ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್

ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್

ಕೆಂಪು ಕೋಟೆ ಮೇಲೆ ಸಿಖ್ ಧ್ವಜ, ದೇಶದ ಗೌರವಕ್ಕೆ ಪ್ರತಿಭಟನಾಕಾರರ ಮಸಿ

ನವದೆಹಲಿ, ಜ. 26 – ದೆಹಲಿಯ ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ಪರೇಡ್ ವೇಳೆ ಇಡೀ ದೆಹಲಿಯನ್ನು ಅರಾಜಕಗೊಳಿಸಿದ್ದಷ್ಟೇ ಅಲ್ಲದೇ, ರಾಷ್ಟ್ರಧ್ವಜದ ಉನ್ನತ ಪೀಠವಾದ ಕೆಂಪು ಕೋಟೆಯ ಮೇಲೆ ಸಿಖ್ ಧರ್ಮದ ಬಾವುಟ ಹಾರಿಸಿ ದೇಶದ ಗೌರವಕ್ಕೆ ಮಸಿ ಬಳಿದಿದ್ದಾರೆ.

ಮಂಗಳವಾರ ನಡೆದ ಟ್ರ್ಯಾಕ್ಟರ್ ಪರೇಡ್‌ ವೇಳೆ ಪ್ರತಿಭಟನಾಕಾರರು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತೆಸೆದಿದ್ದಾರೆ, ಪೊಲೀಸರ ಜೊತೆ ಸಂಘರ್ಷ ನಡೆಸಿದ್ದಾರೆ ಹಾಗೂ ವಾಹನಗಳನ್ನು ಉರುಳಿಸಿದ್ದಾರೆ. ಸಾವಿರಾರು ಜನರು ಹಲವಾರು ಕಡೆ ಪೊಲೀಸರ ಜೊತೆ ಸಂಘರ್ಷ ನಡೆಸಿದ್ದರಿಂದ ರಾಜಧಾನಿಯ ಪ್ರಮುಖ ಸ್ಥಳಗಳು ಅರಾಜಕವಾಗಿದ್ದವು.

ಮೂರು ಕೃಷಿ ಕಾಯ್ದೆಗಳ ವಿರುದ್ಧ ಎರಡು ತಿಂಗಳಿನಿಂದ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ ಭಗ್ನವಾಗಿದ್ದು, ಹಿಂಸಾಚಾರ ತಾಂಡವವಾಡಿತು.

ಹಲವಾರು ಷರತ್ತುಗಳನ್ನು ವಿಧಿಸಿದ್ದ ದೆಹಲಿ ಪೊಲೀಸರು, ಶಾಂತಿಯುತ ಟ್ರ್ಯಾಕ್ಟರ್ ಪರೇಡ್‌ಗೆ ಅನುಮತಿ ನೀಡಿದ್ದರು. ರಾಜಧಾನಿಯ ಗಣರಾಜ್ಯೋತ್ಸವ ಸಮಾರಂಭ ಮುಗಿದ ನಂತರವೇ ಟ್ರ್ಯಾಕ್ಟರ್ ಪರೇಡ್ ಆರಂಭಿಸಬೇಕೆಂದು ತಿಳಿಸಲಾಗಿತ್ತು.

ಆದರೆ, ಅಧಿಕಾರಿಗಳು ತಿಳಿಸಿದ ಸಮಯಕ್ಕಿಂತ ಎರಡು ಗಂಟೆ ಮೊದಲೇ ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಿ ರೈತರು ನಗರಕ್ಕೆ ನುಗ್ಗಿದರು. ಉಕ್ಕು ಹಾಗೂ ಕಾಂಕ್ರೀಟ್ ತಡೆಗಳನ್ನು ಧ್ವಂಸಗೊಳಿಸಲಾಯಿತು. ಟ್ರೇಲರ್ ಟ್ರಕ್‌ಗಳನ್ನು ಉರುಳಿ ಸಿದ ನಂತರ ನಗರದ ಹಲವೆಡೆ ಸಂಘರ್ಷ ನಡೆಸಲಾಯಿತು.

