ರೆವಿನ್ಯೂ ನಿವೇಶನ ಸಕ್ರಮಕ್ಕೆ ಚಿಂತನೆ

ಶೀಘ್ರ ಕಾಯ್ದೆ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

ದಾವಣಗೆರೆ, ಜ.11-  ಮಹಾನಗರ ಪಾಲಿಕೆಗಳು ಸೇರಿದಂತೆ ರಾಜ್ಯದ ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ, ವ್ಯಾಪ್ತಿಯಲ್ಲಿನ ರೆವಿನ್ಯೂ ನಿವೇಶನಗಳನ್ನು ಸಕ್ರಮಗೊಳಿಸಲು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.

ನಗರ ಹೊರ ವಲಯದ ಪ್ರವಾಸಿ ಮಂದಿರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನೂತನ ಕಾಯ್ದೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದರು.

ಎರಡು ಸಭೆಗಳಲ್ಲಿ ರೆವಿನ್ಯೂ ನಿವೇಶನ ಸಕ್ರಮದ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಸಭೆಗಳಲ್ಲಿ ಸಾಧಕ-ಬಾಧಕಗಳನ್ನು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ದಾವಣಗೆರೆ ವ್ಯಾಪ್ತಿಯಲ್ಲಿ ಸುಮಾರು 65 ಸಾವಿರ ರೆೆವಿನ್ಯೂ ನಿವೇಶನ ಹಾಗೂ ಮನೆಗಳಿರುವುದಾಗಿ ಅವರು ಹೇಳಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ವೇಗಕ್ಕೆ ಸೂಚನೆ: ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಆದಷ್ಟೂ ವೇಗ ವಾಗಿ ಪೂರ್ಣಗೊಳಿಸಿ, ಯಾವುದೇ ಹಣ ವಾಪಾಸ್ ಹೋಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಸಚಿವರು ಹೇಳಿದರು.

ನೂತನ ಸ್ಮಾರ್ಟ್ ಸಿಟಿ ಕಚೇರಿ ಕೆಲಸವನ್ನು ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದೇನೆ. ಸ್ಮಾರ್ಟ್ ಸಿಟಿ ಅನುದಾನದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪಾರ್ಕುಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂಬರುವ ಫೆ.18ಕ್ಕೆ ಸಾರಿಗೆ ಸಚಿವರು ಹಾಗೂ ಜಿಲ್ಲೆಯ ಸಂಸದ, ಶಾಸಕರೊಟ್ಟಿಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಸ್ಮಾರ್ಟ್ ಸಿಟಿ ಅನುದಾನದಲ್ಲಿ 300  ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಇನ್ನೂ 600 ಕೋಟಿ ರೂ. ಖರ್ಚು ಮಾಡಬೇಕಿದೆ. ಪೂರ್ಣ ಹಣ ಖರ್ಚಾದಾಗ ಸುಂದರ ನಗರವಾಗಲು ಸಾಧ್ಯವಿದೆ ಎಂದರು.

ಮುಖ್ಯಮಂತ್ರಿಗಳು ಈಗಾಗಲೇ 125 ಕೋಟಿ ರೂ. ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಿದ್ದಾರೆ. ಕ್ರಿಯಾ ಯೋಜನೆ ತಯಾರಾಗಿದ್ದು, ಅನುಮೋದನೆಯನ್ನೂ ನೀಡಿದ್ದೇನೆ. ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸೂಚಿಸಿದ್ದೇನೆ ಎಂದರು.

ಕೋವಿಡ್ ಸಂಕಷ್ಟದಲ್ಲಿ, ಆರ್ಥಿಕವಾಗಿ ಹೊರೆಯಾದರೂ ರಾಜ್ಯ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಿದೆ. ಮೆಕ್ಕೆಜೋಳದ ಬೆಳೆಗಾರರಿಗೆ ತಲಾ 5 ಸಾವಿರ ರೂ.ಗಳಂತೆ 500 ಕೋಟಿ ರೂ.ಗಳನ್ನು ನೇರ ಖಾತೆಗೆ ವರ್ಗಾಯಿಸಿದೆ. ಹೂ  ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಕೊಡಲಾಗಿದೆ ಎಂದರು. ಮೊನ್ನೆ ಸುರಿದ ಅಕಾಲಿಕ ಮಳೆಗೆ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ,  ಪರಿಹಾರ ನೀಡಲು ಸೂಚಿಸಿದ್ದೇನೆ ಎಂದರು.

ವಾರ್ಡ್ ಡ್ರೈವ್‌ಗೆ ಸೂಚನೆ: ಪ್ರತಿ ವಾರ `ವಾರ್ಡ್‌ ಡ್ರೈವ್’ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು. 

50 ಸಿಬ್ಬಂದಿಗಳೊಂದಿಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತೆ ಮಾಡೋ ಕೆಲಸಕ್ಕೆ ಸೂಚಿಸಿದ್ದೇನೆ. ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್,  ಪಾಲಿಕೆ ಮೇಯರ್ ಬಿ.ಜಿ. ಅಜಯ ಕುಮಾರ್, ಸ್ಮಾರ್ಟ್‍ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರಿದ್ದರು.

Leave a Reply

Your email address will not be published.