ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರಿಗೆ ನೀರು: ಕಲ್ಲೇರುದ್ರೇಶ್ ಹರುಷ

ದಾವಣಗೆರೆ, ಜ.22- ಕಳೆದ 15 ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರಿಗೆ ನೀರು ನೀಡಬೇಕೆಂದು ಒತ್ತಾಯಿಸಿ ನಡೆಯು ತ್ತಿದ್ದ ಹೋರಾಟ ಈಗ ತಾರ್ಕಿಕ ಅಂತ್ಯ ಕಂಡಿದ್ದು, ಜಗಳೂರಿಗೆ 2.4 ಟಿಎಂಸಿ ನೀರು ಅಲೋಕೆಟ್ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ ಎಂದು ಭದ್ರಾ ಮೇಲ್ದಂಡೆ ತಂತ್ರಜ್ಞರ ಸಮಿತಿ ಸದಸ್ಯ ಕಲ್ಲೇರುದ್ರೇಶ್ ತಿಳಿಸಿದರು.

2007-08ರಲ್ಲಿ ಕುಮಾರಸ್ವಾಮಿ ಸರ್ಕಾರದಲ್ಲಿ ಮಂಜೂರಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಜಗಳೂರು ತಾಲ್ಲೂಕನ್ನು ಸೇರಿಸಿರಲಿಲ್ಲ. ಹೀಗಾಗಿ ನಮ್ಮ ತಾಲ್ಲೂಕಿಗೂ ಈ ಯೋಜನೆಯಡಿ ನೀರು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಹೋರಾಟದ ಫಲ ಸಿಕ್ಕಿದೆ. ಅಂದಾಜು 1000-1200 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಈ ನೀರಿನಿಂದ ತಾಲ್ಲೂಕಿನ 45 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ನಮ್ಮ ತಾಲ್ಲೂಕಿಗೆ ಇನ್ನೂ 2-3 ಟಿಎಂಸಿ ನೀರು ಬೇಕಾಗಿದ್ದು, ಮುಂದಿನ ದಿನಗಳಲ್ಲಿ ಅದಕ್ಕಾಗಿಯೂ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ನಮ್ಮ ತಾಲ್ಲೂಕಿಗೆ ನೀರು ಕೊಡಿಸಲು ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ,   ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕ್ಷೇತ್ರದ ಶಾಸಕರು, ಸಂಸದರು ಮತ್ತು ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಿದರು.

ಗೋಷ್ಠಿಯಲ್ಲಿ ನೀರಾವರಿ ಹೋರಾಟ ಸಮಿತಿಯ ವೀರಸ್ವಾಮಿ, ಸಂಪತಕುಮಾರ್, ಅರ್ಜುನ್, ಬನ್ನಿಗೌಡ್ರು ಸೇರಿದಂತೆ ಇತರರಿದ್ದರು.

Leave a Reply

Your email address will not be published.