ರಾಜಪಥದಲ್ಲಿ ದೇಶದ ಹೆಮ್ಮೆಯ ಸಂಕೇತವಾಗಿ ಸೈನಿಕ ಬಲ ಪ್ರದರ್ಶನ ನಡೆಯುವ ಬದಲು, ಪ್ರತಿಭಟನಾ ನಿರತ ರೈತ ಹಿಂಸಾ ಭಂಗದ ಪ್ರದರ್ಶನವನ್ನು ದೇಶ ಆಘಾತದಿಂದ ನೋಡಬೇಕಾಯಿತು.  ಅಂತಿಮವಾಗಿ ತ್ರಿವರ್ಣ ಧ್ವಜಕ್ಕೆ ಹೆಮ್ಮೆಯ ಪ್ರತೀಕವಾಗಿರುವ ಕೆಂಪು ಕೇಟೆಯ ಮೇಲೆಯೇ ಸಿಖ್ ಧರ್ಮದ ಧ್ವಜ ಹಾರಿಸಿದ್ದು ಅರಾಜಕತೆಯ ಪರಮಾವಧಿಯಾಗಿತ್ತು. ಧ್ವಜಕಂಭವನ್ನು ಏರಿದ ಕೆಲವರು ಸಿಖ್ ಧ್ವಜವಾದ ನಿಶಾನ್ ಸಾಹಿಬ್ ಹಾರಿಸಿದರು. ಇನ್ನು ಕೆಲವರು ಕೆಂಪು ಕೋಟೆಯ ಗೋಪುರಗಳ ಮೇಲೇರಿ ಸಿಖ್ ಧ್ವಜಗಳನ್ನು ಹಾರಿಸಿದ್ದು ಕಂಡು ಬಂತು.

ದಿನವಿಡೀ ಕಂಡು ಬಂದ ಸಂಘರ್ಷ ಸೂರ್ಯ ಮುಳುಗಿದರೂ ಮುಗಿದಿರಲಿಲ್ಲ. ಹಲವಾರು ರಸ್ತೆಗಳಲ್ಲಿ ಅಲೆದಾಡುತ್ತಿದ್ದ ಗುಂಪುಗಳು ಸಂಘರ್ಷ ನಡೆಸುತ್ತಿದ್ದುದು ಕಂಡು ಬಂತು. ಕೆಲ ಗುಂಪುಗಳು ನಿಯೋಜಿತ ಪ್ರತಿಭಟನಾ ಸ್ಥಳಗಳಿಗೆ ಮರಳಿವೆ. ಆದರೆ, ಸಾವಿರಾರು ಸಂಖ್ಯೆಯ ಜನರು ರಾತ್ರಿಯಾದರೂ ದೆಹಲಿ ಬೀದಿ ಬಿಟ್ಟಿರಲಿಲ್ಲ.

ಮೊಘಲ್ ಕಾಲದ ಕೆಂಪು ಕೋಟೆಯ ಮೇಲಿಂದ ಪ್ರಧಾನ ಮಂತ್ರಿ ಸ್ವಾತಂತ್ರ್ಯೋತ್ಸವದ ವೇಳೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇಂತಹ ಸ್ಥಳದಲ್ಲಿ ಪ್ರತಿಭಟನಾಕಾರರು ದಾಳಿಕೋರತನದಿಂದ ವರ್ತಿಸುತ್ತಿದ್ದರು. ನಂತರ ಅವರನ್ನು ತೆರವುಗೊಳಿಸಲಾಯಿತು ಎಂದು ವರದಿಗಳು ತಿಳಿಸಿವೆ.

ದೆಹಲಿಯ ಐ.ಟಿ.ಒ.ದಲ್ಲಿ ನೂರಾರು ರೈತರು ಬಡಿಗೆ ಹಿಡಿದು ಪೊಲೀಸರ ಬೆನ್ನತ್ತಿದ ದೃಶ್ಯಗಳು ಕಂಡು ಬಂದವು. ಕೆಲವೆಡೆ ಟ್ರ್ಯಾಕ್ಟರ್‌ಗಳನ್ನು ತಡೆಯಾಗಿ ನಿಲ್ಲಿಸಲಾಗಿದ್ದ ಬಸ್‌ಗಳಿಗೆ ಅಪ್ಪಳಿಸಲಾಯಿತು.

