ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ

ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ

ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಅದನ್ನು ಒತ್ತಿ (ಪ್ರೆಸ್ ಮಾಡಿ) ಬೇಲ್ ಮಾಡಿ, ಅದನ್ನು ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು. ಮುಂಬೈನಿಂದ ಬಂದ ಪಾರ್ಸಿ ಕುಟುಂಬದವರು ದಾವಣಗೆರೆಯಲ್ಲಿ ಹತ್ತಿಯನ್ನು ಅರಳೆ ಮಾಡಿ, ಬೇಲು ಮಾಡುವ ಜಿನ್ನಿಂಗ್ ಫ್ಯಾಕ್ಟರಿ `ಬಿಲಿ ಮೊರಿಯಾ ಪ್ರೆಸ್’ ಎಂಬ ಹೆಸರಿನಲ್ಲಿ ಮಾಡಿದ್ದರು. ಇಲ್ಲಿಂದ ಹತ್ತಿ ಬೇಲುಗಳನ್ನು ತನ್ನ ಎತ್ತಿನ ಬಂಡಿಗೆ ಹೇರಿಕೊಂಡು ರೈಲ್ವೇ ಗೂಡ್ಸ್‌ ಶೆಡ್‌ಗೆ ತಲುಪಿಸುವ `ಹುಂಡೇಕಾರಿ’ ಕಾಯಕ ಮಾಡುತ್ತಿದ್ದ ಸಹೋದರರಲ್ಲಿ ಚಿಗಟೇರಿ ಮುರಿಗೆಪ್ಪನವರೂ ಒಬ್ಬರು. ಹೆಚ್ಚೇನೂ ಓದಿರದಿದ್ದರೂ ತುಂಬಾ ಮುಂದಾಲೋಚನೆಯ ಚಾಣಾಕ್ಷ ಮುರಿಗೆಪ್ಪನವರು ತಾನೇ ಏಕೆ ಹತ್ತಿ ಖರೀದಿಸಿ ಪ್ರೆಸ್ಸಿಂಗ್ ಮಾಡಬಾರದೆಂದು ಯೋಚಿಸಿ, ತಮ್ಮ ಅಕ್ಕನ ಸಂಬಂಧಿಯೊಬ್ಬರಿಂದ 30 ಸಾವಿರ ರೂ. ಸಾಲ ಪಡೆದು, ಹತ್ತಿ ಖರೀದಿ ಆರಂಭಿಸಿ, ಅರಳೆ ಮತ್ತು ಪ್ರೆಸ್ಸಿಂಗ್ ಬೇಲು ಮಾಡಿಸಿ, ಸುಪ್ರಸಿದ್ದ ಕೈಗಾರಿಕೋದ್ಯಮಿ `ಟಾಟಾ’ ರವರ ಸಂಬಂಧಿಗಳಿಗೆ ಮುಂಬೈಗೆ ಇದೇ ರೈಲ್ವೇ ಗೂಡ್ಸ್ ಮುಖಾಂತರ ಕಳಿಸುವುದರಿಂದ ಆರಂಭಿಸಿ, ಮುಂದೆ `ಕಾಟನ್ ಮ್ಯಾಗ್ನೆಟ್ ಆಫ್ ಕರ್ನಾಟಕ’ ಎಂಬ ಖ್ಯಾತಿಗೂ ಪಾತ್ರರಾಗಿ, ಶ್ರೀಮಂತ ವಣಿಕ, ಕೈಗಾರಿಕೋದ್ಯಮಿಯೂ ಆಗಿ ಬೆಳೆದು, ದಾವಣಗೆರೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ದಾನಿಗಳಾಗಿ, ಈ ಆಸ್ಪತ್ರೆಯ ಶಂಕು ಸ್ಥಾಪನೆಗೆ ಮೈಸೂರಿನ ಮಹಾರಾಜರನ್ನು ಆಹ್ವಾನಿಸಿ, ವಿಶೇಷ ರೈಲಿನಲ್ಲಿ ರಾಜರು ದಾವಣಗೆರೆಗೆ ಬಂದಾಗ, ಯಾವ ರೈಲ್ವೇ ಗೂಡ್ಸ್ ಶೆಡ್‌ಗೆ ತಾನು ಎತ್ತಿನ ಗಾಡಿ  ಹೊಡೆದುಕೊಂಡು ಹೋಗುತ್ತಿದ್ದನೋ ಅದೇ ರೈಲ್ವೇ ನಿಲ್ದಾಣದ ಮುಂದೆ ಶ್ರೀಮನ್ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರರನ್ನು ಬರಮಾಡಿಕೊಂಡು, ಅವರಿಂದಲೇ
`ಧರ್ಮ ಪ್ರಕಾಶ’ ಎಂಬ ಬಿರುದಿಗೂ ಪಾತ್ರರಾದವರು ಶ್ರೀಯುತ ಚಿಗಟೇರಿ ಮುರಿಗೆಪ್ಪನವರು. ಇವರ ಹೆಸರನ್ನು ದಾವಣಗೆರೆಯ ರೈಲ್ವೇ ನಿಲ್ದಾಣಕ್ಕಾಗಲೀ ಅಥವಾ ಬಾತಿಯ ಬಳಿ ಇರುವ ವಿಶಾಲವಾದ ರೈಲ್ವೆ ಗೂಡ್ಸ್‌ಶೆಡ್‌ಗಾಗಲೀ ನಾಮಕರಣ ಮಾಡುವುದು ಅತ್ಯಂತ ಸೂಕ್ತ.

