2ನೇ ವರ್ಷದ ಹರ ಜಾತ್ರಾ ಮಹೋತ್ಸವಕ್ಕೆ ಸಜ್ಜುಗೊಂಡ ಪಂಚಮಸಾಲಿ ಜಗದ್ಗುರು ಪೀಠ

2ನೇ ವರ್ಷದ ಹರ ಜಾತ್ರಾ ಮಹೋತ್ಸವಕ್ಕೆ ಸಜ್ಜುಗೊಂಡ ಪಂಚಮಸಾಲಿ ಜಗದ್ಗುರು ಪೀಠ

ಹರಿಹರ ಸಮೀಪ ಇರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಇಂದು ಮತ್ತು ನಾಳೆ 2ನೇ ವರ್ಷದ ಹರ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಮಠ ನವ ವಧುವಿನಂತೆ ಸಿಂಗಾರಗೊಂಡಿದೆ.

ಜಾತ್ರೆಗಾಗಿ ಕೈಗೊಂಡಿದ್ದ ಎಲ್ಲಾ ಸಿದ್ದತೆಗಳಿಗೆ ಬುಧವಾರ ಸಂಜೆ ಅಂತಿಮ ರೂಪ ಕೊಡಲಾಯಿತು. ಶ್ರೀ ವಚನಾನಂದ ಸ್ವಾಮೀಜಿ ಅವರು ಖುದ್ದು ಹಾಜರಿದ್ದು, ಜಾತ್ರೆಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

ಮಠದ ಹಿರಿಯ ಜಗದ್ಗುರು ಡಾ. ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ ಪೀಠ ಹಾಗೂ ಸಮಾಜದ ಜವಾಬ್ದಾರಿ ವಹಿಸಿಕೊಂಡ ಶ್ವಾಸ ಗುರು ಎಂದೇ ಖ್ಯಾತಿ ಪಡೆದಿರುವ ಹಾಗೂ ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ವಿಶ್ವಾದ್ಯಂತ ಲಕ್ಷಾಂತರ ಯೋಗ ಶಿಷ್ಯರನ್ನು, ಅಭಿಮಾನಿಗಳನ್ನು ಹೊಂದಿ ರುವ ಶ್ರೀ ವಚನಾನಂದ ಸ್ವಾಮೀಜಿ ಅವರು ಪಂಚಮಸಾಲಿ ಸಮುದಾಯದ ಅಭಿವೃದ್ಧಿಗಾಗಿ ಹೊಸ ದೃಷ್ಟಿಕೋನ, ಹೊಸ ಹುರುಪು ಹಾಗೂ ನವ ಚೈತನ್ಯವನ್ನು ಹುಟ್ಟಿ ಹಾಕಿದ್ದಾರೆ. ಶ್ರೀಗಳು ಪೀಠ ಅಲಂಕರಿಸಿದ ನಂತರ ಮಠದಲ್ಲಿ ಒಂದು ಹೊಸ ಸಂಚಲನ  ಮೂಡಿತು. ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ, ಹಲವು ಮಹತ್ವದ ಹೋರಾಟ, ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ರಾಜಕೀಯ ಪ್ರಾತಿನಿಧ್ಯಕ್ಕಾಗಿ ದನಿ ಎತ್ತಿದರು. ಪ್ರತಿ ವರ್ಷ ಜನವರಿ 14 ಮತ್ತು 15 ರ ಸಂಕ್ರಾಂತಿಯಂದು ಹರ ಜಾತ್ರಾ ಮಹೋತ್ಸವ ವನ್ನು ಆಚರಿಸಲು ಕಳೆದ ವರ್ಷದಿಂದ ಮುನ್ನಡಿ ಬರೆದರು. ಆ ಮೂಲಕ ಸಮು ದಾಯದಲ್ಲಿ ಒಗ್ಗಟ್ಟು ಪ್ರದರ್ಶಿಸಲು, ಅರಿತುಕೊಳ್ಳಲು, ಬೆರೆ ಯಲು, ದನಿ ಎತ್ತಲು ಹರ ಜಾತ್ರೆ ಒಂದು ವೇದಿ ಕೆಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದರು.

ಸಮುದಾಯದ ಪ್ರಮುಖ ಜಾತ್ರೆಯಾಗಿ ಹೊರಹೊಮ್ಮಿರುವ ಹರ ಜಾತ್ರೆಗಾಗಿ ಈ ವರ್ಷ ಜರ್ಮನಿ ಮಾದರಿಯಲ್ಲಿ 300×400 ಅಳತೆಯ ಸಭಾ ಮಂಟಪ ಮತ್ತು 30×80 ಅಳತೆಯ ಸುಸಜ್ಜಿತ ವೇದಿಕೆಯನ್ನು ಪೂರ್ವಮುಖವಾಗಿ ಹರ ಧ್ಯಾನ ಮಂದಿರದ ಮುಂಭಾಗದಲ್ಲಿ ಹಾಕಲಾಗಿದೆ.

