ನಾನು - ನೀವು ಬೇರೆಯಲ್ಲ

ನಾನು - ನೀವು ಬೇರೆಯಲ್ಲ

ಹರ ಜಾತ್ರಾ ಸಮಾವೇಶ ಉದ್ಘಾಟನೆ ನಂತರ ವಚನಾನಂದ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಪರಸ್ಪರ ಎಳ್ಳು ಬೆಲ್ಲ ತಿನ್ನಿಸಿದರು. ಎಳ್ಳು ಬೆಲ್ಲ ತಿಂದು ಎಳ್ಳು ಬೆಲ್ಲದಂತೆಯೇ ಇರೋಣ ಎಂದು ಶ್ರೀಗಳು ಹೇಳಿದರು.

ಹರಿಹರ, ಜ. 14- ನಾನು-ನೀವು ಬೇರೆಯಲ್ಲ. ಸದಾ ನಿಮ್ಮೊಂದಿಗಿದ್ದೇನೆ. ಬಸವಾದಿ ಶರಣರ ಕನಸಿನ ಸಮ ಸಮಾಜ ನಿರ್ಮಿಸುವ ಕಾರ್ಯದಲ್ಲಿ ನಾವೆಲ್ಲಾ ಮುಂದಾಗೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಂಚಮಸಾಲಿ ಸಮಾಜಕ್ಕೆ ಕರೆ ನೀಡಿದರು.

ಹರಿಹರದ ಹೊರ ವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ಹರಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀಮಠ ಸಮಬಾಳು-ಸಮಪಾಲು ಎಂಬ ಧ್ಯೇಯ ವನ್ನು ಪಾಲಿಸುತ್ತಿದೆ. ಶ್ರೀ ವಚನಾನಂದ ಸ್ವಾಮೀಜಿ ಅವರ ಮುಂದಾಳತ್ವದಲ್ಲಿ ಕಲ್ಯಾಣ ಕಾರ್ಯಗಳನ್ನು ರೂಪಿಸುತ್ತಿದೆ. ಶ್ರೀಗಳು ಅಧ್ಯಾತ್ಮ ಹಾಗೂ ಯೋಗ ವಿದ್ಯೆಯನ್ನು ವಿಶ್ವದಾದ್ಯಂತ ಪಸರಿಸಿ, ಇದೀಗ ಸಮಾಜದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಸ್ವಾಭಿಮಾನ, ಸ್ವಾವಲಂಬನೆ, ಸಹಕಾರ, ಸಂಘಟನೆ, ಸಹಬಾಳ್ವೆ ಎಂಬ ಧ್ಯೇಯಗಳನ್ನು ಸಾಕಾರಗೊಳಿಸುವುದೇ ಹರಜಾತ್ರೆ ಉದ್ದೇಶವಾಗಿದೆ ಎಂದರು.

ನೂರಾರು ತತ್ವಜ್ಞಾನಿಗಳು, ಸಮಜ ಸುಧಾರಕರು, ಪ್ರಬಲ ನಾಯಕರು, ಸ್ವಾತಂತ್ರ್ಯ ಹೋರಾಟಗಾರರನ್ನು ಪಂಚಮಸಾಲಿ ಸಮಾಜ  ನಾಡಿಗೆ ನೀಡಿದೆ. ಅವರೆಲ್ಲಾ  ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು. 12ನೇ ಶತಮಾನ ಮಹತ್ವದ ಶತಮಾನವಾಗಿತ್ತು. ಅಂದು ಬಸವಣ್ಣನವರು ಸಮಾನತೆಯ ಧ್ವನಿ ಎತ್ತಿದ್ದರು. ಕಾಯಕವೇ ಕೈಲಾಸ ಎಂಬ ದುಡಿಮೆಯ ಮಂತ್ರ ಬೋಧಿಸಿದ್ದರು. ಬಸವಣ್ಣನವರ ಸಮಾನತೆಯ ತತ್ವವನ್ನು ಪಂಚಮಸಾಲಿ ಸಮಾಜ ಪಾಲಿಸುತ್ತಿದೆ ಎಂದು ನುಡಿದರು.

