ದೇವದಾಸಿ ಮಹಿಳೆಯರ ಪ್ರತಿಭಟನೆ

ದೇವದಾಸಿ ಮಹಿಳೆಯರ ಪ್ರತಿಭಟನೆ

ದಾವಣಗೆರೆ, ಜ.22- ದೇವದಾಸಿ ಮಹಿಳೆಯರಿಗೆ ಮಾಸಿಕ ಸಹಾಯಧನ ಹೆಚ್ಚಳ ಮಾಡುವುದು ಸೇರಿದಂತೆ ಇನ್ನಿತರೆ ಹಕ್ಕೊತ್ತಾಯಗಳನ್ನು 2021ರ ರಾಜ್ಯ ಬಜೆಟ್ ನಲ್ಲಿ ಪರಿಗಣಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಇಂದು ದೇವದಾಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಲ ಕಾಲ ಪ್ರತಿಭಟನಾ ಧರಣಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಮಾಸಿಕ ಸಹಾಯ ಧನವನ್ನು ಈ ಬಾರಿಯ ಬಜೆಟ್‍ನಲ್ಲಿ ಕನಿಷ್ಠ ಮೂರು ಸಾವಿರ ರೂ.ಗೆ ಹೆಚ್ಚಿಸಬೇಕು. ನೆರವು ನೀಡಲಿರುವ ಮಹಿಳೆಯರ ವಯೋಮಿತಿ ಷರತ್ತನ್ನು ತೆಗೆದು ಹಾಕಬೇಕು. ಗಣತಿ ಪಟ್ಟಿಯಿಂದ ಬಿಟ್ಟುಹೋದ ದೇವದಾಸಿ ಮಹಿಳೆಯರನ್ನು ತಕ್ಷಣವೇ ಸೇರ್ಪಡೆ ಮಾಡಿ ಅವರಿಗೂ ನೆರವು ನೀಡಬೇಕು. ದೇವದಾಸಿ ಮಹಿಳೆಯರ ಮಕ್ಕಳು ಪರಸ್ಪರ ವಿವಾಹವಾದಾಗಲೂ ಪ್ರೋತ್ಸಾಹ ಧನ ನೀಡಬೇಕು. ದೇವದಾಸಿ ಮಹಿಳೆಯರ ಮಕ್ಕಳ ವಿವಾಹದ ಪ್ರೋತ್ಸಾಹ ಧನ ನೀಡಲಿರುವ ಫಲಾನುಭವಿ ಆಯ್ಕೆಯಲ್ಲಿನ ವಂಚನೆಯ ಷರತ್ತುಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷೆ ಟಿ.ವಿ. ರೇಣುಕಮ್ಮ, ಜಿಲ್ಲಾಧ್ಯಕ್ಷೆ ಬಿ. ಹಿರಿಯಮ್ಮ,  ಎ. ಭರಮಪ್ಪ, ಜಿಲ್ಲಾ ಕಾರ್ಯದರ್ಶಿ ಚನ್ನಮ್ಮ, ಉಪಾಧ್ಯಕ್ಷೆ ಕರಿಬಸಮ್ಮ, ದೇವೀರಮ್ಮ, ಸೀತಮ್ಮ, ಮೈಲಮ್ಮ, ಜ್ಯೋತಿ, ವನಜಾಕ್ಷಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.