ಹಡಗಲಿ ತಾ. ಸೋಗಿ ವೀರಭದ್ರೇಶ್ವರ ರಥೋತ್ಸವ : ಲಘು ಲಾಠಿ ಪ್ರಹಾರ

ಹೂವಿನಹಡಗಲಿ, ಜ.26- ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ ನಡೆದ ಸಂದರ್ಭದಲ್ಲಿ ಸರಳವಾಗಿ ಕೋವಿಡ್‌ ನಿಯಮದಂತೆ ಸರ್ಕಾರ ನಿಗದಿಪಡಿಸಿದ ಸ್ಥಳದ ಬದಲು ರಥವನ್ನು ಮುಂದೆ ಎಳೆದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ನೆರೆದಿದ್ದ ಭಕ್ತರ ನೂಕು ನುಗ್ಗಲಿನಿಂದ ಕೆಲವರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಕೋವಿಡ್‌ ನಿಯಮದಂತೆ ವಿಜೃಂಭಣೆಯಿಂದ, ಜನದಟ್ಟನೆಯೊಂದಿಗೆ ಹಬ್ಬ, ಜಾತೆ, ಉತ್ಸವಗಳನ್ನು ನಡೆಸುವಂತಿಲ್ಲ. ಆದರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಸರಳವಾಗಿ ರಥೋತ್ಸವವನ್ನು ಸೀಮಿತ ಗಡಿವರೆಗೆ ಮಾತ್ರ ಎಳೆಯಲು ತಾಲ್ಲೂಕು ಆಡಳಿತ ಅನುಮತಿಯನ್ನು ಕೊಟ್ಟಿತ್ತೆನ್ನಲಾಗಿದೆ. ಆದರೆ, ಪ್ರತಿ ವರ್ಷದಂತೆ ನಿಗದಿತ ಸ್ಥಳ (ಗಡಿ) ದ ವರೆಗೆ ರಥವನ್ನು ಎಳೆಯಲು ಮುಂದಾದ ಭಕ್ತರನ್ನು ತಡೆಯಲು ಪೊಲೀಸರು ಸೂಚನೆ ಕೊಟ್ಟಿದ್ದರೂ ಲೆಕ್ಕಿಸದ ಕಾರಣ ಲಾಠಿ ಪ್ರಹಾರ ನಡೆಸಿ ಜನರನ್ನು ಸರಿಸಿದರಾದರೂ, ರಥ ರಸ್ತೆಯ ಬದಿಯ ಅಂಗಡಿಯೊಂದಕ್ಕೆ ನುಗ್ಗಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಬೇರೆ ಊರುಗಳಿಂದ ಸೋಗಿ ಗ್ರಾಮಕ್ಕೆ ತೆರಳಿದ್ದ ಭಕ್ತರು ಆತಂಕದಿಂದ ಹಿಂದಿರುಗಿದರೆಂದು ಗೊತ್ತಾಗಿದೆ.

Leave a Reply

Your email address will not be published.