ಮುಂಜಾಗ್ರತೆ ಲಸಿಕೆಯಿಂದ ಪ್ರಪಂಚದಿಂದ ಪೋಲಿಯೋ ದೂರ

ಮುಂಜಾಗ್ರತೆ ಲಸಿಕೆಯಿಂದ ಪ್ರಪಂಚದಿಂದ ಪೋಲಿಯೋ ದೂರ

ಪೋಲಿಯೋ ಲಸಿಕೆ ಅಭಿಯಾನಕ್ಕೆ ಜಿ.ಪಂ.ಅಧ್ಯಕ್ಷೆ ಶಾಂತಕುಮಾರಿ ಚಾಲನೆ

ದಾವಣಗೆರೆ, ಜ.31- ಶಾಶ್ವತ ಅಂಗ ವೈಕಲ್ಯಕ್ಕೆ ದೂಡುವ ಪೋಲಿಯೋ ಮಹಾಮಾರಿ ಇಡೀ ಪ್ರಪಂಚದಿಂದಲೇ ದೂರವಾಗಬೇಕು. ಇದಕ್ಕೆ ಮುಂಜಾಗ್ರತೆಯಾಗಿ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ ತಿಳಿಸಿದರು. 

ಅವರು, ಇಂದು ನಗರದ ಶ್ರೀರಾಮನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಪೋಲಿಯೋ ಲಸಿಕೆ ಅಭಿಯಾನದಲ್ಲಿ ಶಿಶುಗಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಭಾರತ ದೇಶದಲ್ಲಿ ಯಾವುದೇ ಪೋಲಿ ಯೋ ಪ್ರಕರಣಗಳು ಇಲ್ಲ ಎಂದು ಹೇಳಲಾ ಗುತ್ತದೆ. ಪಕ್ಕದ ರಾಷ್ಟ್ರ ಆಫ್ಘಾನಿಸ್ಥಾನದಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬಂದಿರುವು ದರಿಂದ ನಾವು ಎಚ್ಚರದಿಂದಿರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಪೋಲಿಯೋ ನಿರ್ಮೂಲನೆಗೆ ಶ್ರಮಿಸುತ್ತಿ ದವೆ ಎಂದರಲ್ಲದೇ, ಈ ಆಂದೋಲನದಲ್ಲಿ ಶ್ರಮಿಸುತ್ತಿರುವ ಎಲ್ಲಾ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ ಮಾತನಾಡಿ, ಪೋಲಿಯೋ ಹನಿ ಬಗೆಗೆ ಅರಿವು, ಕಾಳಜಿ ತೋರುತ್ತಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಜೊತೆಗೆ ತಮ್ಮ ನೆರೆ ಹೊರೆಯವರು, ಬಂಧುಗಳಿಗೂ ತಿಳಿಸುವ ಮೂಲಕ ಮಕ್ಕಳನ್ನು ಪೋಲಿ ಯೋದಿಂದ ದೂರವಾಗಿಸಲು ಮುಂದಾಗಬೇಕೆಂದರು.

ಕೋವಿಡ್ ಹಿನ್ನೆಲೆಯಲ್ಲಿ ಬಹಳ ಜಾಗ್ರತೆಯಿಂದ ಪೋಲಿಯೋ ಹನಿ ಹಾಕಲಾಗುತ್ತಿದ್ದು, ಇಂದು ಬೂತ್ ಗಳಲ್ಲಿ ಹಾಗೂ ಮೂರು ದಿನ ಮನೆ ಮನೆಗೆ ತೆರಳಿ ಪೋಲಿಯೋ ಹನಿ ಹಾಕಲಾಗುತ್ತದೆ. ಈ ಹಿಂದೆ ಪೋಲಿಯೋ ಲಸಿಕೆ ಹಾಕಿಸಿದ್ದರೂ ಐದು ವರ್ಷ ದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಹನಿ ಹಾಕಿಸುವಂತೆ ಕಿವಿಮಾತು ಹೇಳಿದರು.

ಆರ್.ಸಿ.ಹೆಚ್ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ 1,56,211 ಮಕ್ಕಳಿಗೆ  ಪೋಲಿಯೋ ಹನಿ ಹಾಕಲಾಗುತ್ತಿದ್ದು  ಶೇ.100 ರಷ್ಟು ಗುರಿ ಸಾಧಿಸಲು ಪ್ರಯತ್ನಿಸಲಾಗುವುದು. ಒಟ್ಟು 1121 ಬೂತ್ ಗಳಿದ್ದು, 1132 ತಂಡಗಳ 6 ಸಾವಿರ ಆರೋಗ್ಯ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಂದ, ಡಾ. ರೇಣುಕಾರಾಧ್ಯ, ಡಾ. ವೆಂಕಟೇಶ್, ಐಇಸಿ ಅಧಿಕಾರಿ ಸುರೇಶ್ ಬಾರ್ಕಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿದ್ದರು.