ಮೀಸಲಾತಿ ವಿಚಾರ ಶಾಂತಿ, ಸಹನೆ ಮೀರಿದೆ, ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯ

ಮೀಸಲಾತಿ ವಿಚಾರ  ಶಾಂತಿ, ಸಹನೆ ಮೀರಿದೆ,  ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯ

 ಹರಪನಹಳ್ಳಿ, ಜ. 25 – ಲಿಂಗಾಯತ ಪಂಚಮಸಾಲಿ ಸಮಾಜವನ್ನು ಮೀಸಲಾತಿ ಸೇರ್ಪಡೆಗೊಳಿಸುವ ವಿಚಾರದಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿದ್ದು ಶಾಂತಿ, ಸಹನೆ ಮೀರಿದೆ. ಇನ್ನೇನಿದ್ದರೂ ಕಿತ್ತೂರು ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯವಾಗಿದೆ ಎಂದು ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. 

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಪಂಚಮಸಾಲಿ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಮೀಸಲಾತಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹಾಗೂ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವ ಹಕ್ಕೊತ್ತಾಯಿಸಿ ಕೂಡಲ ಸಂಗಮದ ಲಿಂಗಾಯತ ಧಾರ್ಮಿಕ ಪೀಠದಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಂಚಲಕ್ಷ ಹೆಜ್ಜೆಗಳ ಬೃಹತ್ ಐತಿಹಾಸಿಕ ಪಾದಯಾತ್ರೆಯ ನಿಮಿತ್ತ ಜರುಗಿದ ಜನ ಜಾಗೃತಿ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಈ ದೇಶಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜ ತನ್ನದೇ ಆದ ಕೊಡುಗೆ ನೀಡಿದ್ದು, ಸಂವಿಧಾನ ಬದ್ದವಾದ 2ಎ ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡಬೇಕು ಎಂದರು.

 ಈ ದೇಶದ ಇತಿಹಾಸದಲ್ಲಿ ಹೋರಾಟ ಮಾಡದೇ ಯಾವುದೇ ಹಕ್ಕು ದೊರೆಯುವುದಿಲ್ಲ. ಈಗಾಗಲೇ ಮೀಸಲಾತಿ ವಿಚಾರವಾಗಿ ವಾಲ್ಮೀಕಿ ನಾಯಕ ಸಮಾಜ, ಹಾಲುಮತ ಕುರುಬ ಸಮಾಜಗಳು ಹೋರಾಟ ಮಾಡುತ್ತಿದ್ದು ಬಹು ಸಂಖ್ಯಾತ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹೋರಾಟದ ದಾರಿ ಅನಿವಾರ್ಯವಾಗಿದ್ದು, ಹರಿಹರ ಹಾಗೂ ಕೂಡಲ ಸಂಗಮ ಪೀಠಗಳು ಎರಡು ಕಣ್ಣುಗಳಾಗಿ ಕೆಲಸ ಮಾಡುತ್ತಿವೆ. ನಮ್ಮದು ಸರ್ಕಾರದ ವಿರುದ್ದ ಪ್ರತಿಭಟನೆ ಅಲ್ಲ, ಹಕ್ಕುಗಳನ್ನು ಪಡೆದುಕೊಳ್ಳಲು ನಮ್ಮ ಪ್ರತಿಭಟನೆ ಎಂದು ಹೇಳಿದರು. 

ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ ಹರಪನಹಳ್ಳಿ ನೆಲದಲ್ಲಿ ದಿವ್ಯ ಶಕ್ತಿ ಇದ್ದು ಎರಡು ಜಾತ್ರೆಗಳ ಯಶಸ್ಸಿಗೆ ಈ ನೆಲ ಕಾರಣವಾಗಿದ್ದು ಇಂದು ಎರಡು ಪೀಠಗಳು ಒಂದಾಗುವ ಮೂಲಕ ರಾಜ್ಯದ 80 ಲಕ್ಷ ಭಕ್ತರ ಆಸೆ ಈಡೇರಿದಂತಾಗಿದ್ದು, ಕಾಡಿ ಕೂಡಿದ್ದೇವೆ, ಇನ್ನು ಮುಂದೆ ಕೂಡಿ ಕಾಡುವುದಿಲ್ಲ ಎಂದು ಹೇಳಿದರು.