 

ಸಚಿವ ಮುರುಗೇಶ್ ನಿರಾಣಿ ಅವರ ಪ್ರಯತ್ನದಿಂದ ವೀರಶೈವ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿ 3 ಬಿಗೆ ಸೇರಿಸುವ ಕೆಲಸವನ್ನು ಸರ್ಕಾರ ಮಾಡಿತ್ತು ಎಂದು ನೆನಪಿಸಿಕೊಂಡ ಮುಖ್ಯಮಂತ್ರಿಗಳು,  ಕೆಲ ದಿನಗಳ ಹಿಂದಷ್ಟೇ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ, ಬಡ ವರ್ಗದ ಏಳ್ಗೆಗಾಗಿ 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

ಕೇಂದ್ರ ಸಂಸದೀಯ ಕಾರ್ಯದರ್ಶಿಗಳೂ, ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರೂ ಆದ ಪ್ರಹ್ಲಾದ್ ಜೋಷಿ ಮಾತನಾಡುತ್ತಾ, ಕೃಷಿ ಹಾಗೂ ಗೋವಿಗೂ ಅವಿನಾಭಾವ ಸಂಬಂಧವಿದೆ. ಕೃಷಿ ಮಾಡುವ ಪಂಚಮಸಾಲಿ ಸಮಾಜದಿಂದಲೇ ಗೋ ಸಮುದಾಯ ಉಳಿಯಲು ಕಾರಣವಾಗಿದೆ ಎಂದರು.

ಹರಿಹರದ ತುಂಗಭದ್ರಾ ನದಿ ಸ್ವಚ್ಛತೆ ಬಗ್ಗೆ ರಾಜ್ಯದ ಮೂಲಕ ಪ್ರಸ್ತಾವನೆ ಸಲ್ಲಿಸಿದರೆ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡುತ್ತಾ, ಶ್ರಮ,  ಪ್ರೀತಿ, ವಿಶ್ವಾಸ ಇವು ಪಂಚಮಸಾಲಿಗರ  ಗುಣಧರ್ಮಗಳು. ಬೇರೆ ಬೇರೆ ವೃತ್ತಿಯಲ್ಲಿದ್ದವರು ಕಾಲಕ್ಕನುಗುಣವಾಗಿ ವೃತ್ತಿ ಬದಲಿಸಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಪಂಚಮಸಾಲಿ ಸಮಾಜ ಮಣ್ಣಿನ ಜೊತೆ ವಿಶ್ವಾಸ ಹೊಂದಿ, ಕೃಷಿ ಕಾಯಕದಲ್ಲಿದ್ದಾರೆ ಎಂದರು.

2008ರಲ್ಲಿ ಕ್ಯಾಬಿನೆಟ್‌ನಲ್ಲಿ ಸಮಾಜಕ್ಕೆ 3ಬಿ ಮೀಸಲಾತಿ ಕಲ್ಪಿಸಿ ಉತ್ತಮ ಬುನಾದಿ ಹಾಕಿಕೊಟ್ಟವರು ಮುಖ್ಯಮಂತ್ರಿಗಳು ಎಂದರು. ಸರ್ಕಾರ ಹಾಗೂ ಸಮಾಜ ಅನ್ಯೋನ್ಯವಾಗಿದ್ದರೆ ಅಭಿವೃದ್ಧಿ ಸಾಧ್ಯ. ಹಿಮಾಲಯದಲ್ಲಿ ತಪ್ಪಸ್ಸು ಮಾಡಿದ ಶ್ರೀಗಳು, ಸಮಾಜವನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ಯಲಿ ಎಂದು ಆಶಿಸಿದರು.

ಸ್ವಾವಲಂಬಿ ಸಂದೇಶ ನೀಡಿದ ಸಚಿವ ಮುರುಗೇಶ್ ನಿರಾಣಿ, ಸಮಾಜ ಬಾಂಧವರು ಕೃಷಿ, ಉದ್ಯಮ ಸೇರಿದಂತೆ ಯಾವುದೇ ವೃತ್ತಿಯಲ್ಲಿ ನಿರತರಾದರೂ,  ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಿದರು.

