ದಾವಣಗೆರೆ, ಮಾ.30- ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕುರಿ, ಮೇಕೆಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಆರೋಪಿ ಸೇರಿ ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಸಜೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಹಿರೇಕೆರೂರು ವಿಜಯನಗರದ ರವಿ ಅಲಿಯಾಸ್ ಯಲ್ಲಪ್ಪ ಅಲಿಯಾಸ್ ಶಿವು, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಿಹಳ್ಳಿಯ ಚಿರಂಜೀವಿ ಅಲಿಯಾಸ್ ಗಾಳೆಪ್ಪ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಆರೋಪಿ ಬಂಧಿತರು.
ಮೇ 31,2018 ರಂದು ಬೆಳಗಿನ ಜಾವ ಸುಮಾರು 2-30 ಗಂಟೆ ಸಮಯದಲ್ಲಿ ಚನ್ನಗಿರಿ ತಾಲ್ಲೂಕಿನ ಯಲೋದಹಳ್ಳಿಯ ಪ್ರಕಾಶ್ ಎಂಬುವರ ಬಾತು ಕೋಳಿ ಫಾರಂನ ಮುಂದೆ ಕಟ್ಟಿದ್ದ ಸುಮಾರು 15 ಸಾವಿರ ಮೌಲ್ಯದ ಒಂದು ಟಗರು , 20 ಸಾವಿರ ಮೌಲ್ಯದ 2 ದೊಡ್ಡ ಮೇಕೆ ಹಾಗೂ ಮೇಕೆ ಮರಿಗಳನ್ನು ಮೂವರು ಆರೋಪಿತರು ಕಳ್ಳತನ ಮಾಡಿಕೊಂಡು ಹೋಗಲು ಯತ್ನಿಸಿದ್ದಾರೆ. ಆಗ ಪ್ರಕಾಶ್ ಪ್ರತಿರೋಧ ತೋರಿದ್ದರಿಂದ ಆರೋಪಿತರು ಈತನಿಗೆ ಹಲ್ಲೆ ಮಾಡಿ, ಹೆದರಿಸಿ ಕುರಿ, ಮೇಕೆ ಹಾಗೂ ಮೇಕೆ ಮರಿಗಳನ್ನು ದರೋಡೆ ಮಾಡಿಕೊಂಡು ಬೈಕುಗಳಲ್ಲಿ ಸಾಗಿಸುತ್ತಿದ್ದರು. ಆಗ ಸಂತೆಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ್ ಆರೋಪಿತರನ್ನು ಮಾಲು ಸಮೇತ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ, ಬಸವಾಪಟ್ಟಣ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದರು. ಅಲ್ಲಿಯ ಪಿ.ಎಸ್.ಐ ಮೇಘರಾಜ್ ಹಾಗೂ ಸಿಪಿಐ ಗಜೇಂದ್ರಪ್ಪ ತನಿಖೆ ನಡೆಸಿ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಕೆಂಗಬಾಲಯ್ಯ ಆರೋಪಿತರಿಗೆ ಶಿಕ್ಷೆ, ದಂಡ ವಿಧಿಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಅವಧಿಯನ್ನು ಸೆಟ್ ಆಫ್ ಮಾಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ವಾದ ಮಂಡಿಸಿದ್ದರು.
Leave a Reply