ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ವಕೀಲರ ಆಗ್ರಹ

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ವಕೀಲರ ಆಗ್ರಹ

ವಕೀಲ ದಂಪತಿ ಹತ್ಯೆ ಖಂಡಿಸಿ ಜಿಲ್ಲಾ ವಕೀಲರ ಪ್ರತಿಭಟನೆ

ದಾವಣಗೆರೆ, ಫೆ.22- ದೇಶದಲ್ಲಿ ಹೆಚ್ಚುತ್ತಿರುವ ವಕೀಲರ ಮೇಲಿನ ಹಲ್ಲೆ ಮತ್ತು ಹತ್ಯಾ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಕೀಲರ ಸಂರಕ್ಷಣಾ ಕಾಯ್ದೆಯನ್ನು (ಎಪಿಎ) ಜಾರಿಗೆ ತರುವಂತೆ ಆಗ್ರಹಿಸಿ, ದಿ ಲಾ ಅಸೋಸಿಯೇಷನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ವಕೀಲರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ನಂತರ ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇದೇ ದಿನಾಂಕ 17 ರಂದು ತೆಲಂಗಾಣ ರಾಜ್ಯದಲ್ಲಿ ವಕೀಲ ದಂಪತಿ ಗಟ್ಟು ವಾಮನ್ ರಾವ್ ಮತ್ತು ಪಿ.ಬಿ. ನಾಗಮಣಿ ಅವರನ್ನು ಹಾಡಹಗಲೇ ನಡುರಸ್ತೆಯಲ್ಲಿ ದುಷ್ಕರ್ಮಿಗಳು ಭೀರಕವಾಗಿ ಕೊಲೆ ಮಾಡಿದ್ದು, ಘಟನೆ ನಡೆದ ವಾರಗಳೇ ಕಳೆಯುತ್ತಾ ಬಂದರೂ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆಯಲ್ಲದೇ ವಕೀಲರಿಗೆ ಸೂಕ್ತ ರಕ್ಷಣೆ ನೀಡುವಲ್ಲಿಯೂ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ಖಂಡಿಸಿದರು.

ದೇಶದಲ್ಲಿ ವಕೀಲರ ಮೇಲೆ ಹಲ್ಲೆಗಳು, ಹತ್ಯೆಗಳು, ಅಪಹರಣ, ನಿಂದನೆಗಳು ನಡೆಯುತ್ತಿರುವುದರಿಂದ ವಕೀಲರು ಭಯದ ವಾತಾವರಣದಲ್ಲಿ ವೃತ್ತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರ ಮನೋಬಲ ಹೆಚ್ಚಿಸಲು ಹಾಗೂ ವಕೀಲರಿಗೆ ಸೂಕ್ತ ರಕ್ಷಣೆ ನೀಡುವ ಸಲುವಾಗಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಅಸೋಸಿ ಯೇಷನ್ ಜಿಲ್ಲಾಧ್ಯಕ್ಷ ಡಿ.ಪಿ. ಬಸವರಾಜ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಬಿ.ಬಿ. ರಾಮಪ್ಪ, ಕಾರ್ಯದರ್ಶಿ ಲೋಕಿಕೆರೆ ಹೆಚ್. ಪ್ರದೀಪ್, ಜಂಟಿ ಕಾರ್ಯದರ್ಶಿ ಜಿ.ಕೆ. ಬಸವರಾಜು, ಸದಸ್ಯರಾದ ಕೆ. ಅಣ್ಣಪ್ಪ, ಬಿ. ಚಂದ್ರಪ್ಪ, ಚಂದ್ರಶೇಖರ್ ಪಟ್ಟಣ ಶೆಟ್ಟಿ, ಚಂದ್ರಶೇಖರ್ ಜೆ.ರಾಥೋಡ್, ಎ.ಹೆಚ್. ಕಿರಣ್, ಅನಿಸ್ ಪಾಷಾ, ಬಿ.ಸಿ. ಪ್ರಕಾಶ್, ಕುಮಾರಸ್ವಾಮಿ ಕೆ.ಕೆ. ರಂಗನಾಥ್, ವಿ.ಡಿ. ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published.