ಈ ಹಿಂದೆ ಜಾತಿ ಕಾಲಂನಲ್ಲಿ ಪಂಚಮಸಾಲಿ ಹೆಸರು ಬರುವಂತೆ ಮಾಡಿ, 3ಬಿ ಮೀಸಲಾತಿ ಕೊಟ್ಟಿದ್ದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು. ಸಮಾಜಕ್ಕೆ ಮುಖ್ಯಮಂತ್ರಿಗಳ ಸಹಕಾರ ಮೊದಲಿನಿಂದಲೂ ಇದೆ. ಸಮಾಜವು ಸದಾ ಅವರ ಬೆಂಬಲಕ್ಕಿರಬೇಕು. ಮುಂದಿನ ದಿನಗಳಲ್ಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಶ್ವಾಸವೂ ಇದೆ ಎಂದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ರೈತರ ಪರವಾಗಿದ್ದು, ಕೆಲ ರಾಜಕಾರಣಿಗಳು ಜನತೆಗೆ ಕಾಯ್ದೆಗಳ ಬಗ್ಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪುತ್ರರಂತೆಯೇ ನನ್ನ ಮೇಲೂ ಪ್ರೀತಿ ತೋರಿಸಿದ್ದಾರೆ. ನಮ್ಮಗಳ ನಡುವೆ  ಯಾವುದೇ ಬೇಧ-ಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.

ನವಲಗುಂದ ಶಾಸಕರೂ, ಬೆಂಗಳೂರು ನಗರ ಮೂಲಭೂತ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಂಕರ ಪಾಟೀಲ ಮುನೇನಕೊಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಯಾರನ್ನೂ ದ್ವೇಷಿಸಿದೆ ಎಲ್ಲರೊಂದಿಗೂ ವಿಶ್ವಾಸದಿಂದಿರುವ ಸಮಾಜ ಪಂಚಮಸಾಲಿ ಸಮಾಜ. ಸಮಾಜಕ್ಕೆ ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಸಮಾಜದ ಯುವ ಜನಾಂಗ ಸ್ವಾಲಂಬಿಗಳಾಗಿ ಬದಕಲು ಪಣ ತೊಡಬೇಕು. ಈ ನಿಟ್ಟಿನಲ್ಲಿ ಯವಕರಿಗೆ ಮೌಲ್ಯ ಶಿಕ್ಷಣದ ತರಬೇತಿ ನೀಡುವ ಉದ್ದೇಶವಿದೆ ಎಂದರು.

ಉಪ ಮುಖ್ಯಮಂತ್ರಿಗಳೂ, ಉನ್ನತ ಶಿಕ್ಷಣ ಹಾಗೂ ಐಟಿ-ಬಿಟಿ ಸಚಿವರೂ ಆದ ಡಾ.ಸಿ.ಎಸ್. ಅಶ್ವತ್ ನಾರಾಯಣ, ಪಂಚಮ ಸಾಲಿ ಸಮಾಜ ಭೂಮಿಯನ್ನು ನಂಬಿ ಬದುಕುವಂತಹದ್ದು. ವೃತ್ತಿಯಲ್ಲಿ ಶ್ರದ್ಧೆ, ಆಸಕ್ತಿ, ಪರಿಶ್ರಮ ಇದ್ದಾಗ ಅರ್ಥ ಪೂರ್ಣ ಬದುಕು ಸಾಧ್ಯ. ಕೃಷಿಯಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಕರೆ ನೀಡಿದರು.

ಸಮಾರಂಭಕ್ಕೂ ಮುನ್ನ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹರದ್ವರ ಉದ್ಘಾಟಿಸಿದರು.

ಮಹಾರಾಷ್ಟ್ರದ ನಿಕಟಪೂರ್ವ ಮುಖ್ಯಮಂತ್ರಿ ದೇವೇಂದ್ರ  ಫಡ್ನವೀಸ್ ವರ್ಚುಯಲ್ ಮೂಲಕ ಮಾತನಾಡಿದರು. ಸಂಸದ ಜಿ.ಎಂ. ಸಿದ್ದೇಶ್ವರ, ನಗರಾಭಿವೃದ್ಧಿ ಸಚಿವ ಭೈರತಿ  ಬಸವರಾಜ್, ಶಾಸಕರುಗಳಾದ  ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರ, ಪ್ರೊ.ಲಿಂಗಣ್ಣ,  ಸಮಾಜ ಮುಖಂಡರಾದ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ರಾಜ್ಯ ಸರ್ಕರಾದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ್ ಸ್ವಾಗತಿಸಿದರು. ಕು.ಅತಿಥಿ ಕುರುವತ್ತಿ ಪ್ರಾರ್ಥಿಸಿದರು.  ಸುಮಾ ನಾಗೇಶ್, ರಚನಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.


ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, 
knmallu@gmail.com

Leave a Reply

Your email address will not be published.