ಪ್ರತಿಭಟನಾಕಾರರು ಐ.ಟಿ.ಒ.ದಲ್ಲಿ ಕಾರೊಂದನ್ನು ಧ್ವಂಸಗೊಳಿಸಿದರು. ಸಂಘರ್ಷ ತೀವ್ರಗೊಂಡು ಪೊಲೀಸರು ಅಶ್ರುವಾಯು ಸಿಡಿಸಿದರು. ಇಡೀ ರಸ್ತೆ ತುಂಬ ಕಟ್ಟಿಗೆ ಹಾಗೂ ಕಲ್ಲುಗಳು ಬಿದ್ದಿದ್ದವು.

ದಿನ ಕಳೆದಂತೆ ಸಾವಿರಾರು ಅಶಾಂತ ರೈತರು ಕೆಂಪು ಕೋಟೆಯ ಕಡೆ ಕಾಲ್ನಡಿಗೆಯಲ್ಲಿ, ಟ್ರ್ಯಾಕ್ಟರ್ ಮೂಲಕ ಹಾಗೂ ಕೆಲವರು ಕುದುರೆಗಳ ಮೇಲೇರಿ ಬಂದರು. ಕೆಲವರು ಕೆಂಪು ಕೋಟೆಯ ಸಂಕೀರ್ಣಕ್ಕೆ ಟ್ರ್ಯಾಕ್ಟರ್ ನುಗ್ಗಿಸಿದರು.

ಜನರನ್ನು ಕೆಂಪು ಕೋಟೆಯಿಂದ ಚೆದುರಿಸಲು ಲಾಠಿ ಪ್ರಹಾರ ನಡೆಸಬೇಕಾಯಿತು. ಸಾವು – ನೋವಿನ ವರದಿಗಳು ಬಂದಿದಲ್ಲವಾದರೂ, ಆಂಬುಲೆನ್ಸ್‌ಗಳು ಕೆಂಪು ಕೋಟೆಯ ಒಳಗೆ ಹೋದ ದೃಶ್ಯಗಳು ಕಂಡು ಬಂದಿವೆ.

ಶಹದಾರಾದಲ್ಲಿ ಚಿಂತಾಮಣಿ ಚೌಕದಲ್ಲಿ ರೈತರು ಕಾರುಗಳ ಕಿಟಕಿಗಳನ್ನು ಪುಡಿ ಮಾಡಿದ್ದಾರೆ. ಸಿಖ್‌ರ ಸಾಂಪ್ರದಾಯಿಕ ಖಡ್ಗ ಹಿಡಿದಿದ್ದ ಗುಂಪೊಂದು ಅಕ್ಷರಧಾಮ ದೇವಾಲಯದ ಭದ್ರತಾ ಸಿಬ್ಬಂದಿ ಜೊತೆ ಸಂಘರ್ಷ ನಡೆಸಿದ್ದಾರೆ. ನಂಗ್ಲೊಯಿ ಚೌಕ್‌ನಲ್ಲಿ ರೈತರು ಸಿಮೆಂಟ್ ತಡೆಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು ಅಶ್ರುವಾಯು ಸಿಡಿಸಿ ಅವರನ್ನು ಚೆದುರಿಸಿದರು.

ರೈತರು ದೆಹಲಿಯಲ್ಲಿ ಮಂಗಳವಾರ ನಡೆಸಿದ ಪ್ರತಿಭಟನೆಯನ್ನು ಬೆಂಬಲಿಸಿರುವ ಸಿಪಿಐ (ಎಂ), ಕೇಂದ್ರ ಸರ್ಕಾರ ಟ್ರ್ಯಾಕ್ಟರ್ ರಾಲಿ ವೇಳೆ ಸರಿಯಾಗಿ ನಡೆಸಿಕೊಂಡಿಲ್ಲ. ಅಶ್ರುವಾಯ ಸಿಡಿಸಿರುವುದು ಹಾಗೂ ಲಾಠಿ ಪ್ರಹಾರ ನಡೆಸಿರುವುದನ್ನು ಒಪ್ಪಲಾಗದು ಎಂದು ಹೇಳಿದೆ.

ಆದರೆ, ರೈತರ ಒಂದು ವರ್ಗ ಕೆಂಪು ಕೋಟೆಗೆ ನುಗ್ಗಿ ವರ್ತಿಸಿರುವ ರೀತಿಯನ್ನು ಖಂಡಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್, ದೇಶದ ಪ್ರಜಾಪ್ರಭುತ್ವದ ಸಂಕೇತದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.