ದೇಶದ ಐಕ್ಯತೆ-ಸಮಗ್ರತೆಗೆ ಒಟ್ಟಾಗಿ ಶ್ರಮಿಸೋಣ

ದೇಶದ ಐಕ್ಯತೆ-ಸಮಗ್ರತೆಗೆ ಒಟ್ಟಾಗಿ ಶ್ರಮಿಸೋಣ

ಹೊನ್ನಾಳಿ ಉಪ ತಹಶೀಲ್ದಾರ್ ಬಿ.ಎಂ. ರಮೇಶ್

ಹೊನ್ನಾಳಿ, ಜ.27- ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಎಲ್ಲರೂ ಒಟ್ಟಾಗಿ ಅವಿರತವಾಗಿ ಶ್ರಮಿಸಬೇಕು ಎಂದು ಉಪ ತಹಸೀಲ್ದಾರ್ ಬಿ.ಎಂ. ರಮೇಶ್ ಹೇಳಿದರು.

ತಾಲ್ಲೂಕಿನ ಕುಂದೂರು ಗ್ರಾಮದ ನಾಡ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಹಾತ್ಮಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋ ಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯೋತ್ತರ ಭಾರತ ದೇಶ ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದೆ. ಇದು ನಮ್ಮ ಹೆಮ್ಮೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ವೈಯಕ್ತಿಕ ಕಾಣಿಕೆ ನೀಡೋಣ ಎಂದು ತಿಳಿಸಿದರು.

ದೇಶದ ಏಕತೆ ಮತ್ತು ಅಖಂಡತೆಗೆ ನಮ್ಮ ಹಲವಾರು ನಾಯಕರು ದುಡಿದಿದ್ದಾರೆ. ಸ್ವಾತಂತ್ರ್ಯಾನಂತರ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೃಢಸಂಕಲ್ಪದಿಂದ ಹೈದರಾಬಾದ್‍ನ ನಿಜಾಮರ ಸಂಸ್ಥಾನಕ್ಕೆ ಸೇನೆ ಕರೆದೊಯ್ದು ಭಾರತ ದೇಶದ ಒಕ್ಕೂಟ ವ್ಯವಸ್ಥೆಗೆ ಹೈದರಾಬಾದ್ ಸಂಸ್ಥಾನ ಸೇರ್ಪಡೆಗೊಳ್ಳುವಂತೆ ಮಾಡಿದರು. ಅವರ ಹೋರಾಟ ಮನೋಭಾವ ನಮಗೆ ಮಾರ್ಗದರ್ಶಿಯಾಗಿದೆ ಎಂದು ವಿವರಿಸಿದರು.

ಕೊರೊನಾ ವೈರಸ್ ಸೋಂಕಿನಿಂದ ಇಡೀ ಜಗತ್ತೇ ತತ್ತರಿಸಿದ್ದು, ಭಾರತ ದೇಶದಲ್ಲೂ ಸಾಕಷ್ಟು ಸಾವು-ನೋವು ಸಂಭವಿಸಿ ಅಪಾರ ಹಾನಿಯುಂಟಾಗಿದೆ. ದೇಶದ ಆರ್ಥಿಕತೆ ಪುನರುಜ್ಜೀವನಗೊಳಿಸುವುದರ ಜೊತೆಗೆ ದೇಶವನ್ನು ಬಲಿಷ್ಠಗೊಳಿಸುವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದರು

ಕುಂದೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎಂ.ಸಿ. ಅನ್ನಪೂರ್ಣ, ಕುಂದೂರು ವೃತ್ತದ ಗ್ರಾಮ ಲೆಕ್ಕಿಗ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.