ಮಲೇಬೆನ್ನೂರು ಪುರಸಭೆ : 55,73,313 ರೂ. ಉಳಿತಾಯ ಬಜೆಟ್ ಮಂಡನೆ

ಮಲೇಬೆನ್ನೂರು ಪುರಸಭೆ : 55,73,313 ರೂ. ಉಳಿತಾಯ ಬಜೆಟ್ ಮಂಡನೆ

ಮಲೇಬೆನ್ನೂರು, ಮಾ.2- ಸ್ಥಳೀಯ ಪುರಸಭೆಯ  2021-22 ನೇ ಸಾಲಿನ ಆಯವ್ಯಯ ಸಭೆ, ಪುರಸಭೆ ಅಧ್ಯಕ್ಷೆ ನಾಹಿದ ಅಂಜುಂ ಸೈಯ್ಯದ್ ಇಸ್ರಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಜರುಗಿತು.

ಅಧ್ಯಕ್ಷರ ಪರವಾಗಿ ಬಜೆಟ್ ಮಂಡಿಸಿದ ಮುಖ್ಯಾಧಿಕಾರಿ ಉದಯಕುಮಾರ್ ಬಿ. ತಳವಾರ, ಈ ಸಾಲಿನಲ್ಲಿ ಪುರಸಭೆಗೆ ಬರುವ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಯೋಜನೆಯನ್ನು ರೂಪಿಸಿರುವ 55,73,313 ಲಕ್ಷ ರೂ.ಗಳ ಉಳಿತಾಯ ಬಜೆಟ್ ಇದಾಗಿದೆ ಎಂದರು.

ನಿರೀಕ್ಷಿತ ಆದಾಯ: 2021-2022 ನೇ ಸಾಲಿಗೆ ಪುರಸಭೆಗೆ ಮನೆ ಕಂದಾಯ 51 ಲಕ್ಷ ರೂ. ನೀರಿನ ತೆರಿಗೆ 12 ಲಕ್ಷ ರೂ. ಟ್ರೇಡ್ ಲೈಸೆನ್ಸ್ 4.50 ಲಕ್ಷ ರೂ. ಜಾಹೀರಾತು ಶುಲ್ಕ 2 ಲಕ್ಷ ರೂ. ಪುರಸಭೆಯ ಮಳಿಗೆ ಹರಾಜು 9 ಲಕ್ಷ ರೂ., ಕಟ್ಟಡ ಪರವಾನಿಗೆ ಶುಲ್ಕ 5.50 ಲಕ್ಷ ರೂ., ಸಂತೆ ಹರಾಜು ಮೊತ್ತ 9 ಲಕ್ಷ ರೂ., ನೆಲಬಾಡಿಗೆ 2 ಲಕ್ಷ ರೂ. ಇತರೆ ಆದಾಯ 15 ಲಕ್ಷ ರೂ ಮತ್ತು ಅಸಾಮಾನ್ಯ ಆದಾಯ 2.57 ಕೋಟಿ ರೂ. ಗಳಲ್ಲದೆ, ಇತರೆ ಎಲ್ಲಾ ಮೂಲಗಳಿಂದ 5.17 ಕೋಟಿ ರೂ. ಗಳನ್ನು ಸೇರಿ ಒಟ್ಟು 8.84 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

ಸರ್ಕಾರದ ನಿರೀಕ್ಷೆ: ಪುರಸಭೆಗೆ ಈ ಸಾಲಿಗೆ ಎಸ್‌ಎಫ್‌ಸಿ ಮುಕ್ತ ನಿಧಿ 2 ಕೋಟಿ ರೂ., 14 ಮತ್ತು 15 ನೇ ಹಣಕಾಸು ಅನುದಾನ 2 ಕೋಟಿ ರೂ., ಶಾಸಕರ ಹಾಗೂ ಸಂಸದರ ಅನುದಾನ 2 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುಚ್ಛಕ್ತಿ ಅನುದಾನ 1 ಕೋಟಿ ರೂ., ಎಸ್‌ಎಫ್‌ಸಿ ವೇತನ ಅನುದಾನ 10 ಲಕ್ಷ ರೂ. ಎಸ್‌ಸಿಎಸ್‌ಟಿ/ಟಿಎಸ್‌ಪಿ ಅನುದಾನ 40 ಲಕ್ಷ ರೂ., ಡೇ-ನಲ್ಮ್ ಯೋಜನೆ ಅನುದಾನ 9 ಲಕ್ಷ ರೂ. ಗಳಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಶೇಷ ಅನುದಾನ ಮತ್ತು ಇತರೆ ಎಲ್ಲಾ ಹೆಚ್ಚುವರಿಯಿಂದ ಬರಬಹುದಾದ ಅನುದಾನ 13.34 ಕೋಟಿ ರೂ. ಸೇರಿ ಒಟ್ಟು 33.08 ಕೋಟಿ ರೂ.ಗಳ ಅನುದಾನಗಳನ್ನು ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಉದಯಕುಮಾರ್ ಹೇಳಿದರು.

