ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ…?

ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ…?

ಫೆಬ್ರವರಿ ತಿಂಗಳು ಎಂದರೆ ಸಾಕು ನಮಗೆಲ್ಲಾ ತಕ್ಷಣಕ್ಕೆ ನೆನಪಾಗುವುದು ಈ ತಿಂಗಳಲ್ಲಿ ಬರುವ “ಪ್ರೇಮಿಗಳ ದಿನಾಚರಣೆ”, ಹೌದು ಪ್ರಸ್ತುತ ದಿನಮಾನಗಳಲ್ಲಿ ಈ ದಿನವನ್ನು ಪರ-ವಿರೋಧದ ನಡುವೆಯೂ ಪ್ರೇಮಿಗಳು ಆಚರಿಸುತ್ತಿದ್ದಾರೆ.

ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಸಾಲುಗಳು ಹೇಳುವಂತೆ

“ಪ್ರೀತಿ ಇಲ್ಲದ ಮೇಲೆ ಹೂ ಅರಳಿತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡಿತು ಹೇಗೆ”?
ಎಂಬ ಒಳಾರ್ಥದಲ್ಲಿ ಪ್ರೀತಿಯ ವ್ಯಾಖ್ಯಾನವನ್ನು ಈ ಕವಿತೆ ಹೇಳುತ್ತದೆ.

ಅಂದಹಾಗೆ ಪ್ರೀತಿ ಎಂದರೆ ಕೇವಲ ಹುಡುಗ-ಹುಡುಗಿಯರ ನಡುವೆ ಹುಟ್ಟುವುದು ಮಾತ್ರವಲ್ಲ, ತಾಯಿ ಮತ್ತು ಮಗುವಿನ ನಡುವಿನದ್ದು ಪ್ರೀತಿಯಲ್ಲವೇ? ಒಬ್ಬ ಗುರು ತನ್ನ ಶಿಷ್ಯನನ್ನು ವಿದ್ಯೆಯಲ್ಲಿ ಪರಿಪೂರ್ಣಗೊಳಿಸಲು ಹಾಕುವ ಶ್ರಮವು ಪ್ರೀತಿಯಲ್ಲದೇ ಮತ್ತೇನು? ಜಗವೆಲ್ಲಾ ಪ್ರೀತಿಯ ಅಲೆಯಲ್ಲಿ ತೇಲುತ್ತಿರುವ ಈ ಸಂದರ್ಭದಲ್ಲಿ ಪ್ರೀತಿಗೆ ಭೀತಿ ಎದುರಾಗಿದೆ. ಒಂದಷ್ಟು ಜನರ ಗುಂಪು ಈ “ಪ್ರೇಮಿಗಳ ದಿನಾಚರಣೆ” ನಮ್ಮ ಸಂಸ್ಕೃತಿಯಲ್ಲ ಎಂದು ಬೊಬ್ಬೆ ಹೊಡೆಯುತ್ತಿದೆ.ಅಷ್ಟೇ ಅಲ್ಲಾ ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಕಂಡ ಕಂಡಲ್ಲಿ ಪ್ರೇಮಿಗಳ ಮೇಲೆ ಮೇಲೆ ದೌರ್ಜನ್ಯ ಎಸಗುವ ಕೆಲಸ ಶುರು ಮಾಡಿಕೊಂಡಿವೆ.

ಈ ನೆಲದ ಕಾನೂನಿನ್ವಯ ವಯಸ್ಸು 21 ದಾಟಿದ ಯುವಕ ಹಾಗೂ 18ರ ಮೇಲ್ಪಟ್ಟ ಯುವತಿಗೆ ತಮ್ಮ ಬಾಳಾಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ ಎಂಬುದನ್ನು ಇವರು ಮರೆತಂತಿದೆ.

ಆದರೆ ಇದ್ಯಾವುದನ್ನು ಅರ್ಥಮಾಡಿಕೊಳ್ಳದ ಕೆಲವರು ತಮ್ಮ ಮೂಲಭೂತವಾದವನ್ನು ಬೇರೊಬ್ಬರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.

