ಪಂಚಮಸಾಲಿಗೆ ಸೌಲಭ್ಯಕ್ಕಾಗಿ ಜಯಮೃತ್ಯುಂಜಯ ಶ್ರೀ ಹೋರಾಟ

ಪಂಚಮಸಾಲಿಗೆ ಸೌಲಭ್ಯಕ್ಕಾಗಿ  ಜಯಮೃತ್ಯುಂಜಯ ಶ್ರೀ ಹೋರಾಟ

ಹರಿಹರದಲ್ಲಿ ಪಾದಯಾತ್ರೆ ಸ್ವಾಗತಿಸುವ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ

ಹೆಚ್‌.ಎಸ್‌. ಶಿವಶಂಕರ್‌

ಹರಿಹರ, ಜ19- ಕೂಡಲಸಂಗಮದ ಪಂಚಮಸಾಲಿ ಸಮಾಜದ ಗುರುಪೀಠಾಧ್ಯಕ್ಷ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆ ಪಂಚಮಸಾಲಿ ಸಮಾಜದವರ ಭವಿಷ್ಯ ಬದಲಾಯಿಸುವ ಹಾಗೂ ಸಮಾಜದ ಸಂಘಟನೆಯ ದೃಷ್ಟಿಯಿಂದ ಕೂಡಿದೆ ಎಂದು ಮಾಜಿ ಶಾಸಕರೂ ಆಗಿರುವ  ಪಂಚಮಸಾಲಿ ಸಮಾಜದ ಮುಖಂಡ ಹೆಚ್.ಎಸ್. ಶಿವಶಂಕರ್ ಹೇಳಿದರು.

ಇದೇ ದಿನಾಂಕ 29 ರಂದು ನಗರಕ್ಕೆ ಆಗಮಿಸಲಿರುವ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ ಪಂಚ ಲಕ್ಷ ಪಾದಯಾತ್ರೆ ಸ್ವಾಗತಿಸುವ ಹಿನ್ನೆಲೆಯಲ್ಲಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದ ಆವರಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆ ಯ ಅಧ್ಯಕ್ಷತೆ  ವಹಿಸಿ ಅವರು ಮಾತನಾಡಿದರು.

ಮನುಷ್ಯನಾಗಿ ಹುಟ್ಟಿದ ಮೇಲೆ ತಂದೆ-ತಾಯಿ ಋಣ, ಸಮಾಜದ ಋಣ ತೀರಿಸುವುದು ಸಹಜ ಧರ್ಮವಾಗಿದೆ. ಅದರಂತೆ ಪಂಚಮಸಾಲಿ ಗುರುಪೀಠಾಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀಗಳು ಪಂಚಮಸಾಲಿ ಸಮಾಜದಲ್ಲಿ ಭಕ್ತರು ಆರ್ಥಿಕ, ಶೈಕ್ಷಣಿಕ, ಧಾರ್ಮಿಕವಾಗಿ ಮತ್ತು ಉದ್ಯೋಗದಲ್ಲಿ ಹಿಂದೆ ಇರುವುದನ್ನು ಗಮನಿಸಿ, ಸಮಾಜದ ಮುಖಂಡರು ಮಾಡುತ್ತಿರುವ ಮೀಸಲಾತಿ ಹೋರಾಟ ಮಾಡಿ ಸಮಾಜದವರಿಗೆ ಸರಿಯಾದ ಸೌಲಭ್ಯಗಳನ್ನು ಕೊಡಿಸಬೇಕು ಎಂಬ ಮನಸ್ಸಿನೊಂದಿಗೆ ಈ ಹೋರಾಟದ ಹಾದಿಯನ್ನು ತುಳಿದಿದ್ದಾರೆ. ಇವರ ಪಾದಯಾತ್ರೆ ನಾಡಿನಾದ್ಯಂತ ಪಂಚಮಸಾಲಿ ಸಮಾಜದವರ ಜೊತೆಗೆ ಇತರೆ ಅನ್ಯ ವರ್ಗದ ಸಮಾಜದವರೂ ಸಹ ಅಭೂತಪೂರ್ವ ಬೆಂಬಲ ನೀಡುತ್ತಿರುವುದನ್ನು ನೋಡಿದಾಗ, ಶ್ರೀಗಳು ಮಾಡುತ್ತಿರುವ ಪಾದಯಾತ್ರೆ ಹೋರಾಟಕ್ಕೆ ಸರ್ಕಾರವು ಆದಷ್ಟು ಬೇಗನೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಕೇಂದ್ರ ಸರ್ಕಾರವು ಒಬಿಸಿ ಮಾನ್ಯತೆ ನೀಡಲಿದೆ ಎಂಬ ಭರವಸೆ ಹೊಂದಿರುವುದಾಗಿ ತಿಳಿಸಿದರು.

ವಾಲ್ಮೀಕಿ ಶ್ರೀಗಳು ಹಮ್ಮಿಕೊಂಡಿರುವ ಪಾದಯಾತ್ರೆ ಸಮಯದಲ್ಲಿ ಅವರ ಜೊತೆಗೆ ಹೆಜ್ಜೆ ಹಾಕಿರುವುದಾಗಿ ತಿಳಿಸಿದ ಅವರು, ತಾವು ನಿನ್ನೆ ನಗರದಲ್ಲಿ ಇರದೇ ಇದ್ದುದರಿಂದ ಕನಕ ಶ್ರೀಗಳ ಜೊತೆಗೆ ಹೆಜ್ಜೆ ಹಾಕಲು ಆಗಲಿಲ್ಲ. ನಾಳೆ ಕನಕ ಪೀಠದ ಶ್ರೀಗಳ ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.

