ದೇವನಗರಿಯ ರೋಹಿಣಿ ಐಆರ್‌ಎಸ್ ಯುವಪಡೆಗೆ ಸ್ಫೂರ್ತಿಯ ಸೆಲೆ

ದೇವನಗರಿಯ  ರೋಹಿಣಿ ಐಆರ್‌ಎಸ್ ಯುವಪಡೆಗೆ  ಸ್ಫೂರ್ತಿಯ ಸೆಲೆ

ದೂರದ ಊರಲ್ಲಿ ಅಚಾನಕ್‌ ಆಗಿ ನಮ್ಮೂರಿನ ಜನರು ಭೇಟಿಯಾದರೆ ಆಗುವ ಸಂತೋಷ ಅಪಾರ. ಅದರಲ್ಲೂ ತಮ್ಮ ಖಡಕ್ ವೃತ್ತಿ ಜೀವನದಲ್ಲಿ ಹಲವು ಯಶಸ್ವೀ ಕಾರ್ಯಾಚರಣೆಗಳ ಮೂಲಕ ಮನೆಮಾತಾಗಿರುವ ತವರೂರಿನ ಸಾಧಕರೊಬ್ಬರನ್ನು ಎದುರುಗೊಳ್ಳುವ ಸಂತೋಷಕ್ಕೆ ಪಾರವೇ ಇಲ್ಲ ಎನ್ನಬಹುದು.

ಅದು ಆಗಿದ್ದು ಇತ್ತೀಚೆಗಷ್ಟೇ. ಮೂಲತಃ ದಾವಣಗೆರೆಯವಳಾದ ನನಗೆ, ಮದ್ರಾಸ್ ವಿವಿ ಸಮಾರಂಭದಲ್ಲಿ ದಾವಣಗೆರೆಯವರಾದ ರೋಹಿಣಿ ದಿವಾಕರ್ ಐಆರ್‌ಎಸ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾತನಾಡುವ ಸುಯೋಗ ಒದಗಿಬಂತು. ನಾನು ಮೂಲತಃ ದಾವಣಗೆರೆಯವಳಾದರೂ  ಜೀವನದ ಅವಕಾಶಗಳು ಮತ್ತು ಆಯ್ಕೆಗಳು ನನ್ನನ್ನು ಚೆನ್ನೈಗೆ ಕರೆತಂದವು. ಇಲ್ಲಿನ ಎಸ್‌ಜಿಪಿಸಿ ಕಾಲೇಜಿನಲ್ಲಿ ಮಾನವ ವಿಜ್ಞಾನಗಳ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ.  

ಕಳೆದ ವಾರ ಮಹಿಳಾ ಸಬಲೀಕರಣ ಮತ್ತು ಅದರ ಭವಿಷ್ಯದ ಕುರಿತು ಮದ್ರಾಸ್ ವಿಶ್ವವಿದ್ಯಾಲಯವು ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಹಿಣಿ ದಿವಾಕರ್ ಐಆರ್ಎಸ್ ಅವರನ್ನು ನೋಡಿ ನನಗೆ ಹೆಮ್ಮೆಯಿಂದ ಎದೆ ತುಂಬಿ ಬಂತು. ಅವರು ನಮ್ಮೂರಿನ ರೂಪಾ ಐಪಿಎಸ್‌ ಅವರ ಸಹೋದರಿ ಎಂದು ನನಗೆ ತಿಳಿದಿದ್ದರೂ, ವೈಯಕ್ತಿಕವಾಗಿ ಅವರನ್ನು ಭೇಟಿಯಾಗುವುದು ಮತ್ತು ಮಾತನಾಡುವುದು ಒಂದು ಸಂತೋಷಕರ ಅನುಭವ ಎನಿಸಿತು.

ಮೊದಲ ಭೇಟಿಯಲ್ಲಿಯೇ ಅವರ ವಿನಮ್ರತೆಯಿಂದ ನಾನು ವಿಸ್ಮಯಗೂಂಡೆ. ದಾವಣಗೆರೆಯ ಈ ಪ್ರತಿಭೆ ತನ್ನ ಬೇರುಗಳ ಧ್ವಜವನ್ನು ಮತ್ತೊಂದು ಪ್ರದೇಶದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುವುದನ್ನು ನೋಡಿ ನನಗೆ ಹೆಮ್ಮೆ ಅನಿಸಿತು.  ತನ್ನ ಅಕ್ಕನಂತೆ, ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂಬ ಹೆಸರನ್ನು ಪಡೆದಿದ್ದಾರೆ ಎನ್ನುವುದು ಮತ್ತೂ ಖುಷಿಕೊಡುವ ವಿಷಯವಾಗಿತ್ತು.