ರೈಲ್ವೇ ವ್ಯಾಗನ್‌ಗಳ ಮೂಲಕ ದಾವಣಗೆರೆಯ ಜವಳಿಯೂ ದೇಶ, ವಿದೇಶಗಳಿಗೂ ರಫ್ತಾಗುವಂತೆ ಮಾಡಿದವರು :

ಇವರು ಮತ್ತಾರೂ ಅಲ್ಲ `ಧರ್ಮಪ್ರವರ್ತ’ ರಾಜನಹಳ್ಳಿ ಹನುಮಂತಪ್ಪನವರು, ರಾಜನಹಳ್ಳಿ ಭೀಮರಾಯಪ್ಪನವರು ರತ್ನ ಪಡಿ, ಚಿನಿವಾರ ವರ್ತಕರು, ಅವರ ಜ್ಯೇಷ್ಠ ಪುತ್ರ ರಾಜನಹಳ್ಳಿ ಹನುಮಂತಪ್ಪನವರು. ಇವರೂ ಹೆಚ್ಚೇನೂ ಓದಿದವರಾಗಿರದಿದ್ದರೂ ಮಹಾನ್ ಮೇಧಾವಿ. ದಾವಣಗೆರೆಯಿಂದ ಹತ್ತಿ ಅರಳೆ ರೈಲ್ವೇ ಗೂಡ್ಸ್ ಮೂಲಕ ಹೊರ ಹೋಗುವ ಬದಲು ಅದು ಇಲ್ಲೇ ನೂಲಾಗಿ, ಬಟ್ಟೆಯಾಗಿ ಹೊರರಾಜ್ಯ, ಹೊರ ದೇಶಗಳಿಗೆ ಹೋಗುವಂತಾದರೆ ಕ್ಷೇಮವೆಂಬ ಕನಸು ಕಂಡವರು ಸ್ವಾತಂತ್ರ್ಯ ಪೂರ್ವದಲ್ಲೇ 1933ರಲ್ಲಿ ಸಂಕಲ್ಪ ಮಾಡಿ, 1936 ರಲ್ಲಿ
ದಿ ದಾವಣಗೆರೆ ಕಾಟನ್ ಮಿಲ್ ಸ್ಥಾಪನೆ ಮಾಡಿ, ಸಾವಿರಾರು ಜನರಿಗೆ ಕೆಲಸ ಕೊಟ್ಟು ಅನ್ನದಾತರಾಗಿ, ಇಲ್ಲಿ ನೂಲು, ಬಟ್ಟೆ (ಜವಳಿ) ತಯಾರಿಸಿ, ಹೊರ ರಾಜ್ಯಗಳಿಗೆ ರೈಲ್ವೇ ವ್ಯಾಗನ್‌ಗಳ ಮೂಲಕ ಕಳಿಸಿದ್ದಷ್ಟೇ ಅಲ್ಲ, ಹೊರ ದೇಶಗಳಿಗೂ ಹಡಗುಗಳ ಮೂಲಕ ರಫ್ತಾಗುವಂತೆ ಮಾಡಿದವರು. ಮೈಸೂರು ಮಹಾರಾಜರುಗಳಾದ ಕೃಷ್ಣರಾಜೇಂದ್ರ ಒಡೆಯರು, ಕಂಠೀರವ ನರಸರಾಜೇಂದ್ರ ಒಡೆಯರು, ಶ್ರೀಮನ್ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರರನ್ನು ದಾವಣಗೆರೆಗೆ ಬರ ಮಾಡಿಕೊಂಡು, ತಮ್ಮ ನಿರಪೇಕ್ಷ ದಾನಗಳಿಂದಾಗಿ `ಧರ್ಮ ಪ್ರವರ್ತ’ ಎಂಬ ಬಿರುದು, ಗೌರವಗಳಿಗೂ ಪಾತ್ರರಾದವರು ಶ್ರೀಯುತ ರಾಜನಹಳ್ಳಿ ಹನುಮಂತಪ್ಪನವರು. ಇವರ ಹೆಸರನ್ನೂ ದಾವಣಗೆರೆ ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡುವುದು
ಅತ್ಯಂತ ಸೂಕ್ತ.

