ಕೆಲಸ ಮಾಡಲಾಗದಿದ್ದರೆ ಜಿಲ್ಲೆ ಬಿಟ್ಟು ತೊಲಗಿ

ಕೆಲಸ ಮಾಡಲಾಗದಿದ್ದರೆ ಜಿಲ್ಲೆ ಬಿಟ್ಟು ತೊಲಗಿ

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಂಸದ ಸಿದ್ದೇಶ್ವರ ಗರಂ

ದಾವಣಗೆರೆ, ಜು. 8 – ದಶಕವಾದರೂ ಮುಗಿಯದ ಹೆದ್ದಾರಿ ಸರ್ವೀಸ್ ರಸ್ತೆ ಕಾಮಗಾರಿ, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು, ಸ್ಥಳಾಂತರವಾಗದ ಹೈಟೆನ್ಷನ್ ವೈರ್‌ಗಳು, ಮುಖ್ಯ ಪ್ರವೇಶ ದ್ವಾರದ ನೀಲನಕ್ಷೆ ವಿಳಂಬದಿಂದ ತೀವ್ರ ಅಸಮಾಧಾನಗೊಂಡ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲೆಯಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೊಲಗಲಿ ಎಂದು ಕಿಡಿ ಕಾರಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಇಂದು ಕರೆಯಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಸಾಸ್ವೆಹಳ್ಳಿ ಏತ ನೀರಾವರಿ, ಜಗಳೂರು ಏತ ನೀರಾವರಿ, ಭರಮಸಾಗರ ಏತ ನೀರಾವರಿ ಹಾಗೂ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸರ್ವೀಸ್ ರಸ್ತೆ ಕಾಮಗಾರಿಯನ್ನು ಬರುವ ಅಕ್ಟೋಬರ್‌ ವೇಳೆಗೆ ಪೂರ್ಣಗೊಳಿಸುವುದಾಗಿ ಪ್ರಾಧಿಕಾರ ತಿಳಿಸಿತ್ತು. ಆದರೆ, ಈಗ ಗುತ್ತಿಗೆಯನ್ನು ಹೊಸ ಸಂಸ್ಥೆಗೆ ಕೊಡಲು ಟೆಂಡರ್ ಕರೆಯುವುದಾಗಿ ಹೇಳುತ್ತಿದೆ. ಜನವರಿಯಿಂದ ಇದೇ ಪುರಾಣ ಹೇಳಲಾಗುತ್ತಿದೆ ಎಂದವರು ಆಕ್ಷೇಪಿಸಿದರು.

ಹೈಟೆನ್ಷನ್ ವೈರ್ ಸ್ಥಳಾಂತರದ ಗುತ್ತಿಗೆದಾರರು ಓಡಿ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದಾಗ ಅಸಮಾಧಾನಗೊಂಡ ಸಿದ್ದೇಶ್ವರ, §ಕಂಟ್ರ್ಯಾಕ್ಟರ್ ಭಾಗ್ ಗಯಾ, ತುಮ್ ಭಿ ಭಾಗ್ ಜಾವೋ’ (ಗುತ್ತಿಗೆದಾರರು ಓಡಿ ಹೋಗಿದ್ದಾರೆ ಎಂದರೆ, ನೀವೂ ಓಡಿ ಹೋಗಿ) ಎಂದು ತರಾಟೆಗೆ ತೆಗೆದುಕೊಂಡರು. ಕೆಲಸ ಮಾಡಲು ಬರದಿದ್ದರೆ ಜಿಲ್ಲೆಯಿಂದ ಹೊರಟು ಹೋಗಿ. ರಸ್ತೆ ಹೇಗಿದೆಯೋ ಹಾಗೆ ಬಿಡಿ. ನಮ್ಮ ಜಿಲ್ಲೆಗೆ ಬರಬೇಡಿ. ಸಂಬಳ – ಕಮೀಷನ್ ಪಡೆಯಲು ಇಲ್ಲಿರುವಂತಿದೆ. ಹತ್ತು ವರ್ಷವಾದರೂ ಕೆಲಸ ಮಾಡುತ್ತಿಲ್ಲ ಎಂದರೆ ಏಕೆ ಕೆಲಸ ಮಾಡಬೇಕು? ಎಂದವರು ಕಿಡಿ ಕಾರಿದರು.

