ಭೋವಿ ಸಮುದಾಯಕ್ಕೆ ಅವಮಾನಿಸಿರುವ ಪಿಟಿಪಿ ಕೂಡಲೇ ಕ್ಷಮೆ ಕೇಳಬೇಕು

ಭೋವಿ ಸಮುದಾಯಕ್ಕೆ ಅವಮಾನಿಸಿರುವ ಪಿಟಿಪಿ ಕೂಡಲೇ ಕ್ಷಮೆ ಕೇಳಬೇಕು

ಹರಪನಹಳ್ಳಿ, ಏ.7- ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ ಏಕವಚನದಲ್ಲಿ ವಡ್ಡ ಅಂಜಿನಪ್ಪ ಎಂದು ಸಂಭೋದಿಸಿ ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದು, ಕೂಡಲೇ ಕ್ಷಮೆ ಕೇಳಬೇಕೆಂದು ಭೋವಿ ಸಮಾಜದ ತಾಲ್ಲೂಕು ಮುಖಂಡರುಗಳು ಆಗ್ರಹಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ತಾಲ್ಲೂಕು ಭೋವಿ ಸಮಾಜದ ಗೌರವಾಧ್ಯಕ್ಷ ವಿ. ರಾಮಪ್ಪ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಸಲೀಂ ಅಹಮದ್ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಹಡಗಲಿಗೆ ಬಂದ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಮ್ಮುಖದಲ್ಲಿ ಭೋವಿ ಸಮಾಜದ ಎಂ.ವಿ. ಅಂಜಿನಪ್ಪ ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ.

ಶಾಸಕ ಪಿಟಿಪಿ ಪರಮೇಶ್ವರ್ ನಾಯ್ಕ್ ಸಣ್ಣ-ಪುಟ್ಟ ಸಮಾಜದ ನಾಯಕರುಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ಮತ್ತು ಗೂಂಡಾವರ್ತನೆ ಮಾಡುವ ಮೂಲಕ ಶೋಷಿತ ಸಮುದಾಯಗಳ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಎಂ.ವಿ. ಅಂಜಿನಪ್ಪ ಎಲ್ಲಾ ಸಮಾಜದ ಮುಖಂಡರೊಂದಿಗೆ ಬಾಂಧವ್ಯ ಬೆಳೆಸಿಕೊಂಡು ಹೋಗುವುದನ್ನು ಸಹಿಸದ ಪರಮೇಶ್ವರ್ ನಾಯ್ಕ್, ಅಂಜಿನಪ್ಪ ಅವರನ್ನು ರಾಜಕೀಯವಾಗಿ ತುಳಿಯಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಸಮಾಜದ ಮುಖಂಡ ಮಹಾಂತೇಶ್ ಮಾತನಾಡಿ, ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರು ಜಾತಿ ನಿಂದನೆ ಮಾಡುತ್ತಿರುವುದು ಹೊಸತೇನಲ್ಲ. ಈ ಹಿಂದೆ ಕೊರಚ ಸಮುದಾ ಯವನ್ನು ಹೀಯಾಳಿಸಿ ಕೇಸು ಹಾಕಿಸಿಕೊಂಡಿದ್ದರು. ಹಾಗೂ ವಾಲ್ಮೀಕಿ ಸಮದಾಯದ ಬಡ ರೈತ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿ ಕೇಸು ದಾಖಲಿಸಿಕೊಂಡರೂ ಇವರ  ದರ್ಪ ಕಡಿಮೆ ಆಗಿಲ್ಲ. ಮಗನೊಂದಿಗೆ ಸ್ವಂತ ತಮ್ಮ ಶಿವಾಜಿ ನಾಯ್ಕರ ಮೇಲೆಯೇ ಹಲ್ಲೆ ಮಾಡಿ ಎಫ್‌ಐಆರ್ ಹಾಕಿಸಿಕೊಂಡಿದ್ದಾರೆ. ಎಸ್ಸಿ ಜಾತಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಇವರಿಗೆ ಎಸ್ಸಿ ದಲಿತ ನಾಯಕರುಗಳೇ ಟಾರ್ಗೆಟ್ ಆಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪರಮೇಶ್ವರ್ ನಾಯ್ಕ್ ಕೂಡಲೇ ಭೋವಿ ಸಮಾಜದ ಮುಂದೆ ಬಂದು ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನ್ಯ ಸಮಾಜಗಳ ಮುಖಂಡರುಗಳ ಸಹಕಾರ ಕೋರಿ ಸಮಾಜದ ಶ್ರೀಗಳ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಗಳಾದ ಬೇವಿನಹಳ್ಳಿ ಉಮೇಶ್, ನೀಲಗುಂದ ಭೋವಿ ಮಂಜುನಾಥ್, ಭೋವಿ ತಿರುಪತಿ, ಕೆರೆಗುಡಿ ಹಳ್ಳಿ ಶಿವಣ್ಣ, ಶರಣಪ್ಪ, ಮರಿಯಪ್ಪ, ದುರುಗಪ್ಪ, ಉಮಾಪತಿ ಇನ್ನಿತರರಿದ್ದರು.

Leave a Reply

Your email address will not be published.