ಪ್ರೀತಿಗೆ ಜಾತಿ, ಧರ್ಮ, ಭಾಷೆಯ ಹಂಗಿಲ್ಲ. ಅದು ಯಾವಾಗ ಎಲ್ಲಿ ಹೇಗೆ ಬೇಕಾದರೂ ಹುಟ್ಟಬಹುದು.

ಇವೆಲ್ಲವುಗಳ ನಡುವೆ ಈ ಫೆಬ್ರವರಿ ತಿಂಗಳ ಪ್ರೇಮಿಗಳ ದಿನಾಚರಣೆ ಶುರುವಾಗುವುದು 07ನೇ ತಾರಿಖಿನಿಂದ 14ರವರೆಗೆ…

 

* ಫೆ 07 ರೋಸ್ ಡೇ:

ಪ್ರೀತಿ ಮತ್ತು ಮಮತೆಯ ಸಂಕೇತವೇ “ಗುಲಾಬಿ ಹೂ” ಅಂತಹ ಕೆಂಪು ಬಣ್ಣದ ಗುಲಾಬಿಯನ್ನು ತಮ್ಮ ಪ್ರಿಯರಿಗೆ ಕೊಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

* ಫೆ 08 ಪ್ರೊಪೋಸ್ ಡೇ:8 ತಮ್ಮ ಪ್ರೀತಿಯನ್ನು ಹೇಳಲು ಈ ದಿನ ಸೂಕ್ತ ತಾವು ಇಷ್ಟಪಡುವ ಪ್ರಿಯತಮೆಗೆ ಅಂದು ಪ್ರೊಪೋಸ್ ಮಾಡುವ ಮೂಲಕ ಆಚರಿಸುವರು.

* ಫೆ 09 ಚಾಕಲೇಟ್ ಡೇ: ತಮ್ಮ ಪ್ರಿಯಕರ ಅಥವಾ ಪ್ರಿಯತಮೆಗೆ ಸಿಹಿಯಾದ ಚಾಕಲೇಟ್ ನೀಡುವ ಮುಖಾಂತರ ಸಂತೋಷಪಡಿಸುವರು.

* ಫೆ 10 ಟೆಡ್ಡಿಬೇರ್ ಡೇ: ಅಂದು ಪ್ರೀತಿಯರಿಗೆ ಪ್ರೀತಿಯ ಉಡುಗೊರೆಯಾಗಿ ಟೆಡ್ಡಿಬೇರ್ ನೀಡಿ ತಮ್ಮ ಪ್ರೀತಿಯನ್ನು ವಿಶ್ವಾಸಾರ್ಹಗೊಳಿಸುವರು.

* ಫೆ 11 ಪ್ರಾಮೀಸ್ ಡೇ: ಎಂದೆಂದಿಗೂ ನಿನ್ನ ಪ್ರಿಯನಾಗಿಯೇ ಇರುತ್ತೇನೆ ಅಥವಾ ಸದಾ ನಿನ್ನ ಜೊತೆಯಲ್ಲೆ ಇರುವೆನು ಎಂದು ಪ್ರಿಯರಿಗೆ ಈ ದಿನ ಪ್ರಮಾಣ ಮಾಡುವರು.

* ಫೆ 12 ಹಗ್ ಡೇ : ಪ್ರೀತಿ ಎಂದರೆ ಅದೊಂದು ಸುಂದರ ಅನುಭೂತಿ,ಅಲ್ಲಿ ಪ್ರೇಮಿಗಳು ಪರಸ್ಪರ ಒಂದಾಗುವ ನಿರ್ಧಾರ ಮಾಡಿಕೊಂಡ ಮೇಲೆ, ತಮ್ಮ ಪ್ರೀತಿಯನ್ನು ಅಭಿವ್ಯಕ್ತಪಡಿಸಲು ಪ್ರೇಮಿಗೆ ಒಂದು ಬೆಚ್ಚನೆಯ ಅಪ್ಪುಗೆ ನೀಡುವರು.

