ತರಗನಹಳ್ಳಿ ಬಸವೇಶ್ವರ ರಥೋತ್ಸವ

ತರಗನಹಳ್ಳಿ ಬಸವೇಶ್ವರ ರಥೋತ್ಸವ

ಹೊನ್ನಾಳಿ, ಮಾ.26- ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ  ಶ್ರೀ ಬಸವೇಶ್ವರ ದೇವರ ರಥೋತ್ಸವ ಮತ್ತು ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿತು. 

ವೀರಗಾಸೆ ಕಲಾವಿದರ ನೃತ್ಯ, ವಿವಿಧ ವಾದ್ಯಮೇಳ ಗಳ ಮಂಗಳಘೋಷ ರಥೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿದವು. ಅಲಂಕೃತ ರಥಕ್ಕೆ ಭಕ್ತರು ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ರಥ ಮುಂದಕ್ಕೆ ಚಲಿಸಿದ ನಂತರ ಭಕ್ತರು ನೆಲದ ಮೇಲೆ ಬಿದ್ದ ಮೆಣಸಿನ ಕಾಳುಗಳನ್ನು ಆಯ್ದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಮಧ್ಯಾಹ್ನ 3ಕ್ಕೆ ಗ್ರಾಮದಲ್ಲಿ ಬೆಲ್ಲದ ಬಂಡಿ ಮೆರವಣಿಗೆ ನಡೆಯಿತು. ನಂತರ ಓಕಳಿ ಆಡಲಾಯಿತು. ಸಂಜೆ 7ಕ್ಕೆ ಶ್ರೀ ಬಸವೇಶ್ವರ ದೇವರ ಹೂವಿನ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿತು. ಗುರುವಾರ ಬೆಳಿಗ್ಗೆ ಸಣ್ಣ ತೇರು (ಉಚ್ಛಾಯ ಮಹೋತ್ಸವ) ರಾಜ ಬೀದಿಗಳಲ್ಲಿ ನಡೆಯಿತು. ಅಂದು ಗ್ರಾಮದ ಮುತ್ತೈದೆಯರು ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ತೆರಳಿ ಬಾಯಿ ಬೀಗ ಸೇವೆ ಸಲ್ಲಿಸಿದರು. ಮುತ್ತೈದೆಯರು, ಮಕ್ಕಳು ಉರುಳು ಸೇವೆ ಸಮರ್ಪಿಸಿದರು. 

ಹರಕೆ ಹೊತ್ತ ಭಕ್ತರು ಒಣ ಕೊಬ್ಬರಿ ಸುಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಶ್ರೀ ಬಸವೇಶ್ವರ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಸದಸ್ಯರಾದ ಟಿ.ಜಿ. ರಮೇಶ್‍ಗೌಡ, ಹೊಳೆಬಸಪ್ಪ, ದಾಸಪ್ಪರ ಮಹೇಶ್ವರಪ್ಪ, ಕೆ.ಸಿ. ಪ್ರಭಾಕರ್, ಚಂದ್ರಪ್ಪ, ತಿಮ್ಲಾಪುರ ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ ಎ.ಕೆ. ರಾಜು, ಸದಸ್ಯ ಶೇಖರಪ್ಪ, ಯುವ ಮುಖಂಡ ಎನ್. ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಟಿ.ಜಿ. ಅರುಣ್‍ಕುಮಾರ್ ಮತ್ತು ಟಿ.ಜಿ. ಜಗದೀಶ್ ಅವರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸೇವೆ ಸಮರ್ಪಿಸಿದರು.