ಇದೇ ದಿನಾಂಕ 29 ರಂದು ಹರಪನಹಳ್ಳಿ ಮಾರ್ಗವಾಗಿ ಹರಿಹರ ನಗರಕ್ಕೆ ಸಂಜೆ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಪಾದಯಾತ್ರೆ ಆಗಮಿಸಲಿದ್ದು, ಅವರನ್ನು ವಿಜೃಂಭಣೆಯಿಂದ ಸ್ವಾಗತಿಸುವ ಮೂಲಕ ಗಾಂಧಿ ಮೈದಾನದ ವೇದಿಕೆಗೆ ಕರೆ ತರಲಾಗುತ್ತದೆ. ವೇದಿಕೆ ಕಾರ್ಯಕ್ರಮಕ್ಕೆ ಶಾಸಕ ಬಸವನಗೌಡ ಪಾಟೀಲ್ ಮತ್ತು ಸಮಾಜದ ಹಿರಿಯ ಮುಖಂಡರು, ಶಾಸಕರು ಸಂಸದರು  ಆಗಮಿಸುತ್ತಾರೆ. ಮಧ್ಯ ಕರ್ನಾಟಕ ಭಾಗದಲ್ಲಿ ಆಗುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದ ಭಕ್ತರು ಮತ್ತು ಇತರೆ ವರ್ಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವರೆಂದು ನಿರೀಕ್ಷಿಸಲಾಗಿದೆ. ಈ ಸಮಾರಂಭಕ್ಕೆ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ದೀಟೂರು ಶೇಖರಪ್ಪ, ಉಪಾಧ್ಯಕ್ಷರಾಗಿ ಮಿಟ್ಲಕಟ್ಟೆ ಚಂದ್ರಪ್ಪ, ಖಜಾಂಚಿ ಯಾಗಿ ಬಿ. ಚಿದಾನಂದಪ್ಪ, ಸದಸ್ಯರಾಗಿ ಪರಮೇಶ್ವರಗೌಡ್ರು, ನಾಗಪ್ಪ ಇತರರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ತಾಪಂ ಸದಸ್ಯ ಸಿರಿಗೆರೆ ಕೊಟ್ರೇಶಪ್ಪ ಮಾತನಾಡಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಗಳ ಹೆಜ್ಜೆಗಳು ಸಹ ವಿಧಾನಸೌಧವನ್ನು ಮುಟ್ಟಿದಾಗ ಸರ್ಕಾರದಿಂದ 2ಎ ಮೀಸಲಾತಿ ಪಡೆಯಲು ಅವಕಾಶ ಸಿಗುತ್ತದೆ. ಎಲ್ಲಾ ಸಮಾಜದವರನ್ನು ಅಪ್ಪಿ ತಬ್ಬಿಕೊಂಡು ಪ್ರೀತಿಯಿಂದ ತೆಗೆದುಕೊಂಡು ಹೋಗುವಂತಹ ಸಮಾಜ ಪಂಚಮಸಾಲಿ ಸಮಾಜ. ಎಲ್ಲಾ ವರ್ಗದವರ ಹಿತ ಬಯಸುವ ಸಮಾಜ, ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದವರು ಇದ್ದರೂ ಸಹ ಒಮ್ಮತದ ಕೊರತೆಯಿಂದಾಗಿ ಬೆಳವಣಿಗೆ ಕುಂಠಿತವಾಗಿದೆ ಮತ್ತು ಶ್ರೀಗಳು ಸಮಾಜದ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು.

ಮಿಟ್ಲಕಟ್ಟೆ ಚಂದ್ರಪ್ಪ, ಕೆ. ಶಿವಲಿಂಗಪ್ಪ, ಪರಮೇಶ್ವರಗೌಡ್ರು ಸಿರಿಗೆರೆ, ಕೆ.ಜಿ. ರಾಮು, ಶಿವಕುಮಾರ್ ಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿ.ಚಿದಾನಂದಪ್ಪ, ನಗರಸಭೆ ಸದಸ್ಯ ಜಂಬಣ್ಣ, ಜಿಪಂ ಸದಸ್ಯೆ ಹೇಮಾವತಿ, ಶಂಕ್ರಪ್ಪ ದಾವಣಗೆರೆ, ವಿಜಯಕುಮಾರ್ ಮಲೇಬೆನ್ನೂರು, ಎ.ಕೆ. ನಾಗಪ್ಪ, ಸುರೇಶ್ ಹಾದಿಮನಿ, ನಾಗಪ್ಪ ಜಿ.ಕೆ. ಬಸಟ್ಟೆಪ್ಪ ಬೇವಿನಹಳ್ಳಿ, ನಿಂಗಪ್ಪ ಭಾನುವಳ್ಳಿ, ಜಿ.ನಂಜಪ್ಪ ರಾಗಿಣಿ ಹರ್ಲಾಪುರ, ಹುಗ್ಗಿ ಅಡಿವೇಶ್, ಶೀಲಾಕುಮಾರಿ, ಬಂಡೇರ್ ತಿಮ್ಮಣ್ಣ, ಬಿ. ಅಲ್ತಾಫ್,  ಅಂಗಡಿ ಮಂಜುನಾಥ್, ಅಡಿಕಿ ಕುಮಾರ್, ಲತಾ ಕೊಟ್ರೇಶ್, ಮಂಜುನಾಥ್ ಎನ್, ಕೊಟ್ರೇಶಪ್ಪ, ಕೆ.ಎಸ್. ಜಿ. ನಂಜಪ್ಪ, ಮಲೇಬೆನ್ನೂರು ಬಸವರಾಜ್, ಅಮರಾವತಿ ನಾಗರಾಜ್, ಡಿ. ಉಜ್ಜೇಶ್‌ ಮತ್ತು  ಇತರರು ಹಾಜರಿದ್ದರು.

Leave a Reply

Your email address will not be published.