ಮೀಸಲಾತಿಗಾಗಿ ಕ್ರಾಂತಿ ಧ್ವನಿ, ಹೋರಾಟಕ್ಕೆ ಕಿಚ್ಚು, ಬಾರ್‌ಕೋಲ್

ಮೀಸಲಾತಿಗಾಗಿ ಕ್ರಾಂತಿ ಧ್ವನಿ, ಹೋರಾಟಕ್ಕೆ ಕಿಚ್ಚು, ಬಾರ್‌ಕೋಲ್

ದಾವಣಗೆರೆ, ಜ. 29 – ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಟ್ಟರೆ ಈ ಸಮಾಜದ ಮಕ್ಕಳು ಬುದ್ಧಿವಂತರಾಗುತ್ತಾರೆ, ಉದ್ಯೋಗ ಪಡೆದು ಬೆಳೆಯುತ್ತಾರೆ ಎಂಬ ಹೊಟ್ಟೆಕಿಚ್ಚಿನಿಂದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೀಸಲಾತಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಕೂಡಲಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗ ದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಗಾಗಿ ಕೂಡಲಸಂಗಮದಿಂದ ಶ್ರೀಗಳು ಆರಂಭಿಸಿರುವ ಪಾದಯಾತ್ರೆ ದಾವಣಗೆರೆಗೆ ತಲುಪಿದ ಸಂದರ್ಭದಲ್ಲಿ ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸ ಲಾಗಿದ್ದ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ನಾವು ಹಸಿರು ಶಾಲು ಹಾಕಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದೆವು. ನಮ್ಮ ಮುಖ್ಯಮಂತ್ರಿ ಎಂದುಕೊಂಡು ಇದುವರೆಗೂ ಶಾಂತಿಯಿಂದ ಹೋರಾಟ ಮಾಡಿದ್ದೆವು. ಆದರೆ, ನಾಳೆ ದಾವಣಗೆರೆಯಿಂದ ಹೆಗಲ ಮೇಲೆ ಶಾಲಿನ ಬದಲು ಬಾರ್‌ಕೋಲ್ ಬರಲಿದೆ. ಹೋರಾಟದ ಕಿಚ್ಚು ಬರಲಿದೆ ಎಂದು ಹೇಳಿದರು.

ದಕ್ಷಿಣ ಕರ್ನಾಟಕದ ವೈದಿಕ ಪರಂಪರೆಯ ಸ್ವಾಮೀಜಿ ಬೀದಿಗೆ ಬಂದಿದ್ದರೆ ಅವರು ಸುಮ್ಮನೆ ಇರುತ್ತಿರಲಿಲ್ಲ. ಆದರೆ, ಲಿಂಗಾಯತ ಸ್ವಾಮಿಗಳು ಬೀದಿಗೆ ಬಂದಿದ್ದಾರೆಂದು ಸುಮ್ಮನಿದ್ದಾರೆ. ಯಡಿಯೂರಪ್ಪಗೆ ವೋಟ್ ಕೊಡಿಸಲು ಮಾತ್ರ ಲಿಂಗಾಯತ ಸ್ವಾಮಿಗಳಿದ್ದಾರೆ ಎಂದು ಅವರು ಭಾವಿಸಿದ್ದಾರೆ. ಸಂದರ್ಭ ಬಂದರೆ ನಿಮ್ಮನ್ನು ಖಾಲಿ ಮಾಡಿಸಲು ನಾವು ಇದ್ದೇವೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

ಕಾಶಪ್ಪನವರ್ ಕ್ರಾಂತಿ

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ  ವಿಜಯಾನಂದ ಕಾಶಪ್ಪನವರ್  ಅವರು ಶನಿವಾರ ದಾವಣಗೆರೆಯಲ್ಲಿ ಕ್ರಾಂತಿ ಮಾಡಲಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ಬಾಂಬ್ ಸಿಡಿಸುವುದಾಗಿ  ಕಾಶಪ್ಪನವರ್ ಸಹ ಹೇಳಿದ್ದಾರೆ. ಆದರೆ, ಶನಿವಾರದ ಕ್ರಮ ಏನಾಗಿರಲಿದೆ ಎಂಬುದನ್ನು ಉಭಯರೂ ಗೌಪ್ಯವಾಗಿಟ್ಟಿದ್ದಾರೆ.

ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಶಾಸಕರು ರಾಜೀನಾಮೆ ನೀಡಬೇಕು ಎಂದರೆ ಸೂಕ್ತವಲ್ಲ. ಅದರ ಬದಲು, ಶಾಸಕರು ಯಡಿಯೂರಪ್ಪ ಮೇಲೆ ಒತ್ತಡ ಹಾಕಬೇಕು. ಅವರ ಒತ್ತಡಕ್ಕೆ ಯಡಿಯೂರಪ್ಪನವರೇ ರಾಜೀನಾಮೆ ಕೊಡುವ ಸಂದರ್ಭ ಬಂದು ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಶ್ರೀಗಳು ಹೇಳಿದರು.

