಯರು ಗರ್ಭಕೋಶ ಕ್ಯಾನ್ಸರ್‍ನಿಂದ ಅಸು ನೀಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸೌಲಭ್ಯ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.

ದಾವಣಗೆರೆಯ ವಕೀಲ ಎನ್. ಜಯದೇವ ನಾಯ್ಕ ಮಾತನಾಡಿ, 35 ಲಕ್ಷ ಜನಸಂಖ್ಯೆಯಲ್ಲಿ ಶೇ.80 ರಷ್ಟು ಕೂಲಿ ಕಾರ್ಮಿಕರು, ಶೇ. 10 ರಷ್ಟು  ಜನರು ಪಿತ್ರಾರ್ಜಿತ ಸಾಗುವಳಿ ಮಾಡುತ್ತಿದ್ದು, ಸಂಚಾರಿ ಶಾಲೆ, ಹಾಸ್ಟೆಲ್ ಪ್ರಾರಂಭಗೊಳ್ಳಬೇಕು ಎಂದು 395ರ ಆರ್ಟಿಕಲ್ ವಿಚಾರವಾಗಿ ವಿವರಿಸಿದರು.

ಚನ್ನಗಿರಿಯ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಎನ್. ವೀರೇಶ್ ನಾಯ್ಕ್ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಅಧಿನಿಯಮ 2005 ರಲ್ಲಿ ಎಸ್‍ಟಿ ಜನಾಂಗದವರಿಗೆ ಹಕ್ಕು ಪತ್ರ ದೊರೆಯುತ್ತಿದ್ದು , ಎಸ್ಸಿಗಳು 75 ವರ್ಷ ದಾಖಲೆ ನೀಡಬೇಕಿದೆ. ಕಾಯ್ದೆಯಲ್ಲಿ ತಿದ್ದುಪಡಿ ತರಬೇಕಿದ್ದು , ಕ್ರೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ಇದೇ ವೇಳೆ ಲಂಬಾಣಿ ಜನಾಂಗದವರ ಬೇಡಿಕೆಗಳ ಮನವಿಯನ್ನು  ಮಾಜಿ ಸಚಿವರು ಹಾಗೂ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಲಂಬಾಣಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮನವಿ ವಾಚಿಸಿದರು.

ಸಭೆಯಲ್ಲಿ ರುದ್ರಪ್ಪ ಲಂಬಾಣಿ, ಶಿವಮೂರ್ತಿ ನಾಯ್ಕ,  ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧ್ರುವನಾರಾಯಣ, ಮಹಿಳಾ ಅಧ್ಯಕ್ಷರಾದ ಪುಷ್ಪ ಅಮರ್‍ನಾಥ್, ವಿಧಾನ ಪರಿಷತ್‌ ಸದಸ್ಯ ಪ್ರಸನ್ನಕುಮಾರ್, ದಾವಣಗೆರೆ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸುಂದರೇಶ್, ಹೊನ್ನಾಳಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಎಚ್.ಎ. ಉಮಾಪತಿ, ಬಿ. ಸಿದ್ದಪ್ಪ, ಮಹಾಮಠ ಸಮಿತಿಯ ಡಾ. ಈಶ್ವರನಾಯ್ಕ, ದಾವಣಗೆರೆಯ ಡಾ. ತುಳಸಿ ನಾಯ್ಕ, ಬಿ.ವಿ.  ದೀಪಕ್ ಇನ್ನಿತರರಿದ್ದರು.