ವೀರಶೈವ ಒಳ ಪಂಗಡಗಳಿಗೆ ಸಿಕ್ಕ ಸೌಲಭ್ಯಗಳು ನಮಗೆ ಸಿಗದೇ ಇದ್ದಲ್ಲಿ ಹೋರಾಟದ ಹಾದಿ ಅನಿವಾರ್ಯವಾಗಿದ್ದು ನಮ್ಮಲ್ಲಿ ತಾತ್ವಿಕ ಭಿನ್ನಭಿಪ್ರಾಯಗಳು ಇದ್ದರೂ ಸೂರ್ಯ, ಚಂದ್ರರಂತೆ ಸಮಾಜಕ್ಕೆ ಬೆಳಕು ಕೊಡುವ ಕೆಲಸ ಮಾಡುತ್ತೇವೆ ಎಂದ ಅವರು ಇವತ್ತು ಚೆನ್ನಮ್ಮನ ವಿಜಯೋತ್ಸವವಾಗಿದ್ದು ಮೀಸಲಾತಿ ನಮ್ಮ ಜನ್ಮ ಸಿದ್ದ ಹಕ್ಕಾಗಿದ್ದು ನಾವಿಬ್ಬರೂ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳಂತೆ ಕೆಲಸ ಮಾಡುತ್ತೇವೆ. ನಮ್ಮ ಮಧ್ಯೆ ಗೋಡೆ ಕಟ್ಟಲು ಬರುವವರನ್ನು ನಾವು ಸಹಿಸುವುದಿಲ್ಲ ಎಂದರು.

 ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಕನ್ನಡ ನಾಡಿನಲ್ಲಿ ಅನೇಕ ಮಠಗಳು ಅನ್ನ ದಾಸೋಹ, ಅಕ್ಷರ ದಾಸೋಹ ನೀಡುವ ಮೂಲಕ ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕುವ ಮೂಲಕ ಸಮಸ್ತ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ ಎಂದರು. 

ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಹೋರಾಟ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಧ್ಯಕ್ಷ ಡಾ.ವಿಜಯನಂದ ಕಾಶೆಪ್ಪನವರ್‌, ವೀಣಾ ಕಾಶೆಪ್ಪನವರ್, ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಪಿ.ಬೆಟ್ಟನಗೌಡ, ಅಕ್ಷರ ಸೀಡ್ಸ್‌ ಮಾಲೀಕ ಅರಸಿಕೇರಿ ಎನ್. ಕೊಟ್ರೇಶ್‌, 2ಎ ಮೀಸಲಾತಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರ್‌, ಗೌರವಾಧ್ಯಕ್ಷ ಎಂ. ಪರಮೇಶ್ವರಪ್ಪ, ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್‌, ಎಸ್.ಪಿ. ಪ್ರಭಾಕರ್ ಗೌಡ, ಕಂಚಿಕೇರಿ ಎಂ.ಟಿ ಸುಭಾಶ್‌ಚಂದ್ರ, ವಿವಿಧ ಸಮಾಜಗಳ ಅಧ್ಯಕ್ಷರುಗಳಾದ ಕೆ. ಉಚ್ಚೆಂಗೆಪ್ಪ, ಬಂದೋಳ್ ಮಂಜುನಾಥ, ಎಂ. ರಾಜಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ಪಿ. ಕರಿಬಸಪ್ಪ, ಕಾರ್ಯದರ್ಶಿ ಬಸವರಾಜ ಅಡವಿಹಳ್ಳಿ, ತಿಮ್ಲಾಪುರ ನಾಗರಾಜ್‌, ಮುಖಂಡರುಗಳಾದ ಕುಂಚೂರು ವೀರಣ್ಣ, ಶಶಿಧರ್‌ ಪೂಜಾರ್‌, ಮತ್ತಿಹಳ್ಳಿ ಅಜ್ಜಣ್ಣ, ಎಂ.ಟಿ.ಬಸವನಗೌಡ, ಮಂಜುನಾಥ್‌ ಪೂಜಾರ್‌, ಬಿ.ಎಸ್. ಲಿಂಗರಾಜ್‌, ಹಾರಕನಾಳು ಪ್ರಕಾಶಗೌಡ, ವೀರೇಶ್, ನೀಲಗುಂದ ಸಿದ್ದೇಶ್, ಆರ್. ರೇವಣ್ಣ, ಬಸವರಾಜ, ಕೆಇಬಿ ಕರಿಬಸಪ್ಪ, ಪರಮೇಶ್, ಎ.ಜಿ. ಕೊಟ್ರಗೌಡ, ಕೊಟ್ರೇಶ್, ಎಂ.ಪಿ. ನಾಯ್ಕ, ನಿಟ್ಟೂರು ಸಣ್ಣಹಾಲಪ್ಪ, ಬಾಗಳಿ ಕೊಟ್ರೇಶಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.