ಪ್ರಸ್ತುತದಲ್ಲೂ ಕುಂದದ ಸಾಹಿತ್ಯಾಸಕ್ತರು: ಕಾದಂಬರಿಗಾರ್ತಿ ಸುಶೀಲಾದೇವಿ

ಪ್ರಸ್ತುತದಲ್ಲೂ ಕುಂದದ ಸಾಹಿತ್ಯಾಸಕ್ತರು: ಕಾದಂಬರಿಗಾರ್ತಿ ಸುಶೀಲಾದೇವಿ

ಪಾಪು ಗುರು ಅವರ ಸೂಜಿ ಕಾದಂಬರಿ 2ನೇ ಮುದ್ರಣ ಲೋಕಾರ್ಪಣೆ

ದಾವಣಗೆರೆ, ಜ.11- ಹಿಂದಿನಂತೆ ಪ್ರಸ್ತುತದಲ್ಲೂ ಕಥೆ, ಕಾದಂಬರಿ, ಸಾಹಿತ್ಯದ ಆಸಕ್ತರು ಸಂಖ್ಯೆ ಇದ್ದು, ಓದುವ ಆಸಕ್ತಿಯೂ ಕುಂದಿಲ್ಲ ಎಂದು ಕಾದಂಬರಿಗಾರ್ತಿ ಜಿ.ಎಸ್. ಸುಶೀಲಾದೇವಿ ಆರ್.ರಾವ್ ತಿಳಿಸಿದರು.

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸುವರ್ಣ ಸೌಧ ಸಭಾಂಗಣದಲ್ಲಿ ಮೊನ್ನೆ ಏರ್ಪಾಡಾಗಿದ್ದ ದಿ. ಶಿವಲಿಂಗಪ್ಪ ಸಾಹಿತ್ಯ ಬಳಗ, ಸಿದ್ಧಗಂಗಾ ವಿದ್ಯಾಸಂಸ್ಥೆ ಹಾಗೂ ಇಮೇಜ್   ಬಳಗದ ಸಂಯುಕ್ತಾಶ್ರಯದಲ್ಲಿ ಲೇಖಕ ಪಾಪು ಗುರು ಅವರ ಸೂಜಿ ಕಾದಂ ಬರಿಯ 2ನೇ ಮುದ್ರಣವನ್ನು ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.

ಹಿಂದೆಲ್ಲಾ ದೊಡ್ಡ ಸಾಹಿತಿಗಳ ಕಥೆ, ಕಾದಂಬರಿಗಳಿಗೆ ಓದುಗರ ಸಂಖ್ಯೆ ಇತ್ತು. ನಾಡಿನ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಕಾದಂಬರಿಯನ್ನು ಜನರು ಮುಗಿ ಬಿದ್ದು ಖರೀದಿಸಿ ಓದುತ್ತಿದ್ದರು. ಈಗಲೂ ಸಹ ಕಥೆ, ಕಾದಂಬರಿ ಸೇರಿದಂತೆ ಸಾಹಿತ್ಯ ಓದುಗರ ಸಂಖ್ಯೆ ಕಡಿಮೆ ಆಗಿಲ್ಲ. ಪಾಪು ಗುರು ಅವರ ಸೂಜಿ ಕಾದಂಬರಿ ಎರಡನೇ ಮುದ್ರಣ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಲೇಖಕರಾದ ಶ್ರೀಮತಿ ಅನ್ನಪೂರ್ಣ ಪಾಟೀಲ್ ಅವರು ಕೃತಿ ಅವಲೋಕನ ಮಾಡುತ್ತಾ, ಪಾಪು ಗುರು ಅವರ ಸೂಜಿ ಕೃತಿಯ ವಸ್ತು ಸೂಕ್ಷ್ಮವಾಗಿದೆ. ಅದರ ನಿರೂಪಣೆ, ಭಾಷೆ ಒಂದಕ್ಕೊಂದು ಬೆಸೆದು ಓದುಗರನ್ನು ಸೆಳೆದು ಓದಿಸಿಕೊಂಡು ಹೋಗುತ್ತದೆ ಎಂದರು.

ಕಾದಂಬರಿಯಲ್ಲಿ ಬರುವ ಹೆಣ್ಣು ಸಂದಿಗ್ಧ ಪರಿಸ್ಥಿತಿಯಲ್ಲಿನ ನರಳಾಟ, ಕೊನೆಗೆ ತನ್ನನ್ನು ತಾನು ಬಲಿಯಾಗುವ ಸನ್ನಿವೇಶವನ್ನು ಲೇಖಕರು ಬಿಡಿ ಬಿಡಿಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೆಲ್ಲಾ ನೋಡಿದರೆ ಪಾಪು ಗುರು ಅವರು ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗಿ ಸಾಹಿತ್ಯ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಡಾ. ಆನಂದ ಋಗ್ವೇದಿ ಮಾತನಾಡಿ, ಸೂಜಿ ಕಾದಂಬರಿ ಬರುವ ಮುಂಚೆ ಹಲವರ ಕೈ ಸೇರಿತ್ತು. ಅದರಲ್ಲಿ ನಾನು ಒಬ್ಬನಾಗಿದ್ದೆ. ಅದರಲ್ಲಿ ಕೆಲವು ಅಂಶಗಳ ಬಗ್ಗೆ ತಕರಾರು ಎತ್ತಿ ಅದನ್ನು ಲೇಖಕರ ಬಳಿ ಹೇಳಿದಾಗ ವಿನಮ್ರತೆ ಮತ್ತು ಶ್ರದ್ಧೆಯಿಂದ ಅದನ್ನು ಆಲಿಸುವ ಮೂಲಕ ಪಾಪು ಗುರು, ಬೇರೆ ಸಾಹಿತ್ಯ ಕೃಷಿಯಲ್ಲಿ ತೊಡಗಿದವರಿಗಿಂತ ಭಿನ್ನವಾಗಿ ಕಾಣುತ್ತಾರೆ ಎಂದರು.

ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಸದಾನಂದ ಹೆಗಡೆ, ಸಾಹಿತಿಗಳಾದ ಡಾ. ಆನಂದ್ ಮಹಾಂತೇಶ್ ಬಿ.ನಿಟ್ಟೂರು, ಸಂತೇಬೆನ್ನೂರು ಫೈಜ್ನಟ್ರಾಜ್ ಮಾತನಾಡಿದರು. ಲೇಖಕ ಪಾಪು ಗುರು, ಬಿ.ಎಲ್, ಗಂಗಾಧರ ನಿಟ್ಟೂರು ಇದ್ದರು.

Leave a Reply

Your email address will not be published.