ಜಗಳೂರು ತಾಲ್ಲೂಕಿನ ಹಳ್ಳಿಗಳಲ್ಲಿ ಸೋಂಕು ಹೆಚ್ಚಳ

ಜಗಳೂರು ತಾಲ್ಲೂಕಿನ ಹಳ್ಳಿಗಳಲ್ಲಿ ಸೋಂಕು ಹೆಚ್ಚಳ

ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಜನಸಾಮಾನ್ಯರು 

ಜಗಳೂರು, ಮೇ 20 – ಕೊರೊನಾ ಎರಡನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಹಬ್ಬುವ ಆತಂಕ ಉಂಟಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರುವುದು ಚಿಂತೆಗೀಡು ಮಾಡಿದೆ.

 ಗ್ರಾಮೀಣ ಪ್ರದೇಶದಲ್ಲಿ ನೆಗಡಿ, ಜ್ವರ, ಕೆಮ್ಮು ಸಾಮಾನ್ಯ ರೋಗ ಲಕ್ಷಣ ಇರುವ ಜನರು ಕೊರೊನಾ  ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಕೊರೊನಾ ಬಾಧಿತರನ್ನು ಗುರುತಿಸುವುದು, ಚಿಕಿತ್ಸೆ ಕೊಡಿಸುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಇತ್ತೀಚೆಗೆ ನಡೆದ ತಾಲ್ಲೂಕು ಮಟ್ಟದ ಕೊರೊನಾ ಟಾಸ್ಕ್‌ಫೋರ್ಸ್‌ ಸಮಿತಿಯಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಇರುವ ವ್ಯಕ್ತಿಗಳು ಮನೆಯಲ್ಲೇ ಇದ್ದು ಸೂಕ್ತ ಚಿಕಿತ್ಸೆ ಪಡೆಯಲು ಮುಂದಾಗಬೇಕು. ಆದರೆ ಕೊರೊನಾ ಪಾಸಿಟಿವ್ ಇರುವ ವ್ಯಕ್ತಿಗಳು ಗ್ರಾಮದಲ್ಲಿ ಓಡಾಡಿಕೊಂಡಿರು ವುದು ಆತಂಕದ ವಿಷಯವಾಗಿದೆ. ಗ್ರಾಮೀಣ ಮಟ್ಟದ ಸಮಿತಿ ಹಾಗೂ  ಗ್ರಾಮ ಪಂಚಾಯ್ತಿ ಸಿಬ್ಬಂದಿಯವರು ಅವರಲ್ಲಿ ಜಾಗೃತಿ ಮೂಡಿಸಬೇಕೆಂದು ತಹಶೀಲ್ದಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ಹೊರ ಊರಿನಿಂದ ಬಂದಂತಹ ಜನರು ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್ ಮಾಡದೇ ಇರುವುದು ಸಹ ಒಂದು ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು. ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಾನಾಯಕ್, ವಿವಿಧ  ಗ್ರಾಮಗಳಿಗೆ ತೆರಳಿ ಪಾಸಿಟಿವ್ ಪ್ರಕರಣಗಳು ಇರುವ ಮನೆಗಳಿಗೆ ಭೇಟಿ ನೀಡಿ, ಹೊರಗಡೆ ತಿರುಗಾಡದೇ ಮನೆಯಲ್ಲೇ ಇದ್ದು, ಗುಣಮುಖರಾಗ ಬೇಕೆಂದು ಜಾಗೃತಿ ಮೂಡಿಸುತ್ತಿದ್ದಾರೆ. ಅನಿವಾರ್ಯವಾದರೆ ಜಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಾಗೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಲು ಸಲಹೆ ನೀಡುತ್ತಿದ್ದಾರೆ. ಆದಾಗ್ಯೂ ಗ್ರಾಮೀಣ ಭಾಗದಲ್ಲಿ ಕೊರೊನಾ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಭಾವನೆ ಇರುವುದರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.

 ರೋಗಲಕ್ಷಣ ಇರುವ ವ್ಯಕ್ತಿಗಳು ಕೋವಿಡ್  ಟೆಸ್ಟ್‌ಗೆ ಆಸಕ್ತಿ ವಹಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಗಳನ್ನು ನೋಡುವ ದೃಷ್ಟಿಕೋನ ಹಾಗೂ ಇತ್ತೀಚಿಗೆ ಹೆಚ್ಚಾಗುತ್ತಿರುವ ಕೋವಿಡ್‌ ಸಾವಿನ ಪ್ರಕರಣಗಳು, ಆಕ್ಸಿಜನ್ ಕೊರತೆಯ ಪ್ರಕರಣಗಳು, ಆಸ್ಪತ್ರೆಯಲ್ಲಿ ಬೆಡ್ ದೊರೆಯದಿರುವ ಆತಂಕದ ಸುದ್ದಿಗಳು,  ಟೆಸ್ಟ್ ಮಾಡಿಸಿಕೊಳ್ಳಲು ಜನರು ಹಿಂದೇಟು ಹಾಕುವಂತೆ ಮಾಡುತ್ತಿವೆ.

ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಒಂದು ಮತ್ತು ಎರಡನೇ ಸಂಪರ್ಕಿತ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವಾಗುತ್ತಿಲ್ಲ.  ಈ ಕಾರಣದಿಂದಲೂ ಸಹ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ನೌಕರರು.

ಆಸ್ಪತ್ರೆ ಬೆಡ್‌ಗಳು ಭರ್ತಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಆಕ್ಸಿಜನ್ ಸಹಿತ 50 ಬೆಡ್‌ಗಳು ಪೂರ್ಣ ಭರ್ತಿಯಾಗಿವೆ.  ಕಳೆದೆರಡು ದಿನಗಳಿಂದ ಸುಮಾರು 80 ಜನ ಆಕ್ಸಿಜನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ 4 ವೆಂಟಿಲೇಟರ್‌ಗಳು ಸಹ ಕಾರ್ಯ ನಿರ್ವಹಿಸುತ್ತಿವೆ.  ದಿನೇ ದಿನೇ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.  ಪ್ರತಿ ಒಂದು ಗಂಟೆಗೆ ಒಂದು ಜಂಬೋ ಸಿಲಿಂಡರ್ ಅವಶ್ಯಕತೆ ಇದ್ದು, ಆಕ್ಸಿಜನ್ ಕೊರತೆ ಉಂಟಾಗದಂತೆ ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ.

ಮೊನ್ನೆ ಉಂಟಾಗಿದ್ದ ಆಕ್ಸಿಜನ್ ಕೊರತೆಯನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.  ನೀರಜ್ ಹಾಗೂ ಜೆಡಿಎಸ್ ಮುಖಂಡರಾದ  ಕೆ.ಬಿ. ಕಲ್ಲೇ ರುದ್ರೇಶ್  ಅವರುಗಳ ಮುಂಜಾಗ್ರತೆಯಿಂದಾಗಿ ನೇರವಾಗಿ ಹರಿಹರದ ಸದರನ್ ಗ್ಯಾಸ್ ಪಾಯಿಂಟ್‌ಗೆ ತೆರಳಿ ಆಕ್ಸಿಜನ್ ಸಿಲೆಂಡರ್ ಅನ್ನು ಆಸ್ಪತ್ರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ದಿನವೂ ಸಹ ಆಕ್ಸಿಜನ್  ಸಿಲೆಂಡರ್‌ಗಳನ್ನು ಸಮಯಕ್ಕೆ ಸರಿಯಾಗಿ ಹರಿಹರದಿಂದ ತರುವ ಪ್ರಕ್ರಿಯೆ ಜಾರಿಯಲ್ಲಿದೆ. ನಿನ್ನೆ ಜಗಳೂರಿಗೆ  ಸಂಬಂಧಿಸಿದ ಹತ್ತು ಸಿಲಿಂಡರ್‌ಗಳನ್ನು ಹೊನ್ನಾಳಿಗೆ ನೀಡಲಾಗಿದ್ದು, ಇಂದು ಪುನಃ ಜಗಳೂರಿಗೆ ಸರಬರಾಜು ಮಾಡಲಾಗಿದೆ ಎನ್ನುತ್ತಾರೆ ಕೆ.ಬಿ. ಕಲ್ಲೇರುದ್ರೇಶ್.

ಮೆದಗಿನಕೆರೆ ಗ್ರಾಮದ ಸಮೀಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಸುಸಜ್ಜಿತವಾದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಐವತ್ತಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.  ಪ್ರತಿಯೊಬ್ಬರಿಗೂ ಅಗತ್ಯವಾದ ಗುಣಮಟ್ಟದ ಆಹಾರ ಮತ್ತು ಸೌಲಭ್ಯಗಳನ್ನು ನೀಡಲಾಗಿದೆ ಎನ್ನುತ್ತಾರೆ ಸಹಾಯಕ ನೋಡಲ್ ಅಧಿಕಾರಿ ಬಿ. ಮಹೇಶ್. ಕೋವಿಡ್ ಕೇರ್ ಸೆಂಟರ್‌ಗೂ ಸಹ ದಾಖಲಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ.


– ಬಿ.ಪಿ. ಸುಭಾನ್,
subhanjvani@gmail.com