ಬೆಳೆಗೆ ಬೆಲೆಯಿಲ್ಲ, ಕಾಯ್ದೆಗಳಿಂದ ನೆಮ್ಮದಿ ಇಲ್ಲ

ಬೆಳೆಗೆ ಬೆಲೆಯಿಲ್ಲ, ಕಾಯ್ದೆಗಳಿಂದ ನೆಮ್ಮದಿ ಇಲ್ಲ

ದಾವಣಗೆರೆ, ಜ.19 – ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಇದೇ ಮೊದಲ ಬಾರಿಗೆ ರೈತರ ಹೋರಾಟ ಆರಂಭವಾಗಿ ಎರಡು ತಿಂಗಳಾದರೂ ಪರಿಹಾರ ಸಿಗುತ್ತಿಲ್ಲ. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಆಡಳಿತ ದಲ್ಲಿ ರೈತರಿಗೆ ರಕ್ಷಣೆಯಿಲ್ಲದಂತಾಗುತ್ತಿದೆ ಎಂದು ಎಐಸಿಸಿ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡುತ್ತಿದ್ದ ಅವರು, ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಕೃಷಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ದೇಶದ ಬೆನ್ನೆಲುಬಾದ ಅನ್ನದಾತರು ಹಾಗೂ ರೈತ ಕಾರ್ಮಿಕರು ಅನಾಥ ರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದರ ಅಂಗವಾಗಿ ನಾಳೆ ಬುಧವಾರ ಜ.20ರಂದು ಬೆಂಗಳೂರಿನಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಫ್ರೀಡಂ ಪಾರ್ಕ್ ಮೂಲಕ ವಿಧಾನಸಭೆ ಯವರೆಗೆ ಪಾದಯಾತ್ರೆ ನಡೆಸುವ ಮೂಲಕ ಕೇಂದ್ರದ ಕಾಯ್ದೆಗಳ ವಿರುದ್ಧ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗು ವುದು. ಈ ಹೋರಾಟದಲ್ಲಿ ರಾಜ್ಯದ 30 ಜಿಲ್ಲೆಗಳ ರೈತರು, ರೈತ ಕಾರ್ಮಿಕರು ಹಾಗೂ ರೈತರ ಹೋರಾಟಕ್ಕೆ ಬೆಂಬಲಿಸುವವರು ಭಾಗಿಯಾಗಲಿದ್ದಾರೆ ಎಂದರು.

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷವಾದರೂ ರೈತರ ಸಾಲ ಮನ್ನಾ ಮಾಡಿಲ್ಲ, ಕನಿಷ್ಠ ಬೆಂಬಲ ಬೆಲೆಗೆ ಕ್ರಮ ತೆಗೆದುಕೊಂಡಿಲ್ಲ. ಕೃಷಿ ಮಾರುಕಟ್ಟೆಯಲ್ಲಿ ಅದಾನಿ ಹಾಗೂ ಅಂಬಾನಿಯಂಥವರಿಗೆ ಬೆಂಬಲಿಸುವ ಕಾನೂನು ತರುತ್ತಿದ್ದಾರೆ. ಇದರಿಂದಾಗಿ ರೈತರ ಬೆಳೆಗಳಿಗೆ ಎ.ಪಿ.ಎಂ.ಸಿ.ಯಲ್ಲೇ ಆಗಲೀ, ಹೊರಗಡೆಯೇ ಆಗಲಿ ಉತ್ತಮ ಬೆಲೆ ಸಿಗಲು ಸಾಧ್ಯವಾಗುವುದಿಲ್ಲ. ದೊಡ್ಡ ವ್ಯಾಪಾರಸ್ಥರು ಹೇಳಿದ ದರಕ್ಕೆ ಇಳುವರಿ ಮಾರುವ ಪರಿಸ್ಥಿತಿ ಬರಲಿದೆ ಎಂದು ಮುನಿಯಪ್ಪ ಆತಂಕ ವ್ಯಕ್ತಪಡಿಸಿದರು.

ಪಂಜಾಬ್ ಹಾಗೂ ಹರಿಯಾಣಗಳ ರೈತರು ಕೊರೆಯುವ ಚಳಿ, ಮಳೆ, ಬಿಸಿಲು ಬಂದರೂ ಜಗ್ಗದೇ ಹೋರಾಟ ನಡೆಸುತ್ತಿದ್ದಾರೆ. ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳಿಗೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದವರು ಹೇಳಿದ್ದಾರೆ.

ಬರುವ ಅ.26ರಂದು ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರಾಲಿ ಸೇರಿದಂತೆ ಎಲ್ಲ ಹೋರಾಟಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಜನ ವಿರೋಧಿ ಕಾಯ್ದೆಗಳನ್ನು ರಚಿಸಿ, ರೈತರು ಹೋರಾಟ ನಡೆಸಿದರೆ ಪೊಲೀಸರ ಮೂಲಕ ತಡೆಗಟ್ಟುವ ಪ್ರಯತ್ನ ಮಾಡಿದರೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಮುನಿಯಪ್ಪ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಮುಖಂಡರಾದ ಬಿ.ಹೆಚ್. ವೀರಭದ್ರಪ್ಪ, ಎಲ್.ಹೆಚ್. ಹನುಮಂತಪ್ಪ, ಜಿ.ಪಂ. ಸದಸ್ಯ ಕೆ.ಹೆಚ್. ಬಸವಂತಪ್ಪ, ಓಬಳೇಶಪ್ಪ, ಅನಿತಾ ಬಾಯಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಲ್ಲಿಕಾರ್ಜುನ, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಅಯೂಬ್ ಪೈಲ್ವಾನ್, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.