ಅಂದು ರೋಹಿಣಿ ಅವರು ಮಾಡಿದ ಭಾಷಣ ಯುವಕರಿಗೆ ಮತ್ತು ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳಿಗೆ ತುಂಬಾ ಸ್ಫೂರ್ತಿದಾಯಕ ಮತ್ತು ಪ್ರೇರಣೆ ನೀಡಿತು. ಅವರ ಪ್ರೊಫೈಲ್ ಓದಿದ ನಂತರ ರೋಹಿಣಿಯವರ ವೃತ್ತಿಪರ ಸಾಧನೆಗಳ ಬಗ್ಗೆ ನನಗೆ ಹೆಚ್ಚು ತಿಳಿಯಿತು. ಇದು ನಿಜವಾಗಿಯೂ ನನಗೆ ಸ್ಪೂರ್ತಿದಾಯಕವಾಗಿತ್ತು. ರೂಪ-ರೋಹಿಣಿ ಅಂತಹ ಸಾಧಕಿಯರ   ಯಶೋಗಾಥೆ ನಮ್ಮೂರಿನ ಯುವಜನತೆಗೆ ಸ್ಫೂರ್ತಿ ನೀಡಿ ಅವರಂತೆ ಸಾಧಕರಾಗಿ ಹೊರ ಹೊಮ್ಮಲಿ ಎಂಬ ಆಶಯ ಈ ಬರವಣಿಗೆಗೆ ನಾಂದಿ ಹಾಡಿತು.

ರೋಹಿಣಿ ಅವರು ಬೆಂಗಳೂರಿನಲ್ಲಿ ಡೆಪ್ಯೂಟಿ ಕಮೀಷನರ್ ಆಫ್ ಇನ್‌ಕಂ ಟ್ಯಾಕ್ಸ್ ಆಗಿದ್ದ ಸಂದರ್ಭದಲ್ಲಿ, ಪ್ರಸಿದ್ಧ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕರ ಮೇಲೆ ಆದಾಯ ತೆರಿಗೆ ದಾಳಿ ಮಾಡಿದ್ದು, ಚಿತ್ರರಂಗದಲ್ಲಿ ಹೆಚ್ಚು ಸಂಚಲನ ಮೂಡಿಸಿತು.  ಅದೇ ವರ್ಷದಲ್ಲಿ ರೋಹಿಣಿ ತೆರಿಗೆ ಡಿಫಾಲ್ಟ್ ಮಾಡಿದ ರಾಜಕೀಯ ಬಿಗ್‌ವಿಗ್ ಒಡೆತನ ಪ್ರಸಿದ್ಧ  ಮಾಧ್ಯಮ ವಾಹಿನಿಯೊಂದರ ಬ್ಯಾಂಕ್‌ ಖಾತೆಗಳನ್ನು ಫ್ರೀಜ್  ಮಾಡಿದರು. ಮೀಡಿಯಾ ಹೌಸ್ ತಕ್ಷಣ ತೆರಿಗೆಗಳನ್ನು ಪಾವತಿಸಿತು. ಈ ಎರಡೂ ಕಾರ್ಯಾಚರಣೆಗಳಿಂದ ಆ ವರ್ಷದಲ್ಲಿ ಚಿತ್ರರಂಗ ಹಾಗೂ ಮಾಧ್ಯಮ ರಂಗದ ಆದಾಯ ತೆರಿಗೆ ಸಂಗ್ರಹ ಎಲ್ಲಾ ಸಮಯಕ್ಕಿಂತ ಹೆಚ್ಚಾ ಗಿತ್ತು. ಇದು ಅವರ ದಿಟ್ಟ ಹೆಜ್ಜೆಗೆ ನಿದರ್ಶನವಾಗಿದೆ.

ಗಣಿಗಾರಿಕೆ (Mining Scam) ಹಗರಣ ಪ್ರಕರಣದಲ್ಲಿ, ರೋಹಿಣಿ ಸುಮಾರು 700 ಕೋಟಿ ಕಪ್ಪು ಹಣವನ್ನು ಬಯಲಿಗೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರೋಹಿಣಿ ಅವರ ಆದೇಶಗಳ ಮೇಲ್ಮನವಿಯನ್ನು ಕೋರ್ಟ್‌ಗಳು  ಎತ್ತಿ ಹಿಡಿದಿವೆ. ರೋಹಿಣಿ ಈಗ ಚೆನ್ನೈನಲ್ಲಿ ಪ್ರಾದೇಶಿಕ ಆರ್ಥಿಕ ಗುಪ್ತಚರ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈ ಮಂಡಳಿ  ಭಾರತದ ಹಣಕಾಸು ಸಚಿವರಿಗೆ ವರದಿ ಮಾಡುತ್ತದೆ. ಮತ್ತು ಕಪ್ಪು ಹಣದ ಬಗ್ಗೆ ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದಲ್ಲದೆ ಇಂಡಿಯನ್ ಎಕ್ಸ್‌ಪ್ರೆಸ್‌ಗಾಗಿ ನಿಯಮಿತವಾಗಿ ಬರೆಯುತ್ತಿರುತ್ತಾರೆ. ಮತ್ತು ಲೇಖಕರಾಗಿಯೂ ಮೆಚ್ಚುಗೆ ಪಡೆದಿರುತ್ತಾರೆ. ಬಹುಮುಖ ಪ್ರತಿಭೆಯ ರೋಹಿಣಿ ಅವರು ಹೀಗೆ ಯಶಸ್ಸಿನ ಉತ್ತುಂಗಕ್ಕೆ ಏರಲಿ. ನಮ್ಮೂರಿನ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸಲಿ ಎಂದು ಹಾರೈಸೋಣ. 


ಲಕ್ಷ್ಮಿ ಮಲ್ಲಿಕಾರ್ಜುನ್, ಚೆನ್ನೈ
laxmimallikarjun077@gmail.com

 

Leave a Reply

Your email address will not be published.