ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಮಹಿಳೆಯರಿಂದ ಉಪವಾಸ ಸತ್ಯಾಗ್ರಹ

ದಾವಣಗೆರೆ, ಜ.26- ಪಂಚಮಸಾಲಿ ಸಮಾ ಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ದಾವಣಗೆರೆ ಯಿಂದ ಮುಂದೆ ಸಾಗುವುದರೊಳಗೆ ಮುಖ್ಯಮಂತ್ರಿ ಗಳು ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಅಖಿಲ ಭಾರತ ಪಂಚಮಸಾಲಿ ಮಹಿಳಾ ಸಂಘ (ಚೆನ್ನಮ್ಮ ಬಳಗ)ದ ರಾಜ್ಯಾಧ್ಯಕ್ಷೆ ಶ್ರೀಮತಿ ವೀಣಾ ಕಾಶೆಪ್ಪನವರ್ ಹಕ್ಕೊತ್ತಾಯ ಮಂಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶ್ರೀಗಳ ಪಾದಯಾತ್ರೆ 289 ಕಿ.ಮೀ. ಕ್ರಮಿಸಿದೆ. ಪಾದಯಾತ್ರೆ ವೇಳೆ ಸಮಾಜದ ಮಹಿಳೆಯರು ಅಭೂತಪೂರ್ವ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ. ಮೀಸಲಾತಿ ನೀಡದೇ ಇದ್ದಲ್ಲಿ ರಾಣಿ ಚೆನ್ನಮ್ಮನ ಅಸ್ತ್ರವಾದ ಖಡ್ಗವನ್ನು ಪೂಜಿಸುವ ಮೂಲಕ ಬೆಂಗಳೂರು ವಿಧಾನಸೌಧದ ಬಳಿ ಸಮಾಜದ ಮಹಿಳೆಯರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಹೇಳಿದರು.

ಶೈಕ್ಷಣಿಕ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿ ನೀಡಬೇಕಾಗಿರುವುದರಿಂದ ಯಾವು ದೇ ಅಧ್ಯಯ ನದ ಅಗತ್ಯವಿಲ್ಲ. ಮೀಸಲಾತಿ ಇಲ್ಲದ ಕಾರಣ, ಸಮಾಜದ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದರೂ ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ.  ಸಮಾ ಜದ ಬೆವರ ಹನಿಯಿಂದ ಯಡಿಯೂರಪ್ಪ ನವರು ಮುಖ್ಯ ಮಂತ್ರಿಯಾಗಿದ್ದಾರೆ. ಇದೀಗ ಸಮಾಜದ ಋಣ ತೀರಿಸುವ ವೇಳೆ ಬಂದಿದೆ ಎಂದು ಹೇಳಿದರು.

ಹಗರಿಬೊಮ್ಮನಹಳ್ಳಿಯಲ್ಲಿ ಪಾದಯಾತ್ರೆ ಯಲ್ಲಿ ಭಾಗವಹಿಸಿದ್ದ 63 ವರ್ಷದ ವೃದ್ಧರೊಬ್ಬರು ಹುತಾತ್ಮರಾಗಿದ್ದಾರೆ. ಇಂತಹ ಹುತಾತ್ಮರ ಸಂಖ್ಯೆ ಹೆಚ್ಚಾಗಲು ಸರ್ಕಾರ ಕಾರಣವಾಗಬಾರದು. ಇದೇ ದಿನಾಂಕ 28 ಹಾಗೂ 29 ರಂದು ಹರಿಹರ ಹಾಗೂ ದಾವಣಗೆರೆಗೆ ಪಾದಯಾತ್ರೆ ಆಗಮಿಸಲಿದ್ದು, ಪುರುಷರು ಬಾರುಕೋಲು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕುರ್ಜಿಗೆ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡು ಮೀಸಲಾತಿಗಾಗಿ ಆಗ್ರಹಿಸಲಿದ್ದಾರೆ ಎಂದು ಹೇಳಿದರು.

ಈಗಾಗಲೇ ಹರಪನಹಳ್ಳಿಯಲ್ಲಿ ಸಮಾಜದ ಇಬ್ಬರೂ ಪೀಠಾಧಿಪತಿಗಳು ಒಂದಾಗಿದ್ದಾರೆ. ಸಮಾಜದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಗೊಂದಲ ಸೃಷ್ಟಿಸುವ ಸಮಯವೂ ಇದಲ್ಲ ಎಂದು ವೀಣಾ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮೀ ಕರಿಬಸಪ್ಪ, ಮಂಜುಳ, ವಿಜಯಾ ಮಹಾಂತೇಶ್, ಆಶಾ, ಮಂಜುಳಾ ಮಹೇಶ್, ಮಂಜುನಾಥ ಅಗಡಿ ಇತರರು ಉಪಸ್ಥಿತರಿದ್ದರು.