ಆದ್ಯತೆ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗಾಗಿ 1.25 ಕೋಟಿ ರೂ. ಘನತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಡಿಪಿಆರ್ ತಯಾ ರಿಕೆ ಹಂತದಲ್ಲಿದ್ದು, ಮುಂದಿನ 2 ವರ್ಷ ಗಳಲ್ಲಿ ಪಟ್ಟಣವನ್ನು ಹಂತ ಹಂತವಾಗಿ ನೈರ್ಮಲ್ಯ ಹಾಗೂ ಸುಂದರ ಪಟ್ಟಣವನ್ನಾಗಿ ಮಾರ್ಪಡಿಸಲು ಶ್ರಮ ವಹಿಸಲಾಗುವುದು.

ಘನತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದಂತೆ ವಾಹನಗಳ ನಿರ್ವಹಣೆಗಾಗಿ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮಗಳಿಗಾಗಿ 60 ಲಕ್ಷ ರೂ. ಮೀಸಲಿರಿಸಲಾಗಿದೆ. ಬೀದಿ ದೀಪಗಳ ಅಳವಡಿಕೆ ಮತ್ತು ನಿರ್ವಹಣೆಗಾಗಿ 55 ಲಕ್ಷ ರೂ.ಗಳ ಅವಶ್ಯಕತೆ ಇದ್ದು, ರಸ್ತೆ, ಚರಂಡಿ ಮತ್ತು ಪಾದಚಾರಿ ರಸ್ತೆ ನಿರ್ಮಾಣ ಯೋಜನೆಗಳಿಗೆ 3 ಕೋಟಿ ರೂ. ಮತ್ತು ವಿವಿಧ ಜನಾಂಗಗಳ ಸ್ಮಶಾನಗಳ ಅಭಿವೃದ್ಧಿಗೆ 25.70 ಲಕ್ಷ ರೂ., ಮಾರುಕಟ್ಟೆ  ರಿಪೇರಿಗಾಗಿ 10 ಲಕ್ಷ ರೂ. ಹಾಗೂ ಎಸ್ಸಿ-ಎಸ್ಟಿ ಸೇರಿದಂತೆ ಇತರೆ ಸಾಮಾನ್ಯ ವರ್ಗದ ಅಂಗವಿಕಲರಿಗೆ, ಕ್ರೀಡಾ ಚಟುವಟಿಕೆಗಳಿಗೆ, ಸಾಲ ಸೌಲಭ್ಯಗಳಿಗೆ 40 ಲಕ್ಷ ರೂ.ಗಳು ಬೇಕಾಗುತ್ತದೆ ಎಂದರಲ್ಲದೆ, ಈ ಸಾಲಿನಲ್ಲಿ ಕೈಗೊಳ್ಳಲಾಗುವ ಯೋಜನೆಗಳನ್ನು ವಿವರಿಸಿದರು.

ಈ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡು ಈ ಸಾಲಿನಲ್ಲಿ ಕಳೆದ ವರ್ಷದ ಶಿಲ್ಕು 26,43,313 ರೂ., 33,08,24,000 ರೂ. ರಾಜಸ್ವ ಜಮಾ ಸೇರಿ ಒಟ್ಟು 33,34,67,313 ರೂ. ಜಮಾದಲ್ಲಿ ರಾಜಸ್ವ ಖರ್ಚು 32,78,94,000 ರೂ.ಗಳನ್ನು ತೆಗೆದು 55,73,313 ರೂ.ಗಳ ಉಳಿತಾಯ ಬಜೆಟ್ ಇದಾಗಿರುತ್ತದೆ ಎಂದು ಅಂಕಿ-ಅಂಶಗಳನ್ನು ಸಭೆಗೆ ನೀಡಿ, ಸದಸ್ಯರಿಂದ ಅನುಮೋದನೆ ಪಡೆದುಕೊಳ್ಳಲಾಯಿತು.

