ರೂಪಾಂತರಗೊಳ್ಳಬೇಕಿದೆ… !!!!

ರೂಪಾಂತರಗೊಳ್ಳಬೇಕಿದೆ… !!!!

ಈ ರೂಪಾಂತರಿ ಕೊರೊನಾ ಕಾಟ ಬಹಳ ಜೋರಾಗ್ತ ಇದೆ. ಏನು ಮಾಡಬೇಕು ಗೊತ್ತಾಗ್ತಾ ಇಲ್ಲ.

ತಮ್ಮಾ ನಾವೂ ರೂಪಾಂತರಗೊಳ್ಳಬೇಕಿದೆ.

ಅಂದರೇ!?

ಗುಂಪಾಗಿ ಸೇರಿ ಹರಟೆ ಹೊಡಿತಿದ್ವಿ, ಪಾರ್ಟಿ ಮಾಡ್ತಾ ಇದ್ವಿ, ಶಾಪಿಂಗ್ ಮಾಡ್ತಾ ಇದ್ವಿ ಅದನ್ನು ಬಿಡಬೇಕು. ಸುಮ್ಮ ಸುಮ್ಮನೇ ಮನೆಯಿಂದ ಹೊರಗೆ ಇಣಕುಬಾರ್ದು.. ಸೋಪು ಹಚ್ಚಿ ಕೈ ತೊಳೆದುಕೊಂಡೇ ತಿನ್ನೋ ವಸ್ತುನಾ ಮುಟ್ಟಬೇಕು.

ಹೇ ಅದನ್ನು ಹೋದ ವರ್ಷಾನೇ ಮಾಡಿದ್ವಲಾ!

ಲೇ ಆಗ  ಹೆದರಿಕೊಂಡು ಒಂದೆರಡು ತಿಂಗಳು ಹಂಗೆ ಮಾಡಿದ್ವಿ. ಈಗ ಅದನ್ನು ರೂಢಿ ಮಾಡಿಕೊಳ್ಳಬೇಕು. ದಿನಾ ಮಾಡೋದನ್ನ ಅಳವಡಿಸಿಕೊಳ್ಳಬೇಕು. ಅದಕ್ಕೇ ರೂಪಾಂತರ ಅನ್ನೋದು.

ಹೌದೂ, ಒಂದು ರೀತಿ ಲಾಕ್ ಡೌನ್ ಆಗಿ ಒಂದು ವಾರದ ಮೇಲೆ ಆಯ್ತು. ಇನ್ನೂ ಸಾಮೂಹಿಕವಾಗಿ ಗಂಟೆ ಬಾರಿಸೋದು, ದೀಪ ಹಚ್ಚೋದು ನಡೆದೇ ಇಲ್ವಲ್ಲಾ?

ಅದೂ ರೂಪಾತರಗೊಂಡಿದೆ!

ಹೆಂಗೆ!?

ಗಂಟೆ, ಜಾಗಟೆ ಶಬ್ದದ ಬದಲು ಸಾಮೂಹಿಕವಾಗಿ ಸ್ಮಶಾನ ಸೇರ್ತಾ ಇರೋರ ಸಂಬಂಧಿಕರು ಲಬ ಲಬ ಹೊಯ್ಕಳ್ಳೋ ಶಬ್ದ ಕೇಳ್ತಾ ಇದಾರೆ! ದೀಪದ ಬದಲು ಸಾಮೂಹಿಕವಾಗಿ ಹೆಣಗಳ ಜ್ವಾಲೆ ಉರಿತಾ ಇದೆ!!

ಹೌದು! ಟಿ.ವಿಗಳಲ್ಲಿ ನೋಡಿದೆ, ಭಯಾನಕವಾಗಿದೆ.

ನನಗೆ ಗೊತ್ತಿರೋ ಸಂಘ-ಸಂಸ್ಥೆಗಳವರಿಗೆ ಒಂದು ಮನವಿ ಮಾಡಿದೀನಿ.

ಏನಂತ?

ಸದ್ಯ ಸಾಮೂಹಿಕ ವಿವಾಹಗಳನ್ನು ಏರ್ಪಾಡು ಮಾಡಬೇಡಿ ಅಂತ.

ಮತ್ತೇನು ಏರ್ಪಾಡು ಮಾಡಬೇಕು?

ಸಾಮೂಹಿಕ ಶವ ಸಂಸ್ಕಾರ!!!