ದಾವಣಗೆರೆಯು `ದಾನಿಗಳ ತವರೂರು’, `ಕರ್ನಾಟಕದ ಮ್ಯಾಂಚೆಸ್ಟರ್’, `ಶಿಕ್ಷಣ ಗಂಗೆ’ ಎಂದೆಲ್ಲಾ ಖ್ಯಾತವಾಗಲು ರಾಜನಹಳ್ಳಿ ಹನುಮಂತಪ್ಪ, ಚಿಗಟೇರಿ ಮುರಿಗೆಪ್ಪ ರಂತಹವರ ಪಾತ್ರ ಮಹತ್ತರವಾಗಿದೆ. ಇವರೀರ್ವರ ಹೆಸರುಗಳನ್ನೂ ಒಂದೇ ರೈಲ್ವೇ ನಿಲ್ದಾಣಕ್ಕೆ ಇಡಲಾಗದಿದ್ದ ಪಕ್ಷದಲ್ಲಿ, ನಿಲ್ದಾಣಕ್ಕೆ ಹನುಮಂತಪ್ಪನವರ ಹೆಸರನ್ನು, ವಿಶಾಲವಾದ ರೈಲ್ವೇ ಗೂಡ್ಸ್ ಶೆಡ್‌ಗೆ ಚಿಗಟೇರಿ ಮುರಿಗೆಪ್ಪನವರ ಹೆಸರನ್ನು ನಾಮಕರಣ ಮಾಡಬಹುದು.

ದಾವಣಗೆರೆ ರೈಲ್ವೇ – ಅಂದು

ದಾವಣಗೆರೆಯಲ್ಲಿ ನೂತನ ರೈಲ್ವೇ ನಿಲ್ದಾಣವು ಸರ್ವಾಂಗ ಸುಂದರವಾಗಿ, ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಈ ಸಂದರ್ಭದಲ್ಲಿ ದಾವಣಗೆರೆಯ ರೈಲ್ವೇ ಕುರಿತಾದ ತುಸು ಸ್ವಾರಸ್ಯಕರ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುವೆ.

ಭಾರತದಲ್ಲಿ ರೈಲ್ವೇಯ ಚಿಂತನೆ 1832ರಲ್ಲೇ ಆರಂಭವಾದದ್ದು. 1835-36ರ ಸುಮಾರಿಗೆ ಪ್ರಯೋಗ ನಡೆಸಲಾಯ್ತು. 1837ರಲ್ಲಿ ಸರಕು ಸಾಗಣೆ ರೈಲು ಬಂಡಿ ಚಲನೆಯೊಂದಿಗೆ ಭಾರತದಲ್ಲಿ ರೈಲ್ವೇಗೆ ಆರಂಭ ಸಿಕ್ಕಿತು. 1853 ರಲ್ಲಿ ಪ್ರಥಮವಾಗಿ ಪ್ರಯಾಣಿಕರ ರೈಲು ಭಾರತದಲ್ಲಿ ಸಂಚಾರ ಆರಂಭಿಸಿತು.

