ಆರೋಗ್ಯ ಭಾಗ್ಯ, ಕೃಷಿಗೆ ಸೌಭಾಗ್ಯ

ಕೇಂದ್ರ ಬಜೆಟ್ : ಆರ್ಥಿಕತೆ ಹಳಿಗೆ ತರಲು ತೆರಿಗೆ – ಸೆಸ್ ಹೊಂದಾಣಿಕೆ ಮಾಡಿದ ಸಚಿವೆ ನಿರ್ಮಲಾ

ನವದೆಹಲಿ, ಫೆ. 1 – ಆರೋಗ್ಯ ವಲಯದ ವೆಚ್ಚ ದುಪ್ಪಟ್ಟುಗೊಳಿಸುವ, ಮೂಲಭೂತ ಸೌಲಭ್ಯ ಹೂಡಿಕೆ ಹೆಚ್ಚಿಸುವ ಹಾಗೂ ಕೃಷಿ ವಲಯಕ್ಕೆ ಸೆಸ್ ಮೂಲಕ ನೆರವು ಕಲ್ಪಿಸುವ ಮೂಲಕ ಆರ್ಥಿಕತೆಯನ್ನು ಕಠಿಣ ಪರಿಸ್ಥಿತಿಯಿಂದ ಹೊರ ತರುವ ಪ್ರಯತ್ನದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

ಮಂಗಳವಾರದಿಂದ ಜಾರಿಗೆ ಬರುವಂತೆ ಬಂಗಾರ – ಬೆಳ್ಳಿ, ಮದ್ಯ, ಕಲ್ಲಿದ್ದಲು ಹಾಗೂ ಕೃಷಿ ಉತ್ಪನ್ನಗಳ ಮೇಲೆ ನೂತನ ಕೃಷಿ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಸೆಸ್ ಹೇರಿಕೆ ಮಾಡಲಾಗಿದೆ. ಆದರೆ, ಇದರಿಂದ ಗ್ರಾಹಕರ ಮೇಲೆ ಹೆಚ್ಚು ಹೊರೆಯಾಗದಂತಹ ಆಮದು ಸುಂಕಗಳನ್ನು ಕಡಿತಗೊಳಿಸಲಾಗಿದೆ.

ಪೆಟ್ರೋಲ್ ಮೇಲೆ ಲೀಟರ್‌ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ.ಗಳ ಸೆಸ್ ವಿಧಿಸಲಾಗಿದೆ. ಆದರೆ, ಇದೇ ಪ್ರಮಾಣದ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಗ್ರಾಹಕರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

ಆರೋಗ್ಯ ವಲಯಕ್ಕೆ ಜಿಡಿಪಿಯ ಶೇ.1ರಷ್ಟು ವೆಚ್ಚ ಮಾಡಲು ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ ಆರೋಗ್ಯ ವಲಯ 2.2 ಲಕ್ಷ ಕೋಟಿ ರೂ. ಪಡೆಯಲಿದೆ.  

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರೋಗ್ಯದ ವೆಚ್ಚ 94,452 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹೀಗಾಗಿ ಮುಂದಿನ ವರ್ಷ ಆರೋಗ್ಯ ವಲಯ ಎರಡು ಪಟ್ಟಿಗೂ ಹೆಚ್ಚು ಹಣ ಪಡೆಯಲಿದೆ. ಬಜೆಟ್ ಮಂಡನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಿರ್ಮಲ ರಸ್ತೆ, ಸೇತುವೆ, ಬಂದರು, ವಿದ್ಯುತ್ ಉತ್ಪಾದನೆ ಸೇರಿದಂತೆ, ಹಲವಾರು ಮೂಲಭೂತ ಸೌಲಭ್ಯಗಳ ಮೇಲೆ ಬೃಹತ್ ಹೂಡಿಕೆ ಮಾಡಲಿದ್ದೇವೆ. ಆರೋಗ್ಯ ವಲಯಕ್ಕೆ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹಣಕಾಸು ವರ್ಷಕ್ಕೆ ಅನ್ವಯವಾಗುವ ಬಜೆಟ್ ಮಂಡಿಸಿರುವ ಸೀತಾರಾಮನ್, ನಿವೃತ್ತಿ ನಿಧಿಗೆ ನೀಡಲಾಗುವ ತೆರಿಗೆ ವಿನಾಯಿತಿಯನ್ನು ವರ್ಷಕ್ಕೆ 2.5 ಲಕ್ಷ ರೂ.ಗಳಿಗೆ ಸೀಮಿತಗೊಳಿಸಿದ್ದಾರೆ. ಎಲ್.ಟಿ.ಸಿ.ಗೆ ತೆರಿಗೆ ವಿನಾಯಿತಿ ಕಲ್ಪಿಸಿದ್ದಾರೆ.

ಇದರ ಜೊತೆಗೆ 50 ಲಕ್ಷ ರೂ.ಗಳಿಗೂ ಹೆಚ್ಚಿನ ಸರಕು ಖರೀದಿಸುವವರಿಗೆ ಶೇ.0.1ರ ಟಿ.ಡಿ.ಎಸ್. ವಿಧಿಸಲಾಗುವುದು. 10 ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ನಡೆಸುವವರಿಗೆ ಮಾತ್ರ ಟಿಡಿಎಸ್ ಪಡೆಯುವ ಹೊಣೆ ನೀಡಲಾಗುವುದು.

 75 ವರ್ಷಕ್ಕೂ ಹೆಚ್ಚಿನವರು ಪಿಂಚಣಿ ಹಾಗೂ ಬಡ್ಡಿ ಆದಾಯ ಮಾತ್ರ ಪಡೆಯುತ್ತಿದ್ದರೆ ಅವರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಮನೆ ಕಟ್ಟಿಕೊಳ್ಳುವವರಿಗೆ ನೆರವಾಗುವ ಸಲುವಾಗಿ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿಗೆ 1.5 ಲಕ್ಷ ರೂ.ಗಳ ಹೆಚ್ಚುವರಿ ವಿನಾಯಿತಿ ನೀಡುವ ಅವಧಿಯನ್ನು ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ.

 

ವಿಮಾ ವಲಯದ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಈಗಿರುವ ಶೇ.40ರಿಂದ ಶೇ.74ಕ್ಕೆ ಏರಿಕೆ ಮಾಡಲಾಗಿದೆ.

ಡೆವಿಡೆಂಡ್ ಘೋಷಣೆ, ಇಲ್ಲವೇ ಪಾವತಿಯ ನಂತರವೇ ತೆರಿಗೆದಾರರು ಆ ಕುರಿತ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ರಿಯಲ್ ಎಸ್ಟೇಟ್ ಇನ್‌ಫ್ರಾಸ್ಟ್ರಕ್ಚರ್ ಟ್ರಸ್ಟ್ ಹಾಗೂ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳ ಡಿವಿಡೆಂಡ್ ಪಾವತಿಗೆ ಟಿ.ಡಿ.ಎಸ್. ವಿನಾಯಿತಿ ನೀಡಲಾಗಿದೆ.

ನವೋದ್ಯಮಗಳಿಗೆ ನೀಡಲಾಗುವ ತೆರಿಗೆ ವಿನಾಯಿತಿ ಅವಧಿಯನ್ನು ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ.

ಆದಾಯ ತೆರಿಗೆ ಅಸೆಸ್‌ಮೆಂಟ್‌ ಅನ್ನು ಮರು ಪರಿಶೀಲಿಸಲು ಇರುವ ಗಡುವನ್ನು ಈಗಿರುವ ಆರು ವರ್ಷಗಳಿಂದ ಮೂರು ವರ್ಷಕ್ಕೆ ಇಳಿಸಲಾಗಿದೆ. 

ವರ್ಷವೊಂದರಲ್ಲಿ 50 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತದ ಅಘೋಷಿತ ಆದಾಯಕ್ಕೆ ಸಾಕ್ಷಿ ಇದ್ದರೆ ಮಾತ್ರ ಹತ್ತು ವರ್ಷಗಳವರೆಗಿನ ಹಳೆಯ ಪ್ರಕರಣಗಳನ್ನು ಮತ್ತೆ ಪರಿಶೀಲಿಸಲು ಅವಕಾಶ ನೀಡಲಾಗುವುದು.

2021-22ರ ಸಾಲಿನ ವಿತ್ತೀಯ ಕೊರತೆ ಶೇ.6.8ರಷ್ಟಿರಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆಯ ಪ್ರಮಾಣ ಶೇ.9.5ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

ಹತ್ತಿ, ರೇಷ್ಮೆ, ಮೆಕ್ಕೆಜೋಳ, ಕೆಲವು ಹರಳು ಹಾಗೂ ಆಭರಣ, ವಾಹನಗಳ ಬಿಡಿ ಭಾಗ, ಸ್ಕ್ರೂ ಹಾಗೂ ನಟ್ಟುಗಳ ಆಮದು ಸುಂಕವನ್ನು ಹೆಚ್ಚಿಸಲಾಗಿದೆ.

ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಜೋಡಣೆ, ವೈರ್ ಹಾಗೂ ಕೇಬಲ್, ಸೋಲಾರ್ ಇನ್ವರ್ಟರ್ ಹಾಗೂ ಸೌರ ದೀಪಗಳ ಮೇಲಿನ ಆಮದು ಸುಂಕವನ್ನೂ ಹೆಚ್ಚಿಸಲಾಗಿದೆ.

ನಾಫ್ತಾ, ಕಬ್ಬಿಣ ಹಾಗೂ ಗುಜರಿ ಉಕ್ಕು, ವಿಮಾನಗಳ ಬಿಡಿ ಭಾಗ, ಬಂಗಾರ ಮತ್ತು ಬೆಳ್ಳಿಯ ಆಮದು ಸುಂಕವನ್ನು ಇಳಿಕೆ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮರು ಬಂಡವಾಳಕ್ಕಾಗಿ 20 ಸಾವಿರ ಕೋಟಿ ರೂ.ಗಳನ್ನು ಪ್ರಕಟಿಸಲಾಗಿದೆ. 

ಸರ್ಕಾರಿ ಸ್ವಾಮ್ಯದ ಉದ್ಯಮಗಳ ಖಾಸಗೀಕರಣದ ಮೂಲಕ 1.75 ಲಕ್ಷ ಕೋಟಿ ರೂ.ಗಳನ್ನು ಗಳಿಸುವ ಗುರಿ ಹೊಂದಲಾಗಿದೆ. ಎಲ್.ಐ.ಸಿ. ಸೇರಿದಂತೆ ಹಲವು ಸರ್ಕಾರಿ ಕಂಪನಿಗಳ ಐ.ಪಿ.ಒ.ಗೆ ಯೋಜಿಸಲಾಗಿದೆ.