* ಫೆ 13 ಕಿಸ್ ಡೇ: ಪ್ರೇಮಿಗಳ ದಿನಾಚರಣೆಗೆ ಒಂದು ದಿನ ಮುಂಚಿತವಾಗಿ “ಕಿಸ್ ಡೇ”ಯನ್ನು ಆಚರಿಸುವರು, ಜೋಡಿಗಳಿಬ್ಬರು ಪರಸ್ಪರ ಒಪ್ಪಿ ಅಂದು ಒಬ್ಬರಿಗೊಬ್ಬರು ಮುತ್ತಿಡುವ ಮೂಲಕ ಪ್ರೀತಿಯನ್ನು ತೋರ್ಪಡಿಸುವರು.

* ಫೆ 14 ಪ್ರೇಮಿಗಳ ದಿನಾಚರಣೆ: ಕೊನೆಯ ದಿನವಾದ ಪೂರ್ತಿ ದಿನವನ್ನು ತಮ್ಮ ಪ್ರಿಯಕರನಿಗೆ ಅಥವಾ ಪ್ರಿಯತಮೆಗೆ ಮಿಸಲಿಡುವರು.ಅವರ ನೆಚ್ಚಿನ ಪ್ರವಾಸಿತಾಣಕ್ಕೆ ಭೇಟಿ ನೀಡಿ ಹಾಗೂ ಚಲನಚಿತ್ರ ವೀಕ್ಷಣೆ ಮಾಡುವ ಮೂಲಕ ಹೀಗೆ ಹಲವಾರು ಬಯಕೆಗಳನ್ನು ಈಡೇರಿಸಿಕೊಂಡು ಇವುಗಳೊಂದಿಗೆ ಪ್ರೇಮಿಗಳ ದಿನಾಚರಣೆ ಮುಗಿದು ಹೋಗುತ್ತದೆ.

ಆದರೆ ಇದೇ “ಫೆಬ್ರವರಿ 14” ಭಾರತದ ಇತಿಹಾಸದ ಪುಟಗಳಲ್ಲಿ ಒಂದು ಕರಾಳ ದಿನವಾಗಿ ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರದ “ಪುಲ್ವಾಮಾ” ಜಿಲ್ಲೆಯಲ್ಲಿ ಜೈಶ್ ಮೊಹಮ್ಮದ್ ಉಗ್ರರು ನಡೆಸಿದ ಆತ್ಮಹತ್ಯಾದಾಳಿಯಲ್ಲಿ 40ಕ್ಕೂ ಹೆಚ್ಚು “ಸಿ ಆರ್ ಪಿ ಎಫ್ ಯೋಧ”ರು ಇದೆ ದಿನದಂದು ಹುತಾತ್ಮರಾದ ಭೀಕರ ಘಟನೆ ನಡೆದಿತ್ತು. ಆದ್ದರಿಂದ ಪ್ರೇಮಿಗಳ ದಿನಾಚರಣೆಯ ಜೊತೆಗೆ ಹುತಾತ್ಮರಾದ 40ಕ್ಕೂ ಹೆಚ್ಚು “ವೀರ ಯೋಧ”ರನ್ನು ನೆನೆಯೋಣ.

ಧರ್ಮ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಜೊತೆಗೆ ನಮ್ಮ ಆಚರಣೆಗಳು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಜೊತೆಗೆ ಯಾರ ಭಾವನೆಗಳಿಗೂ ದಕ್ಕೆಯಾಗದಂತರಲಿ ಪ್ರೇಮಿಗಳೇ…


ಮಹಾಂತೇಶ್ ಎನ್ ಬೇತೂರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ವಿದ್ಯಾರ್ಥಿ,ದಾವಣಗೆರೆ ವಿಶ್ವವಿದ್ಯಾನಿಲಯ.
mahanthesha1998n@gmail.com

Leave a Reply

Your email address will not be published.