ಜಿಲ್ಲೆಯಲ್ಲಿ ಇಂದಿನಿಂದ `ಒಂದು ಮುಷ್ಠಿ ಮಣ್ಣು ಹುತಾತ್ಮರ ಹೆಸರಿನಲ್ಲಿ’ ಅಭಿಯಾನ

ದಾವಣಗೆರೆ, ಜ.15- ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರ ಪರವಾಗಿ ಒಂದು ಮುಷ್ಠಿ ಮಣ್ಣು ಹುತಾತ್ಮರ ಹೆಸರಿನಲ್ಲಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಅಭಿಯಾನ ಆರಂಭಿಸಲಾಗಿದೆ ಎಂದು ಇಂಡಿಯನ್ ಯೂತ್ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿನಾಂಕ 9 ರಿಂದ ರಾಷ್ಟ್ರಾದ್ಯಂತ ಈ ಅಭಿಯಾನ ಆರಂಭವಾಗಿದ್ದು, ನಾಳೆ ದಿನಾಂಕ 16 ರ ಶನಿವಾರದಿಂದ ಜಿಲ್ಲೆಯ ನಾಲ್ಕು ಭಾಗಗಳಲ್ಲಿ ಅಭಿಯಾನ ನಡೆಸಿ ಮಣ್ಣು ಸಂಗ್ರಹಿಸಲಾಗುವುದು ಎಂದರು.

16 ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ದೊಡ್ಡ ಬೂದಿಹಾಳ್, 17 ರಂದು ಉತ್ತರ ಕ್ಷೇತ್ರದ ಶಾಮ ನೂರು, 18 ರಂದು ಹರಿಹರ ಹಾಗೂ 19ರಂದು ಮಾಯಕೊಂಡ ಗ್ರಾಮಗಳಲ್ಲಿ ಅಭಿಯಾನ ನಡೆಸಿ ಮಣ್ಣು ಸಂಗ್ರಹಿಸಿ, ಕೋರಿಯರ್ ಮೂಲಕ ಮುಖ್ಯ ಕಚೇರಿಗೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಅಭಿಯಾನದ ಮೂಲಕ ದೇಶಾದ್ಯಂತ ಸಂಗ್ರಹಿಸಿದ ಮಣ್ಣಿನಲ್ಲಿ ಭಾರತ ಭೂಪಟ ಸೃಷ್ಟಿಸಿ ಹುತಾತ್ಮ ರೈತರನ್ನು ಸ್ಮರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಖಾಲಿದ್ ಪೈಲ್ವಾನ್, ಖಾಜಾ ಮೈನುದ್ದೀನ್, ಸೈಯದ್ ಇರ್ಫಾನ್ ಉಪಸ್ಥಿತರಿದ್ದರು

Leave a Reply

Your email address will not be published.