ಕುಂದುವಾಡ ಕೆರೆ ಅಭಿವೃದ್ಧಿಗೆ ವಿರೋಧವಿಲ್ಲ: ಭ್ರಷ್ಟಾಚಾರಕ್ಕೆ ವಿರೋಧ

ದಾವಣಗೆರೆ, ಜ. 27- ಕುಂದುವಾಡ ಕೆರೆ ಅಭಿವೃದ್ಧಿ ಪಡಿಸಲು ನಮ್ಮ ವಿರೋಧವಿಲ್ಲ. ಆದರೆ  ಅನಗತ್ಯ ಕಾಮಗಾರಿ ನಡೆಸುವ ಮೂಲಕ 15 ಕೋಟಿ ರೂ. ಖರ್ಚು ಮಾಡಿ ನಡೆಸುವ  ಭ್ರಷ್ಟಾಚಾರಕ್ಕೆ ನಮ್ಮ ವಿರೋಧವಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಹೇಳಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ಅಧಿಕಾರಿಗಳೊಂದಿಗೆ ಕೆರೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿರುವ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕುಂದುವಾಡ ಕೆರೆಯನ್ನು ಕೇವಲ 7 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಮಾಡುತ್ತೇವೆ.  15 ಕೋಟಿ ರೂ.ಗಳಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಮಾಡುವುದಾಗಿ ಸವಾಲು ಹಾಕಿರುವುದಾಗಿ ಹೇಳಿದರು.

ಕೆರೆ ಸಂರಕ್ಷಣಾ ಅಭಿವೃದ್ಧಿ ಪ್ರಾಧಿಕಾರಿ ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದೆ. ಜಿಲ್ಲಾಧಿಕಾರಿಗಳು ಸಭೆ ನಡೆಯುತ್ತಿದ್ದರೆ ಅತ್ತ ಕಾಮಗಾರಿಯೂ ನಡೆದಿದೆ. 

ಕೆರೆ ಕಾಮಗಾರಿಗಳ ಪೈಕಿ ಕೆರೆಯ ಏರಿ, ಆವರಣದಲ್ಲಿ ಬೆಳೆದಿರುವ ಪೊದೆ ಹಾಗೂ ಮುಳ್ಳನ್ನು  ಪಾಲಿಕೆ ನೌಕರರಿಂದಲೇ ತೆರವುಗೊಳಿಸಬಹುದು. ಕೆರೆ  ಏರಿ ವಿಸ್ತರಣೆಗೆ ಜಾಗವೇ ಇಲ್ಲ. ಆದರೆ ವಿಸ್ತರಣೆಗೆ ಹಣ ವೆಚ್ಚ ಮಾಡಲಾಗುತ್ತಿದೆ. ವಿದ್ಯುತ್ ಕಂಬ ಹಾಗೂ ದೀಪದ ವ್ಯವಸ್ಥೆಯನ್ನು ವಿದ್ಯುತ್ ಇಲಾಖೆ ಕಲ್ಪಿಸುತ್ತದೆ. ಆದರೆ ಅಭಿವೃದ್ಧಿ ನೆಪದಲ್ಲಿ ಅನಗತ್ಯ ವೆಚ್ಚ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ಉಸ್ತುವಾರಿ ಸಚಿವರ ಮುಂದೆ ಗುತ್ತಿಗೆದಾರರು ನಮ್ಮನ್ನು ಭೇಟಿ ಮಾಡಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಜಿಲ್ಲಾಧಿಕಾರಿಗಳು ದೂರಿದ್ದಾರೆ.  ಗುತ್ತಿಗೆದಾರರೂ ಏಕೆ ಇವರನ್ನು ಭೇಟಿ ಮಾಡಬೇಕು? ಇದರ ಹಿಂದಿನ ಅರ್ಥವೇನು? ಎಂದು ದಿನೇಶ್ ಶೆಟ್ಟಿ ಪ್ರಶ್ನಿಸಿದರು.

ಈಗಾಗಲೇ 8 ರಿಂದ 10 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ತಲೆ ದೋರಲಿದೆ. ಇನ್ನೂ ಕೊರೊನಾ ಸಂಕಷ್ಟದಲ್ಲೂ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ ಜಾಧವ್, ಅಯೂಬ್ ಪೈಲ್ವಾನ್, ಸುರಭಿ ಶಿವಮೂರ್ತಿ, ಶ್ರೀಕಾಂತ್ ಬಗೇರ, ಯುವರಾಜ್, ರವಿ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.