ದಾವಣಗೆರೆ ಕುರಿತಾಗಿ ಹೇಳುವುದಾದರೆ 1868 ನೇ ಇಸವಿ ವೇಳೆಗೇ ಹರಿಹರದ ತುಂಗಭದ್ರಾ ನದಿ ಮೇಲೆ ರೈಲ್ವೇ ಸೇತುವೆ ನಿರ್ಮಾಣಗೊಂಡು, 1889 ರಲ್ಲಿ ಅಂದಿನ ಮೈಸೂರು ಮಹಾರಾಜರು ಹರಿಹರ-ಮೈಸೂರು ಮಾರ್ಗದ ರೈಲು ಸಂಚಾರವನ್ನು ಉದ್ಘಾಟಿಸಿದರೆಂದೂ ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಗಳೂರಿನ ಜೆ.ಎಂ.ಇಮಾಮ್ ಸಾಹೇಬರು ತಮ್ಮೊಂದು ಪುಸ್ತಕದಲ್ಲಿ ದಾಖಲಿಸಿದ ಪ್ರಕಾರ ಅಥವಾ ಉಲ್ಲೇಖಿಸಿದ ಪ್ರಕಾರ 1910 ರಲ್ಲಿ ಮೈಸೂರಿನ ಯುವರಾಜ ಕಂಠೀರವ ನರಸರಾಜ ಒಡೆಯರ ವಿವಾಹಕ್ಕೆ ತೆರಳಲು ಇಮಾಂ ಸಾಹೇಬರು ತಮ್ಮ ದೊಡ್ಡಪ್ಪರೊಂದಿಗೆ ಜಗಳೂರಿನಿಂದ ಎತ್ತಿನ ಗಾಡಿಯಲ್ಲಿ ದಾವಣಗೆರೆಗೆ ಬಂದು, ಕೊಡಗನೂರು ಮುಖಾಂತರ ರೈಲಿನಲ್ಲಿ ಮೈಸೂರಿಗೆ ತೆರಳಿದ್ದನ್ನು ಪ್ರಸ್ತಾಪಿಸಿದ್ದಾರೆ.

1940ರ ಇಸವಿ ವೇಳೆಗೂ ದಾವಣಗೆರೆಯಲ್ಲಿ ರೈಲು ಟಿಕೆಟ್‌ಗಳನ್ನು ಆಗಿನ ತಂಬಾಕು ಪೇಟೆ, ಈಗಿನ ವಿಜಯಲಕ್ಷ್ಮಿ ರಸ್ತೆ ಬಳಿ ಇರುವ ರಾಜನಹಳ್ಳಿ ಮದ್ದೂರಾಯಪ್ಪನವರ ಅಂಗಡಿ ಕಟ್ಟೆ ಮೇಲೆ ಮತ್ತು ತರಕಾರಿ ಮಾರುಕಟ್ಟೆ ಬಳಿ ಇರುವ (ಚೌಡಾಂಬಿಕಾ ದೇವಸ್ಥಾನದ ಪಕ್ಕ) ಶಾಮನೂರು ಶ್ರೀನಿವಾಸ  ಶೆಟ್ಟರ (ಸೀನಪ್ಪ ಶೆಟ್ಟರ) ಅಂಗಡಿ ಕಟ್ಟೆ ಮೇಲೆ ರೈಲು ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. (ಕೊಡಲಾಗುತ್ತಿತ್ತು) ಎಂದು ತಿಳಿದು ಬರುತ್ತದೆ.

ಆಗಿನ ರೈಲ್ವೇ ನಿಲ್ದಾಣವು ಸಾಂಪ್ರದಾಯಿಕವಾದ, ಕಮಾನು ಬಾಗಿಲಿನ ಮಂಗಳೂರು ಹೆಂಚಿನ ಚಿಕ್ಕ ಕಲ್ಲು ಕಟ್ಟಡವು ದಾವಣಗೆರೆ ರೈಲ್ವೇ ಹಳಿಯ ಉತ್ತರ ಭಾಗದಲ್ಲಿತ್ತು. ನಾನು ಬಾಲಕನಾಗಿದ್ದಾಗ ಕಂಡಿರುವೆ.

1950 ರವರೆಗೂ ಪಾವಟಿಗೆಗಳ ಸೇತುವೆ ಮುಖಾಂತರ ರೈಲ್ವೇ ಲೈನಿನ ಆಚೀಚೆ ಓಡಾಡಬೇಕಿತ್ತು. ಬಾರ್‌ಲೈನ್‌ ರೋಡ್ (ಈಗಿನ ವಸಂತ ಟಾಕೀಸ್) ಕಡೆಯಿಂದ ಕೆಳ ಸೇತುವೆ (ಅಂಡರ್‌ಬ್ರಿಡ್ಜ್) ಹಾಗೂ ಆಗಿನ ಸುಭಾಷ್‌ರೋಡ್ (ಈಗಿನ ಅಶೋಕ ಟಾಕೀಸ್) ಕಡೆಯಿಂದ ಲೆವೆಲ್ ಕ್ರಾಸಿಂಗ್ ವ್ಯವಸ್ಥೆಯಾಯಿತು.