ಸುಮಾರು 25 ಸಾವಿರ ಜನ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ವೀಕ್ಷಣೆಗಾಗಿ 8 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಮಠದ ಹಿಂಭಾಗದಲ್ಲಿರುವ ವಿಶಾಲವಾದ ಜಾಗದಲ್ಲಿ ಸುಮಾರು 50 ಸಾವಿರ ಜನರಿಗೆ ಊಟದ ಹಾಗೂ ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಜ. 14 ರ ಬೆಳಿಗ್ಗೆ ಉಪ್ಪಿಟ್ಟು, ಟೊಮ್ಯಾಟೋ ಬಾತ್‌ ಉಪಹಾರವಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಲಾಡು, ಅನ್ನ-ಸಂಬಾರು, ಪಲ್ಯ ಊಟ ಇರುತ್ತದೆ. ಜ. 15 ರ ಬೆಳಿಗ್ಗೆ ಉಪ್ಪಿಟ್ಟು-ಕೇಸರಿ ಬಾತ್‌, ಮಧ್ಯಾಹ್ನ ರೊಟ್ಟಿ, ಲಾಡು, ಗೋಧಿ ಪಾಯಸ, ಅನ್ನ-ಸಾಂಬಾರು, ಪಲ್ಯ ಊಟದ ತಯಾರಿ ಮಾಡಲಾಗಿದೆ ಎಂದು ಪೀಠದ ಧರ್ಮದರ್ಶಿ ಚಂದ್ರಶೇಖರ್‌ ಪೂಜಾರ್‌ `ಜನತಾವಾಣಿ’ಗೆ ಮಾಹಿತಿ ನೀಡಿದರು.

ಪಾರ್ಕಿಂಗ್‌ ವ್ಯವಸ್ಥೆ : ಮಠದ ಸಮೀಪ 13 ಎಕರೆ ಜಾಗದಲ್ಲಿ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಿದ್ದು, ಎಲ್ಲಾ ಸ್ಥಳಗಳಲ್ಲಿ ಸೂಕ್ತ ನಿರ್ವಹಣೆಗಾಗಿ ಪೊಲೀಸ್‌ ಇಲಾಖೆಯ ಜೊತೆಗೆ ನಮ್ಮ ತಂಡಗಳನ್ನು ನೇಮಿಸಲಾಗಿದೆ ಎಂದರು.

ಅಭಿವೃದ್ಧಿ ಪರ್ವ : ಶ್ರೀಗಳು ಪೀಠದ ಅಧಿಕಾರ ವಹಿಸಿಕೊಂಡ ನಂತರ ಮಠದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನ ಪಡೆಯುವಲ್ಲಿ ಶ್ರೀಗಳು ಯಶಸ್ವಿಯಾಗಿದ್ದಾರೆ.

ಮಠದ ಒಳಗಡೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ 30 ಲಕ್ಷ ರೂ. ವೆಚ್ಚದಲ್ಲಿ ಹರ ದ್ವಾರ ನಿರ್ಮಿಸಲಾಗಿದೆ. 8 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ, 4 ಕೋಟಿ ರೂ. ವೆಚ್ಚದಲ್ಲಿ ದಾಸೋಹ ಭವನ ಹಾಗೂ 2.80 ಕೋಟಿ ರೂ. ವೆಚ್ಚದಲ್ಲಿ ಮಠದ ಸುತ್ತಲು ತಡೆಗೋಡೆ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ.

ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬೃಹತ್‌ ಧ್ಯಾನ ಮಂದಿರ ಹಾಗೂ ಸಮುದಾಯ ಭವನ ಮತ್ತು 3.50 ಕೋಟಿ ರೂ. ವೆಚ್ಚದಲ್ಲಿ ಪುಷ್ಕರಣಿ ನಿರ್ಮಿಸುವ ಯೋಜನೆಯನ್ನು ಶ್ರೀಗಳು ಹೊಂದಿದ್ದು, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಚಂದ್ರಶೇಖರ್‌ ಪೂಜಾರ್‌ ತಿಳಿಸಿದರು.

ಹರ ಜಾತ್ರೆಯ ಕಾರ್ಯಕ್ರಮಗಳು ಇಂದು  ಗುರುವಾರ ಬೆಳಿಗ್ಗೆ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ  ಹರದ್ವಾರ ಉದ್ಘಾಟಿಸಲಿದ್ದಾರೆ.  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಂಕ್ರಾಂತಿ ಸಂಭ್ರಮ ಉದ್ಘಾಟಿಸಲಿದ್ದು, ಮಹಾರಾಷ್ಟ್ರದ ನಿಕಟಪೂರ್ವ ಮುಖ್ಯಮಂತ್ರಿ ಸ್ವಾವಲಂಬಿ ಸಮಾವೇಶ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಭೂ ತಪಸ್ವಿ ಸಮಾವೇಶ ನಡೆಯಲಿದ್ದು, ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಶಿವಯೋಗಿಗಳು, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಜಾತ್ರಾ ಸಮಿತಿ ಅಧ್ಯಕ್ಷ ಬಿ. ಲೋಕೇಶ್‌, ಹಿರಿಯರಾದ ಸಿರಿಗೆರೆ ನಾಗನಗೌಡ್ರು, ಪೀಠದ ಉತ್ಸಾಹಿ ಧರ್ಮದರ್ಶಿ ಚಂದ್ರಶೇಖರ್‌ ಪೂಜಾರ್‌ ಮತ್ತು ಗುತ್ತೂರು ಕರಿಬಸಪ್ಪ ಸೇರಿದಂತೆ ಇನ್ನೂ ಅನೇಕರು ಜಾತ್ರೆ ಯಶಸ್ಸಿಗಾಗಿ ಶ್ರಮ ವಹಿಸಿದ್ದಾರೆ.


ಜಿಗಳಿ ಪ್ರಕಾಶ್‌,
jigaliprakash@gmail.com

Leave a Reply

Your email address will not be published.