ಚರ್ಚೆ: ಬಜೆಟ್ ಮಂಡನೆ ನಂತರ ಪುರಸಭೆ ಸದಸ್ಯ ಮಹಾಲಿಂಗಪ್ಪ ಅವರು, ಪಟ್ಟಣಕ್ಕೆ ಕನಿಷ್ಟ 30 ಪೌರ ಕಾರ್ಮಿಕರ ಅವಶ್ಯವಿದ್ದು, ಈಗ 16 ಪೌರ
ಕಾರ್ಮಿಕರು ಮಾತ್ರ ಇದ್ದಾರೆ. ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ತುಂಬಿಕೊಳ್ಳಲು ಕ್ರಮ ವಹಿಸಿ ಎಂದಾಗ ಇಲ್ಲಿಗೆ ಅವಶ್ಯವಿರುವ ಪೌರ ಕಾರ್ಮಿಕರ ಭರ್ತಿಗಾಗಿ ಡಿಸಿಯವ ರಿಗೆ ಪತ್ರ ಬರೆಯಲಾಗಿದೆ ಎಂದರು.

ಸದಸ್ಯ ಬಿ. ಸುರೇಶ್ ಹಂದಿಗಳ ಸ್ಥಳಾಂತರ, ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಆಗುತ್ತಿಲ್ಲ ಎಂದರು. ಹಂದಿಗಳನ್ನು ಪಟ್ಟಣದ ಹೊರವಲಯಕ್ಕೆ ಸಾಗಿಸಲು ಕನಿಷ್ಟ 2 ಎಕರೆ ಜಾಗ ನಿಗದಿ ಮಾಡಿ, ಸ್ಥಳಾಂತರ ಮಾಡಬೇಕು. ಹಾಗೂ ನಾಯಿಗಳ ಸಂತಾನ ಹರಣಕ್ಕೆ
ಸರ್ಕಾರ 545 ರೂ. ನಿಗದಿ ಮಾಡಿದೆ. ಆದರೆ ಇದಕ್ಕೆ ಯಾರೂ ಟೆಂಡರ್ ಹಾಕುತ್ತಿಲ್ಲ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್‌ ಸ್ವಾಮಿ  ಮಾತನಾಡಿ ಬಯಲು ಶೌಚಾಲಯ ಮುಕ್ತ ಪಟ್ಟಣ ಎಂದು ಘೋಷಿಸಲಾಗಿದ್ದರೂ  ಶೌಚಾಲಯಗಳಿಗೆ ಹಣ ಇಟ್ಟ ಬಗ್ಗೆ ಕೇಳಿದಾಗ, ಪಟ್ಟಣ ವಿಸ್ತಾರವಾಗುತ್ತಿರುವು ದರಿಂದ ಅನುದಾನ ನೀಡಬೇಕಾಗುತ್ತದೆ ಎಂದು ಉದಯಕುಮಾರ್ ಉತ್ತರಿಸಿದರು.

 ಪುರಸಭೆಯ ನಾಮಿನಿ ಸದಸ್ಯರಾದ ಹೆಚ್.ಜಿ. ಮಂಜಪ್ಪ, ಪಿ.ಆರ್. ರಾಜು, ಸೋಲಾರ್ ಬೀದಿ ದೀಪಗಳು ಸರಿಯಾಗಿ ಆನ್‌ ಆಗುತ್ತಿಲ್ಲ, ಚರಂಡಿ ಸ್ವಚ್ಛಗೊಳಿಸುವ ಬಗ್ಗೆ ದೂರು ಹೇಳಿದರು. ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಸದಸ್ಯರಾದ ಆರೀಫ್ ಅಲಿ, ಬಿ.ಎಂ. ಚನ್ನೇಶ್ ಸ್ವಾಮಿ, ಯೂಸುಫ್, ದಾದಾವಲಿ, ಬರ್ಕತ್‌ ಅಲಿ, ಮಾಸಣಗಿ ಶೇಖರಪ್ಪ, ಶಮೀಮ್ ಬಾನು, ಮಂಜುಳಾ, ಯಶೋಧ, ಕೆ.ಜಿ. ಲೋಕೇಶ್, ಶಶಿಕಲಾ ಕೇಶವಚಾರಿ, ಭೋವಿ ಕುಮಾರ್, ಸಾಕಮ್ಮ ರವಿಕುಮಾರ್, ನಾಮಿನಿ ಸದಸ್ಯರಾದ ಎ.ಕೆ. ಲೋಕೇಶ್, ಟಿ. ವಾಸಪ್ಪ,  ಪುರಸಭೆ ಅಧಿಕಾರಿಗಳಾದ ದಿನಕರ್, ಉಮೇಶ್, ಪ್ರಭು, ನವೀನ್, ಗಣೇಶ್, ಇಮ್ರಾನ್ ಇನ್ನಿತರರು ಸಭೆಯಲ್ಲಿದ್ದರು. ಹಿರಿಯ ಆರೋಗ್ಯಾಧಿಕಾರಿ ಗುರುಪ್ರಸಾದ್ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published.