ಹರಿಹರದಲ್ಲಿ ಅನಾವರಣಗೊಂಡ ಪಂಚಮಸಾಲಿ ಸಮಾಜದ ಒಡಕು

ದಾವಣಗೆರೆ, ಜ. 25- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಪಾದಯಾತ್ರೆ ಹರಿಹರಕ್ಕೆ ಆಗಮಿಸಲು ಮೂರು ದಿನಗಳು ಬಾಕಿ ಇರುವಾಗಲೇ ಬೂದಿ ಮುಚ್ಚಿದ ಕೆಂಡದಂತಿದ್ದ ಪಂಚಮಸಾಲಿ ಸಮಾಜದಲ್ಲಿನ ಒಡಕು ಸೋಮವಾರ ಹರಿಹರದಲ್ಲಿ ಮತ್ತೆ ಅನಾವರಣಗೊಂಡಿದೆ.

ಹಗರಿಬೊಮ್ಮನಹಳ್ಳಿಯಲ್ಲಿ ಕೂಡಲ ಸಂಗಮ ಶ್ರೀಗಳ ಪಾದಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಹರಿಹರದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಹರಿಹರ ಪಂಚಮಸಾಲಿ ಮಠದ ಕೆಲವು ಭಕ್ತರನ್ನು ಕೆರಳಿಸಿತ್ತು.

ಸೋಮವಾರ ಬೆಳಿಗ್ಗೆ ಹರಿಹರದ ಹೊರ ವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್  ಪತ್ರಿಕಾಗೋಷ್ಠಿ ನಡೆಸಿ, ಹಗರಿಬೊಮ್ಮನಹಳ್ಳಿಯಲ್ಲಿ ಶಿವಶಂಕರ್ ಅವರು ಆಡಿರುವ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಮಾಜದ ಒಳಿತಿಗಾಗಿ ಕೂಡಲ ಸಂಗಮ ಶ್ರೀಗಳ ಪಾದಯಾತ್ರೆ ಸಮಂಜಸವಾಗಿದೆ. ಪಾದಯಾತ್ರೆ ಹರಪನಹಳ್ಳಿ ಪ್ರವೇಶಿಸಿದಾಗ ಸ್ವಾಗತಿಸಿ, ಬೆಂಬಲಿಸುವುದಾಗಿ ಹೇಳಿದ್ದರು. ಪಾದಯಾತ್ರೆಯ ಲಾಭವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಶಿವಶಂಕರ್ ಅವರಿಗೆ ಸೂಚ್ಯವಾಗಿ ಹೇಳಿದರು.

ಪ್ರತ್ಯೇಕ ಪತ್ರಿಕಾಗೋಷ್ಠಿಗಳಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಹಾಗೂ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತಿನ ಜಟಾಪಟಿ

ಹರಪನಹಳ್ಳಿಯಲ್ಲಿ ಒಂದೇ ವೇದಿಕೆಯಲ್ಲಿ ಸಮಾಗಮಗೊಂಡ ಇಬ್ಬರೂ ಪೀಠಾಧಿಪತಿಗಳು.

ಶ್ರೀಪೀಠದಲ್ಲಿ ಶ್ರೀಗಳು ಇದ್ದರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ, ಟ್ರಸ್ಟ್‌ನ ಅಧ್ಯಕ್ಷರು, ಸದಸ್ಯರ ಅನುಪಸ್ಥಿತಿಯಲ್ಲಿಯೇ ಪತ್ರಿಕಾಗೋಷ್ಠಿ ನಡೆಯಿತು.

ಇತ್ತ ಸಂಜೆ 4 ಗಂಟೆಗೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹರಿಹರದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ, ಚಂದ್ರಶೇಖರ ಪೂಜಾರ್ ಅವರ ಬಗ್ಗೆ ಕಿಡಿಕಾರಿದ್ದಾರೆ.

ನಿಮ್ಮ ಪಾಡಿಗೆ ನೀವು ಇರಿ. ನಮ್ಮನ್ನು ತಡವಿ ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ ಎಂದು ಖಾರವಾಗಿಯೇ ತಿರುಗೇಟು ನೀಡಿದ್ದಾರೆ. 

ಪಂಚಮಸಾಲಿ ಸಮಾಜದ ಮುಖಂಡರಾದ ಪರಮೇಶ್ವರ ಗೌಡ್ರು, ವಚನಾನಂದ ಶ್ರೀಗಳು ಇದುವರೆಗೆ ತಾಲ್ಲೂಕಿನ ಒಂದೂ ಮನೆಗೆ ತೆರಳಿ ಪಾದಪೂಜೆ ಮಾಡಿಸಿಕೊಂಡಿಲ್ಲ, ಸಮಾಜದ ಜನತೆಗೆ ಧರ್ಮದ ಆಚರಣೆಗಳ ಬಗ್ಗೆ ತಿಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ  ಜಯ ಮೃತ್ಯುಂಜಯ ಶ್ರೀಗಳ ಪಾದಯಾತ್ರೆ ಸೋಮವಾರ ಸಂಜೆ ಹರಪನಹಳ್ಳಿಗೆ ಪ್ರವೇಶಿಸಿದ್ದು, ಶ್ರೀ ವಚನಾನಂದ ಸ್ವಾಮೀಜಿಯವರು ತೆರಳಿ ಸ್ವಾಗತಿಸಿ, ಬೆಂಬಲ ಸೂಚಿಸಿದ್ದಾರೆ. ಇಬ್ಬರೂ ಶ್ರೀಗಳು ವೇದಿಕೆ ಮೇಲೆ ಸಮಾಗಮಗೊಂಡು ಸಮಾಜದಲ್ಲಿನ ಬಿರುಕು ನಿವಾರಣೆಗೆ ಮುಂದಾಗಿದ್ದಾರೆ.

ವಚನಾನಂದ ಶ್ರೀಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿರುವ ಹೆಚ್.ಎಸ್. ಶಿವಶಂಕರ್, ಕೂಡಲ ಸಂಗಮ ಶ್ರೀಗಳ ಪಾದಯಾತ್ರೆಯನ್ನು ಹರಿಹರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ನಿರ್ಧರಿಸಿದ್ದಾರೆ.

28ರಂದು ಹರಿಹರಕ್ಕೆ ಕೂಡಲ ಸಂಗಮ ಶ್ರೀಗಳ ಪಾದಯಾತ್ರೆ ಆಗಮಿಸಲಿದ್ದು, ಶ್ರೀಗಳ ವಾಸ್ತವ್ಯಕ್ಕೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವ್ಯವಸ್ಥೆ ಕಲ್ಪಿಸಿರುವುದಾಗಿ ಶಿವಶಂಕರ್ ಹೇಳಿದ್ದಾರೆ. ಇತ್ತ ಹರಿಹರ ಪೀಠದಲ್ಲಿಯೇ ಶ್ರೀಗಳು ವಾಸ್ತವ್ಯ ಮಾಡಲಿದ್ದಾರೆ ಎಂದು  ಹರಿಹರ ವೀರಶೈವ ಲಿಂಗಾಯತ ಪೀಠದ  ಧರ್ಮದರ್ಶಿ ಹೇಳಿದ್ದಾರೆ.