ಅವಕಾಶಗಳನ್ನು ಸದ್ವಿನಿಯೋಗಿಸಿಕೊಂಡು ಸಮಾಜಮುಖಿಯಾಗಿ ಬೆಳೆಯಬೇಕು

ಜಿಲ್ಲಾ ಮಟ್ಟದ ಮಹಿಳಾ ಜಾಗೃತಿ ಶಿಬಿರದಲ್ಲಿ ಸೇವಾದಳದ ಪೂರ್ಣಿಮಾ ಕರೆ

ದಾವಣಗೆರೆ, ಫೆ.14- ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಅವಕಾಶಗಳಿರಲಿಲ್ಲ ಹಾಗೂ ಮನೆಯಿಂದ ಹೊರ ಬರುವ ಸ್ವಾತಂತ್ರ್ಯವೂ ಇರಲಿಲ್ಲ. ಆದರೀಗ ಕಾಲ ಬದಲಾಗಿದ್ದು, ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವ ಜೊತೆಗೆ ಸಮಾಜಮುಖಿಯಾಗಿ ಬೆಳೆಯುವಂತೆ ಭಾರತ ಸೇವಾದಳದ ಮಹಿಳಾ ಸಂಘಟನಾ ಕಾರ್ಯದರ್ಶಿ ಹೆಚ್.ಎಸ್. ಪೂರ್ಣಿಮಾ ಕರೆ ನೀಡಿದರು.

ನಗರದ ಭಾರತ ಸೇವಾದಳ ಭವನದಲ್ಲಿ ಭಾರತ ಸೇವಾದಳ, ಅಕ್ಕಮಹಾದೇವಿ ಮಹಿಳಾ ಸಂಘ, ಜಾಗೃತ ಮಹಿಳಾ ಸಂಘ, ಮಹಿಳಾ ಸೇವಾ ಸಮಾಜ, ಸಹೋದರಿ ನಿವೇದಿತ ಮಹಿಳಾ ಸಂಘ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಮೊನ್ನೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಆದರೆ, ವ್ಯವಸ್ಥಿತ ಆಯಕಟ್ಟಿನ ಜಾಗಗಳು ಸಿಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿ ಉತ್ತಮ ಸಾಧನೆ ಮಾಡಿರುವ ಮಹಿಳೆಯರ ಸೇವೆ ಗುರುತಿಸಿ ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಜನರ ರಕ್ಷಣೆಗಾಗಿ ಕೆಲಸ ಮಾಡಿದ ಕೊರೊನಾ ವಾರಿಯರ್ಸ್‍ ನಿಜಕ್ಕೂ ನಮಗೆ ದೇವರ ಸಮಾನ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾ ದಳದ ಜಿಲ್ಲಾಧ್ಯಕ್ಷ ಕೆ.ಆರ್. ಜಯದೇವಪ್ಪ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ವೈದ್ಯರು, ಶುಶ್ರೂಷಕಿಯರು, ವೈದ್ಯಕೀಯ ತಂತ್ರಜ್ಞರು, ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯ ಲೆಕ್ಕಿಸದೆ ದೇಶದ ಹಿತಾಸಕ್ತಿಯಿಂದ ಹಗಲಿರುಳು ಶ್ರಮಿಸಿ ಕೊರೊನಾ ಪೀಡಿತರ ಸೇವೆ ಮಾಡಿರುವುದಾಗಿ ಶ್ಲಾಘಿಸಿದರು.

ಮಹಿಳೆಯರ ಕುರಿತು ಶಿಕ್ಷಣಾಧಿಕಾರಿ ಪುಷ್ಪಲತಾ ಉಪನ್ಯಾಸ ನೀಡಿದರು. ಭಾರತ ಸೇವಾದಳದ ಸದಸ್ಯೆ ನೀಲಗುಂದ ಜಯಮ್ಮ, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವು ಕೊರೊನಾ ವಾರಿಯರ್ಸ್‍ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯೆ ಕಲ್ಪನ ಶಿವಣ್ಣ, ದಾವಣಗೆರೆ ತಾಲ್ಲೂಕು ಶಾಖೆ ಅಧ್ಯಕ್ಷ ಟಿ.ನಾಗರಾಜ್, ಉಮಾ ವೀರಭದ್ರಪ್ಪ, ಎಂ.ಅಣ್ಣಯ್ಯ, ಚನ್ನಪ್ಪ ಸೇರಿದಂತೆ ಇತರರು ಇದ್ದರು.

ಮಮತಾ ನಾಗರಾಜ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published.