ಜಾನ್ ಡಿಸ್ಟಿಲರೀಸ್‍ನಲ್ಲಿ ಭಾರೀ ಅಗ್ನಿ ದುರಂತ

ಜಾನ್ ಡಿಸ್ಟಿಲರೀಸ್‍ನಲ್ಲಿ  ಭಾರೀ ಅಗ್ನಿ ದುರಂತ

ಓರ್ವ ಸಾವು, ಮೂವರಿಗೆ ಗಾಯ 

ಹರಪನಹಳ್ಳಿ, ಜ.8 – ಮದ್ಯ ತಯಾರಿಸುವ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ ನಡೆದಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ದುಗ್ಗತ್ತಿ ಬಳಿ ಇರುವ ಜಾನ್ ಡಿಸ್ಟಿಲರೀಸ್ ಪ್ರೈ. ಲಿಮಿಟೆಡ್‌ನಲ್ಲಿ ಜರುಗಿದೆ.

ರಘು (40) ತೀವ್ರವಾಗಿ  ಸುಟ್ಟು ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಕಾರ್ಮಿಕ, ಮೃತನು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದವನು.

ಚಾಮರಾಜನಗರದ ಜಯರಾಮಯ್ಯ, ಬೆಂಗಳೂ ರಿನ ವಿನಯಕುಮಾರ್ ಹಾಗೂ ಬಿಹಾರದ ರಾಹುಲ್ ಕುಮಾರ ತೀವ್ರವಾಗಿ ಗಾಯಗೊಂಡು ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮದ್ಯ ತಯಾರಿಸಲು ಬಳಸುವ ಅಂದಾಜು 1.50 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕಿಗೆ ಬೆಂಕಿ ಹತ್ತಿಕೊಂಡಿದೆ. ಒಟ್ಟು ಇದೇ ರೀತಿ ಇರುವ 8 ಸ್ಪಿರಿಟ್ ತುಂಬಿದ ಟ್ಯಾಂಕರ್‌ಗಳು ಸುಟ್ಟು ಹೋಗಿವೆ.

ಈ ಬೆಂಕಿ ಅವಘಡಕ್ಕೆ ಶಾರ್ಟ್‌ ಸರ್ಕ್ಯೂಟ್  ಕಾರಣ ಎಂದು ಹೇಳಲಾಗುತ್ತಿದೆ. ಹರಪನಹಳ್ಳಿ, ಹರಿಹರ, ರಾಣೇಬೆನ್ನೂರು, ದಾವಣಗೆರೆ ಸೇರಿ ಒಟ್ಟು 12 ಅಗ್ನಿ ಶಾಮಕ ದಳದ ಜಲ ವಾಹನಗಳು ಆಗಮಿಸಿ, ಬೆಂಕಿಯನ್ನು ಹರ ಸಾಹಸ ಪಟ್ಟು ನಿಯಂತ್ರಣಕ್ಕೆ ತಂದಿವೆ.

ಬೆಂಕಿ ಹತ್ತಿದ ಸ್ಥಳದಲ್ಲಿ 120 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬೆಂಕಿ ಹತ್ತಿಕೊಂಡ ಬಳಿಕ ಎಲ್ಲರೂ ಹೊರಗಡೆ ಓಡಿ ಹೋಗಿದ್ದಾರೆ, ನಾಲ್ವರು ಮಾತ್ರ ಸಿಕ್ಕಿ ಹಾಕಿಕೊಂಡಿದ್ದು, ಅದರಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ. ಉಳಿದ ಮೂವರು ತೀವ್ರ ಗಾಯಗೊಂಡಿದ್ದಾರೆ.

ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮದ್ಯ ತುಂಬಿದ ಟ್ಯಾಂಕರ್‍ಗಳಿಗೆ ಬೆಂಕಿ ಬಿದ್ದಿದೆ. ಗೋಡೆಗಳು, ತಗಡಿನ ಛಾವಣಿಗಳು ಬೆಂಕಿಯ ಜಳಕ್ಕೆ ಕುಸಿದು ಬೀಳುತ್ತಿದ್ದವು. ಪ್ರಾಥಮಿಕ ಮಾಹಿತಿ ಪ್ರಕಾರ ಅಂದಾಜು ನೂರು ಕೋಟಿ ರುಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನ ಪೌಲ್ ಜಾನ್ ಎಂಬುವವರು ಈ ಡಿಸ್ಟಲರಿಯನ್ನು ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಎಲ್ .ಎಂ. ನಂದೀಶ್‌ ಹಾಗೂ ಹಲುವಾಗಲು ಪಿಎಸ್ ಐ ಪ್ರಶಾಂತ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published.