ತಾವೇ ಸೈಕಲ್‌ ಉಪಯೋಗಿಸಿ ಮಾದರಿಯಾಗಲಿ : ಸಂಸದರಲ್ಲಿ ಮನವಿ

ದಾವಣಗೆರೆ, ಜು.11- ಸೈಕಲ್‌ ಉಪಯೋಗಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿಕೆ ನೀಡಿ, ಪರೋಕ್ಷವಾಗಿ ತೈಲ ಬೆಲೆಯೇರಿಕೆಯನ್ನು ಸಮರ್ಥಿಸಿ ಕೊಂಡಿರುವ ಸಂಸದರು, ಮೊದಲು ತಾವೇ ಸೈಕಲ್‌ ಉಪಯೋಗಿಸಿ ಸಾರ್ವಜನಿಕರಿಗೆ ಮಾದರಿಯಾಗಲಿ ಎಂದು ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಹೆಚ್‌. ತಿಮ್ಮಣ್ಣ ತಿಳಿಸಿದ್ದಾರೆ.

ಬಡವರ ಕಷ್ಟಗಳಿಗೆ ಸ್ಪಂದಿಸದೇ ಉಡಾಫೆ ಉತ್ತರ ನೀಡುವುದು ಸಂಸದರಿಗೆ ಶೋಭೆ ತರುವಂತಹದ್ದಲ್ಲ. ಮುಂದಿನ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಸೈಕಲ್‌ನಲ್ಲಿ ಸಂಚರಿಸುವ ಮೂಲಕ ಎಲ್ಲಾ ವರ್ಗದ ಜನರಿಗೆ ಮಾದರಿಯಾಗಲಿ. ಆಗ ಸಾಮಾನ್ಯ ಜನರ ಕಷ್ಟ ಏನೆಂಬುದು ಅರ್ಥವಾಗುತ್ತದೆ. ಕೇವಲ ಐಷಾರಾಮಿ ಕಾರಿನಲ್ಲಿ ಕೂತು ಜನರಿಗೆ ಸೈಕಲ್‌ನಲ್ಲಿ ಸಂಚರಿಸಿ ಎಂದು ಹೇಳುವುದು ಸರಿಯಲ್ಲ. ಮೊದಲು ಸಂಸದರು ಹಾಗೂ ಬಿಜೆಪಿ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಸೈಕಲ್‌ನಲ್ಲಿಯೇ ದಿನನಿತ್ಯದ ಕಾರ್ಯಕ್ರಮಗಳಿಗೆ ಹಾಜರಾಗಲಿ ಎಂದು ಅವರು ಹೇಳಿದ್ದಾರೆ.