ದಾವಣಗೆರೆ ರೈಲ್ವೇ ನಿಲ್ದಾಣದ ಎದುರು ಅಂದರೆ ಈಗಿನ ಹೆಡ್‌ಫೋಸ್ಟ್ ಆಫೀಸು ಇರುವ ಜಾಗದಲ್ಲಿ ಬಸ್ ನಿಲ್ದಾಣ, ಅದರ ಪಕ್ಕದಲ್ಲಿ ಗಡಿಯಾರ ಕಂಬದ ಸಮೀಪ ಟಾಂಗಾ (ಕುದುರೆ ಜಟಕಾ) ಸ್ಟ್ಯಾಂಡ್ ನಾನೂ ಚಿಕ್ಕವನಿದ್ದಾಗ ಇದ್ದವು. ಆಗ ರೈಲು ಮಾರ್ಗ ದಾವಣಗೆರೆ ಊರ ಹೊರಗೆ ಹಾದು ಹೋಗಿದೆ ಎನ್ನುವಂತಿದ್ದದ್ದು, ಈಗ ದಾವಣಗೆರೆ ಮಹಾನಗರದ ಮಧ್ಯದಿಂದ ಹಾದು ಹೋಗಿದೆ ಎನ್ನುವಂತಾಗಿದೆ.

ದಾವಣಗೆರೆ ರೈಲು ನಿಲ್ದಾಣದ ಉತ್ತರ ಹೊರಭಾಗದಿಂದ ದಕ್ಷಿಣದ ಹೊರ ಭಾಗದ ಕಡೆಗೆ ಪಾದ ಚಾರಿಗಳು ಚಲಿಸಲು ನಿಲ್ದಾಣದ ಪಶ್ಚಿಮ ದಿಕ್ಕಿನಲ್ಲಿ ಒಂದು ಓವರ್ ಬ್ರಿಡ್ಜ್ ಇದ್ದರೆ ನಿಲ್ದಾಣದ ಒಳಗೆ ಆಚೀಚೆ ಫ್ಲಾಟ್‌ಫಾರಂಗೆ ಹೋಗಿ ಬರಲು ನಿಲ್ದಾಣದ ಒಳಗೆ ಪೂರ್ವ ದಿಕ್ಕಿನ ಕಡೆಗೆ (ಈಗಿನ ಅಂಡರ್‌ ಬ್ರಿಡ್ಜ್ ಮೇಲೆ) ಓವರ್ ಬ್ರಿಡ್ಜ್ ಒಂದು ಇತ್ತು.

ಈಗಿನ ಮಂಡಿಪೇಟೆಯ ದಕ್ಷಿಣದ ಹಿಂಭಾಗ ವೆಲ್ಲಾ ಗೂಡ್ಸ್‌ಶೆಡ್ ಆಗಿದ್ದು, ಮಂಡಿಪೇಟೆಯ ಉತ್ತರ ದಿಕ್ಕಿನ ಸಮಾನಾಂತರ ರಸ್ತೆಯು ಈಗ ಹರ್ಡೇಕರ್ ಮಂಜಪ್ಪ ರಸ್ತೆಯಾಗಿದ್ದರೆ ಆಗ ಈ ರಸ್ತೆಯ ಪೂರ್ವ ಭಾಗ  `ಬಿನ್ನಿ ಕಂಪನಿ ರಸ್ತೆ’ಯಾಗಿದ್ದರೆ ಪಶ್ಚಿಮ ಭಾಗವು `ಗೂಡ್ಸ್ ಶೆಡ್‌ ರಸ್ತೆ’.

ಆಗ ಈಗಿನಂತೆ ಬ್ರಾಡ್‌ಗೇಜ್‌ ಹಳಿ ಅಲ್ಲ. ಮೀಟರ್ ಗೇಜ್, ಇಂಜಿನ್ ಸಹಾ ಈಗಿನಂತೆ ಡೀಸೆಲ್‌ ಅಲ್ಲ. ಕಲ್ಲಿದ್ದಲು ಉಗಿಬಂಡಿ. ಅಶೋಕ ಟಾಕೀಸು ಬಳಿಯ ಲೆವೆಲ್ ಕ್ರಾಸಿಂಗ್ ಕಡೆಯಿಂದ ಅಲ್ಲಿನ ಈಶಾನ್ಯ ದಿಕ್ಕಿನಲ್ಲಿದ್ದ ಬಿ.ಟಿ (ಬ್ರಹ್ಮಪ್ಪ, ತವನಪ್ಪನವರ) ಮಿಲ್‌ಗೆ ಕಚ್ಛಾ ಸಾಮಗ್ರಿ ಒಳಹೋಗಲು, ಉತ್ಪಾದಿತ ಮಾಲು ಹೊರತರಲು ನಿರಂತರ ರೈಲ್ವೇ ವ್ಯಾಗನ್‌ಗಳು ಹೋಗಿ ಬರಲು ಪ್ರತ್ಯೇಕ ರೈಲ್ವೇ ಕ್ರಾಸ್ ಲೈನೇ ಇತ್ತು.


ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ.