ರೈಲ್ವೇ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರಿಡಿ

ರೈಲ್ವೇ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರಿಡಿ

ದಾವಣಗೆರೆ, ಮಾ.30- ದಾವಣಗೆರೆ ಸರ್ವಾಂಗೀಣ ಬೆಳವಣಿಗೆಯನ್ನು ಕಾಣುವಂತಾಗಲು ರಾಜನಹಳ್ಳಿ ವಂಶಸ್ಥರ ಕೊಡುಗೆ ಅಪಾರವಾಗಿದ್ದು, ದಾನಿಗಳಾದ ರಾಜನಹಳ್ಳಿ ಹನುಮಂತಪ್ಪನವರ ಹೆಸರನ್ನು ನೂತನವಾಗಿ ನಿರ್ಮಾಣವಾಗಿ ರುವ ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ದಾವಣಗೆರೆ ಕನ್ನಡಪರ ಹೋರಾಟಗಾರರು ಮನವಿ ಮಾಡಿದ್ದಾರೆ.

ಕರ್ನಾಟಕದ ಮ್ಯಾಂಚೆಸ್ಟರ್ ದಾವಣಗೆರೆ ಎಂಬ ಕೀರ್ತಿಗೆ ರಾಜನಹಳ್ಳಿ ಹನುಮಂತಪ್ಪನವರು ಮುಖ್ಯ ಕಾರಣಕರ್ತರು. ದಾವಣಗೆರೆ ಸುತ್ತಲಿನ ಹಲವು ಜಿಲ್ಲೆಗಳ ವ್ಯಾಪಾರದ ಮುಖ್ಯ ಕೇಂದ್ರವಾಗಿದ್ದು, ಹತ್ತಿ  ಬೆಳೆ ಪ್ರಮುಖವಾಗಿತ್ತು. ಹನುಮಂತಪ್ಪನವರ ದಿಟ್ಟ ಸಾರಥ್ಯದಲ್ಲಿ ದಿ ದಾವಣಗೆರೆ ಕಾಟನ್ ಮಿಲ್ ಆರಂಭವಾಯಿತು. 

ಇಲ್ಲಿ ತಯಾರಾದ ಬಟ್ಟೆ ದೇಶ ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿತು. ದುಡಿಯುವ ಸಹಸ್ರಾರು ಕೈಗಳಿಗೆ ಕೆಲಸ ನೀಡಿದ ಹನುಮಂತಪ್ಪನವರು, ಸಂಪಾದನೆಯ ಬಹುಭಾಗವನ್ನು ದಾನ, ಧರ್ಮಗಳಿಗೆ ವಿನಿಯೋಗಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ ಎಂದು ಕನ್ನಡ ಪರ ಹೋರಾಟಗಾರರು, ಕರ್ನಾಟಕ ಜನಮನ ವೇದಿಕೆ ಸಂಸ್ಥಾಪಕ ಅಧ್ಯಕ್ಷರೂ ಆದ ನಾಗೇಂದ್ರ ಬಂಡೀಕರ್ ತಿಳಿಸಿದರು.

ವಿವಿಧ ಉದ್ಯಮಗಳನ್ನು ಹೊಂದಿದ್ದ ರಾಜನಹಳ್ಳಿ ಮನೆತನ ದಾನ ಮಾಡುವ ವಿಚಾರದಲ್ಲಿ ಜನಜನಿತ. ಅಗತ್ಯಕ್ಕೆ ತಕ್ಕಂತೆ ಧರ್ಮ ಛತ್ರಗಳು, ಶವ ಸಂಸ್ಕಾರಕ್ಕಾಗಿ ಬೃಂದಾವನ ನಿರ್ಮಾಣ, ಬಡವರ ಶವ ಸಂಸ್ಕಾರಕ್ಕೆ ಅಂದಿನ ದಿನಗಳಲ್ಲಿ ಬೇಕಾದ ಸಲಕರಣೆಗಳನ್ನು ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರೆದವರು.

ಹೀಗೆ ದಾವಣಗೆರೆಯ ಸಕಲ ಬೆಳವಣಿಗೆಗೂ ರಾಜನಹಳ್ಳಿ ವಂಶಸ್ಥರ ಕೊಡುಗೆ ಅಪಾರವಾದದ್ದು. ದಾನಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ರಾಜನಹಳ್ಳಿ ಹನುಮಂತಪ್ಪನವರು. ಅವರಿಗೆ ಇದುವರೆಗೂ ಯಾವುದೇ ರೀತಿಯ ಪೌರ ಗೌರವ ದೊರೆಯದೇ ಹೋಗಿರುವುದು ದುರ್ದೈವದ ಸಂಗತಿಯಾಗಿದೆ. 

ಸಂಸದ ಜಿ.ಎಂ. ಸಿದ್ದೇಶ್ವರ್  ಹಾಗೂ ರೈಲ್ವೇ ಸಚಿವರ ಕಾಳಜಿಯಿಂದ ದಾವಣಗೆರೆಯಲ್ಲಿ ಒಂದು ಸುಸಜ್ಜಿತ ರೈಲ್ವೇ ನಿಲ್ದಾಣ ರೂಪುಗೊಂಡಿದ್ದು, ನಿಲ್ದಾಣಕ್ಕೆ ಶ್ರೀ ರಾಜನಹಳ್ಳಿ ಹನುಮಂತಪ್ಪನವರ ಹೆಸ ರನ್ನು ನಾಮಕರಣ ಮಾಡುವ ಮೂಲಕ ನಗರದ ಘನತೆಯನ್ನು ಹೆಚ್ಚಿಸಲು ಸಹಕರಿಸಬೇಕೆಂದು ಬಂಡೀಕರ್ ನೇತೃತ್ವದಲ್ಲಿ ಕನ್ನಡಪರ ಹೋರಾಟ ಗಾರರು ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜೈ ಕರುನಾಡ ವೇದಿಕೆ ಜಿಲ್ಲಾಧ್ಯಕ್ಷ ಟಿ. ಮಂಜುನಾಥಗೌಡ, ಯುವ ಘಟಕದ ಅಧ್ಯಕ್ಷ ಹೆಚ್. ಪರಶುರಾಮ್ ನಂದಿಗಾವಿ, ಕನ್ನಡಪರ ಹೋರಾಟಗಾರ ಟಿ.ಎಂ. ಶಿವಯೋಗಿಸ್ವಾಮಿ ಇನ್ನಿತರರಿದ್ದರು.

Leave a Reply

Your email address will not be published.