ಬೆಂಗಳೂರಿಗೆ 10 ಲಕ್ಷ ಜನ ಬರುತ್ತೇವೆ. ಸಂಘರ್ಷ ನಡೆಸುತ್ತೇವೆ. ಮೀಸಲಾತಿಯನ್ನು ಪಡೆಯುವುದಲ್ಲ ಕಿತ್ತುಕೊಳ್ಳುತ್ತೇವೆ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ  ವಿಜಯಾನಂದ ಕಾಶಪ್ಪನವರ್ , ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 17 ಶಾಸಕರಿದ್ದಾರೆ. ಆದರೂ ಸಮಾಜಕ್ಕಾಗಿ ಮೀಸಲಾತಿ ಕೇಳುತ್ತಿಲ್ಲ. ಇದರಿಂದಾಗಿ ಶ್ರೀಗಳು ಬೀದಿಗೆ ಬಂದು ಹೋರಾಟ ಮಾಡುವಂತಾಗಿದೆ. ಇದಕ್ಕಾಗಿ ಶಾಸಕರಿಗೆ ನಾಚಿಕೆಯಾಗಬೇಕು ಎಂದರು.

ದಾವಣಗೆರೆಯಲ್ಲಿ ಪಂಚಮಸಾಲಿ ಸಮಾಜವನ್ನು ತುಳಿಯುವ ಕೆಲಸ ನಡೆಯುತ್ತಿದೆ. ಇಲ್ಲಿ ಶಾಸಕ ಸ್ಥಾನಕ್ಕಾಗಿ ಯಾರೂ ಟಿಕೆಟ್ ಕೊಟ್ಟಿಲ್ಲ. ರಾಜಕೀಯ ವಾಗಿ ಬೆಳೆಯಲು ಸಮಾಜದವರು ಒಂದಾ ಗಬೇಕು ಎಂದೂ ಅವರು ಹೇಳಿದರು.

ಸಮಾಜದ ಮುಖಂಡರಾದ ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ಸಮಾಜದ ಬಡವರಿಗಾಗಿ ರಾಜ್ಯದಲ್ಲಿ 2ಎ ಮೀಸಲಾತಿ ಹಾಗೂ ಕೇಂದ್ರದಲ್ಲಿ ಒ.ಬಿ.ಸಿ. ಪಟ್ಟಿಯಲ್ಲಿ ಸೇರ್ಪಡೆಯಾಗಬೇಕಿದೆ. ನಮ್ಮನ್ನು ಇದುವರೆಗೂ ಒಡೆದು ಆಳಲಾಗಿದೆ. ಇದರಿಂದಾಗಿ ನಾವು ನಾಯಕರಾಗಲು ಸಾಧ್ಯವಾಗಿಲ್ಲ. ಸಂಘಟನೆಯಿಂದ ಹೋರಾಡಿದರೆ ಮಾತ್ರ ಜಯ ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾದಯಾತ್ರೆಯ ದಾವಣಗೆರೆ ಜಿಲ್ಲೆಯ ಸ್ವಾಗತ ಸಮಿತಿ ಗೌರವಾಧ್ಯಕ್ಷ ಹೆಚ್.ಎಸ್. ನಾಗರಾಜ್, ಯಡಿಯೂರಪ್ಪ ಮುಖ್ಯ ಮಂತ್ರಿಯಾಗಲು ನಮ್ಮ ಸಮಾಜದ ಕೊಡುಗೆ ಅಪಾರವಾಗಿದೆ. ಮೀಸಲಾತಿ ಕೊಡದೇ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ನುಗ್ಗುತ್ತೇವೆ ಎಂದು ಎಚ್ಚರಿಸಿದರು.

ವೇದಿಕೆಯ ಮೇಲೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಬೆಂಗಳೂರಿನ ಸಂಗಮಾನಂದ ಸ್ವಾಮೀಜಿ, ಪಾಲಿಕೆ ಮೇಯರ್ ಹಾಗೂ ಪಾದಯಾತ್ರೆಯ ದಾವಣಗೆರೆ ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್, ಸಮಾಜದ ಮುಖಂಡರಾದ ಗೌರಮ್ಮ ಕಾಶಪ್ಪನವರ್, ನಂದಿಹಳ್ಳಿ ಹಾಲಪ್ಪ, ಬಿ. ನಾಗನಗೌಡ್ರು, ಬಾವಿ ಬೆಟ್ಟಪ್ಪ, ಚಂದ್ರಶೇಖರ್ ಪೂಜಾರ್, ಶಿವರಾಜ್ ಪಾಟೀಲ್, ಅಣಜಿ ಚಂದ್ರಣ್ಣ, ವೀಣಾ ಕಾಶೆಪ್ಪನವರ್, ಹುಚ್ಚಪ್ಪ ಮೇಷ್ಟ್ರು, ಶ್ರೀಧರ್ ಪಾಟೀಲ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ರುದ್ರಕ್ಕ, ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಎಸ್. ಬಸವಂತಪ್ಪ, ತೇಜಸ್ವಿ ಪಟೇಲ್, ಯಜಮಾನ್ ಮೋತಿ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.