ಎಸ್.ಎಸ್. ಆಸ್ಪತ್ರೆ ಬಳಿ ರಸ್ತೆ ಜಂಪ್ ಹೊಡೆಯುವ ರೀತಿ ಇದೆ. ಗೊಲ್ಲರಹಟ್ಟಿ ಬಳಿ ಮೊಣಕಾಲು ತನಕ ಗುಂಡಿ ಇದೆ. ಹೆದ್ದಾರಿ ಹೀಗಿದ್ದರೆ ಜನರು ಸಾವಿಗೀಡಾಗುತ್ತಾರೆ. ಇದಕ್ಕೆ ನೀವು ಹೊಣೆ ಹೊರುತ್ತೀರಾ? ಎಂದು ಪ್ರಶ್ನಿಸಿದರು.

ಜಮೀನು ವಶ ತೊಡಕು, ಗುತ್ತಿಗೆ ಪ್ರಕ್ರಿಯೆ ಸೇರಿದಂತೆ, ಹಲವು ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸುಲು ನಾಯ್ಡು, ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದಾಗಿ ಹೇಳಿದರು.

ಕೆರೆಗಳಿಗೆ ನೀರು ತುಂಬಿಸುವ ಪೈಪ್‌ಗಳನ್ನು ಹೆದ್ದಾರಿಯ ಯುಟಿಲಿಟಿ ಕಾರಿಡಾರ್‌ನಲ್ಲಿ ಅಳವಡಿಸಿಕೊಳ್ಳಬಹುದು. ಎಂಟು ಹಳ್ಳಿಗಳಲ್ಲಿ ಇನ್ನೂ ಜಮೀನು ವಶ ನಡೆಯಬೇಕಿದೆ. ಜಮೀನು ವಶದ ನಂತರ ಪೈಪ್ ಅಳವಡಿಕೆಗೆ ಜಾಗ ನೀಡುವುದಾಗಿ ನಾಯ್ಡು ಹೇಳಿದರು.

ಲಕ್ಕಮುತ್ತೇನಹಳ್ಳಿ – ನೀರ್ಥಡಿ ಫ್ಲೈಓವರ್‌ ನಿರ್ಮಾಣ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರ ಪತ್ರ ಕೊಡಬೇಕು. ಆಗ ಪೊಲೀಸ್ ರಕ್ಷಣೆಯೊಂದಿಗೆ ನಿರ್ಮಾಣ ಕಾಮಗಾರಿಗೆ ಜಮೀನು ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಕರ್ನಾಟಕ ನೀರಾವರಿ ನಿಗಮ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪೈಪ್‌ಗಳನ್ನು ಅಳವಡಿಸುವಾಗ ಹೆದ್ದಾರಿಗೆ ಧಕ್ಕೆ ತಂದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಬೀಳಗಿ, ಕಾಮಗಾರಿ ನಡೆಸುವಾಗ ಬೇರೆಯವರಿಗೆ ಧಕ್ಕೆ ಮಾಡಬಾರದು. ಇದರಿಂದ ಆಗಿರುವ ನಷ್ಟವನ್ನು ನಿಗಮವೇ ಭರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಹಾಗೂ ಲಿಡ್ಕರ್ ಅಧ್ಯಕ್ಷ ಪ್ರೊ. ಲಿಂಗಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ನೀರಾವರಿ ನಿಗಮದ ಮುಖ್ಯ ಅಭಿಯಂತರ ಯತೀಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.