ಜಿ.ಪಂ. ಕ್ಷೇತ್ರಗಳ ಮೀಸಲಿಗೆ ಭಾರೀ ಆಕ್ಷೇಪಣೆ

ಮಲೇಬೆನ್ನೂರು, ಜು.8- ಜಿ.ಪಂ, ತಾ.ಪಂ ಕ್ಷೇತ್ರಗಳ ಮೀಸಲಾತಿ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗ ನೀಡಿದ್ದ ಕಾಲಾವಕಾಶ ಗುರುವಾರ ಕೊನೆಯ ದಿನವಾಗಿತ್ತು.

ದಾವಣಗೆರೆ ಜಿಲ್ಲೆಯ ಅನೇಕ ಜಿ.ಪಂ. ಕ್ಷೇತ್ರಗಳಲ್ಲಿ ಈಗ ಪ್ರಕಟಿಸಿರುವ ಮೀಸಲಾತಿಗೆ ಸಾಕಷ್ಟು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ಹೇಳಲಾಗಿದೆ. ಹರಿಹರ ತಾಲ್ಲೂಕಿನ ಭಾನುವಳ್ಳಿ ಜಿ.ಪಂ ಕ್ಷೇತ್ರ ಎಸ್ಸಿ ಮೀಸಲು ಆಗಿದ್ದು, ಇದನ್ನು ಬಿಸಿಎಂ `ಎ’ ಅಥವಾ ಎಸ್ಟಿ ಮಾಡಬೇಕೆಂದು ಆಕ್ಷೇಪಣೆ ಸಲ್ಲಿಸಿದ್ದಾರೆ.

ಹೊಸ ಜಿ.ಪಂ ಕ್ಷೇತ್ರವಾಗಿರುವ ಕುಂ ಬಳೂರು ಈಗ ಸಾಮಾನ್ಯವಾಗಿದ್ದು, ಇದನ್ನು ಎಸ್ಸಿ ಮಾಡಬೇಕೆಂದು ಕೆಲವರು, ಬಿಸಿಎಂ `ಎ’ ಮಾಡ ಬೇಕೆಂದು ಮತ್ತೆ ಕೆಲವರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಭಾನುವಳ್ಳಿ ಜಿ.ಪಂ ಕ್ಷೇತ್ರ ಈ ಹಿಂದೆ ನಾಲ್ಕು ಬಾರಿ ಸಾಮಾನ್ಯ ಮತ್ತು 2 ಬಾರಿ ಎಸ್ಸಿ ಮೀಸಲು ಆಗಿತ್ತು. ಆದರೆ, ಇದುವರೆಗೂ ಬಿಸಿಎಂ `ಎ’ ಅಥವಾ ಎಸ್ಟಿ ಬಂದಿಲ್ಲ ಎಂಬುದು ಕ್ಷೇತ್ರದ ಹಲವರ ಅಭಿಪ್ರಾಯವಾಗಿದೆ.

ಹಿಂದುಳಿದ ಮತಗಳು ಹೆಚ್ಚಾಗಿರುವ ಕುಂಬಳೂರು ಜಿ.ಪಂ. ಕ್ಷೇತ್ರವನ್ನು ಬಿಸಿಎಂ `ಎ’ ಮಾಡಬೇಕೆಂದು ಕೇಳಿದ್ದಾರೆಂದು ಹೇಳಲಾಗಿದೆ.

ಹೊಳೆಸಿರಿಗೆರೆ, ಬೆಳ್ಳೂಡಿ ಜಿ.ಪಂ ಕ್ಷೇತ್ರಗಳು ಸಾಮಾನ್ಯವಾಗಿದ್ದು, ಈ ಕ್ಷೇತ್ರಗಳಲ್ಲಿ ಆಕ್ಷೇಪಣೆ ಸಲ್ಲಿಕೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೊಂಡಜ್ಜಿ ಜಿ.ಪಂ. ಕ್ಷೇತ್ರ ಎಸ್ಟಿ ಆಗಿದ್ದು, ಇಲ್ಲಿಯೂ ಸಹ ಯಾವುದೇ ಆಕ್ಷೇಪಣೆ ಆಗಿಲ್ಲ ಎನ್ನಲಾಗಿದೆ.

ವಿಶೇಷ ಎಂದರೆ, ಹರಿಹರ ತಾಲ್ಲೂಕಿನ 5 ಜಿ.ಪಂ. ಕ್ಷೇತ್ರಗಳಲ್ಲಿ ಈ ಬಾರಿ ಒಂದು ಕ್ಷೇತ್ರವೂ ಮಹಿಳೆಯರಿಗೆ ಮೀಸಲಾಗಿಲ್ಲ. ಈ ಬಗ್ಗೆ ಮಹಿಳೆಯರೂ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಆದರೆ, ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಗೊತ್ತಾಗಿಲ್ಲ.

3 ತಾ.ಪಂ.ಕ್ಷೇತ್ರ ರದ್ದು : ಹರಿಹರ ತಾಲ್ಲೂಕಿನಲ್ಲಿ ಇದುವರಿಗೆ 15 ತಾ.ಪಂ. ಕ್ಷೇತ್ರಗಳಿದ್ದವು. ಈ ಬಾರಿ ಚುನಾವಣಾ ಆಯೋಗ 3 ತಾ.ಪಂ ಕ್ಷೇತ್ರಗಳನ್ನು ರದ್ದು ಮಾಡಿದೆ. ಗುತ್ತೂರು ಗ್ರಾಮ ಹರಿಹರ ನಗರಸಭೆ ವ್ಯಾಪ್ತಿಗೆ ಸೇರಿರುವುದರಿಂದ ಗುತ್ತೂರು ತಾ.ಪಂ. ಕ್ಷೇತ್ರವನ್ನು ರದ್ದು ಪಡಿಸಲಾಗಿದೆ.

ಎಳೆಹೊಳೆ, ಕುಣೆಬೆಳಕೆರೆ ತಾ.ಪಂ.ಕ್ಷೇತ್ರಗಳನ್ನೂ ರದ್ದು ಮಾಡಿ, ಈ ಕ್ಷೇತ್ರಗಳ ಊರುಗಳನ್ನು ಅಕ್ಕ-ಪಕ್ಕ ಕ್ಷೇತ್ರಗಳಿಗೆ ಸೇರಿಸಿದ್ದಾರೆ.

ಈಗ ಹರಿಹರ ತಾಲ್ಲೂಕಿನಲ್ಲಿ 12 ತಾ.ಪಂ. ಕ್ಷೇತ್ರಗಳಿದ್ದು ಬೆಳ್ಳೂಡಿ, ಸಿರಿಗೆರೆ, ವಾಸನ, ಬನ್ನಿಕೋಡು ಕ್ಷೇತ್ರಗಳು ಸಾಮಾನ್ಯವಾಗಿವೆ. ಕೊಂಡಜ್ಜಿ, ಭಾನುವಳ್ಳಿ ಬಿಸಿಎಂ `ಎ’ ಮಹಿಳೆಗೆ ಮೀಸಲಾಗಿದ್ದರೆ, ಹಾಲಿವಾಣ, ಜಿಗಳಿ ಸಾಮಾನ್ಯ ಮಹಿಳಾ ಕ್ಷೇತ್ರಗಳಾಗಿವೆ.

ರಾಜನಹಳ್ಳಿ ಬಿಸಿಎಂ `ಬಿ’ ವರ್ಗಕ್ಕೆ ಮತ್ತು ದೇವರಬೆಳಕೆರೆ ಎಸ್ಸಿ, ಕುಂಬಳೂರು ಎಸ್ಸಿ ಮಹಿಳೆಗೆ, ಕೊಕ್ಕನೂರು ಎಸ್ಟಿ ಮಹಿಳೆಗೆ ಮೀಸಲಾಗಿದೆ.

ಹೊಸ ಜಿ.ಪಂ. ಕ್ಷೇತ್ರವಾಗಿರುವ ಕುಂಬಳೂರು ಸಾಮಾನ್ಯವಾಗಿರುವುದರಿಂದ ಸಹಜವಾಗಿಯೇ ಇಲ್ಲಿ ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಎಸ್ಸಿಗೆ ಮೀಸಲಾಗಿರುವ ಭಾನುವಳ್ಳಿ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಈಗಾಗಲೇ ಆಯಾ ಪಕ್ಷದ ಮುಖಂಡರನ್ನು ಭೇಟಿ ಮಾಡಿ, ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ.

ಹೊಳೆಸಿರಿಗೆರೆ, ಬೆಳ್ಳೂಡಿ, ಕೊಂಡಜ್ಜಿ, ಜಿ.ಪಂ.ಗಳಲ್ಲಿ ಇದುವರೆಗೆ ಆಕಾಂಕ್ಷಿಗಳ ಭರಾಟೆ ಕಂಡು ಬಂದಿಲ್ಲ. ತಾ.ಪಂ. ಕ್ಷೇತ್ರಗಳಲ್ಲೂ ಇದುವರೆಗೂ ಅಷ್ಟು ಉತ್ಸಾಹ ಕಂಡು ಬಂದಿಲ್ಲ. 

ಮೀಸಲಾತಿ ಪಟ್ಟಿ ಅಧಿಕೃತವಾಗಿ ಗೆಜೆಟ್ ಪ್ರಕಟಣೆ ಆದ ನಂತರ ಮತ್ತಷ್ಟು ಆಕಾಂಕ್ಷಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ.


ಜಿಗಳಿ ಪ್ರಕಾಶ್,
jigaliprakash@gmail.com