ಹರಿಹರ ತಾಲ್ಲೂಕು ರಸ್ತೆಗಳ ಅಭಿವೃದ್ಧಿಗೆ 29 ಕೋಟಿ ರೂ.

ಅನುದಾನ ಬಿಡುಗಡೆಗೆ ಮಾಡಿದ ಸಿದ್ದೇಶ್ವರ ಮನವಿಗೆ ಸಚಿವ ಕಾರಜೋಳ ಸ್ಪಂದನೆ

ದಾವಣಗೆರೆ, ಜ.7- ಹರಿಹರ ತಾಲ್ಲೂಕು ಎಕ್ಕೆಗೊಂದಿ-ನಂದಿಗುಡಿ  ರಸ್ತೆಗಾಗಿ 13.50 ಕೋಟಿ ರೂ. ಹಾಗೂ  ಕಕ್ಕರಗೊಳ್ಳ-ಚಿಕ್ಕಬಿದರಿ ರಸ್ತೆ ಅಭಿವೃದ್ದಿಗಾಗಿ 15.00 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ  ಲೋಕೋಪಯೋಗಿ ಸಚಿವ  ಗೋವಿಂದ ಕಾರಜೋಳ ಆದೇಶಿಸಿದ್ದಾರೆ.

ಇಂದಿಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಈ ಎರಡೂ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸಾರ್ವಜನಿಕರಿಂದ ಒತ್ತಡವಿದ್ದ ಬಗ್ಗೆ ಸಚಿವರ ಗಮನ ಸೆಳೆದರು. ಸಚಿವರು, ಸಭೆಯಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿಯವರಿಗೆ ಕೂಡಲೇ ಈ ಎರಡು ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳ ಟೆಂಡರ್ ಕರೆಯಲು ವ್ಯವಸ್ಥೆ ಮಾಡಿ ಎಂದು ಸಚಿವರು ಸೂಚಿಸಿದರು.

 ಅದರಂತೆ ಈ ಎರಡೂ ರಸ್ತೆಗಳ ಅಭಿವೃಧ್ದಿಗಾಗಿ 28 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ. ಅದೇ ರೀತಿ ಹೊಳೆಸಿರಿಗೆರೆ ಕ್ರಾಸ್‍ನಿಂದ ಹೊಳೆಸಿರಿಗೆರೆವರೆಗೆ ರಸ್ತೆ ಅಭಿವೃದ್ಧಿಗೆ ಪ್ರಕೃತಿ ವಿಕೋಪ ನಿಧಿಯಡಿ 1 ಕೋಟಿ ಅನುದಾನ ಬಿಡುಗಡೆ ಮಾಡಲು ಸಮ್ಮತಿ ಸೂಚಿಸಿದರು. 

ಇನ್ನುಳಿದಂತೆ ಚಿಕ್ಕಬಿದರಿ-ಸಾರಥಿ ಮಧ್ಯದ ಸೇತುವೆ ಪ್ರತಿ ಮಳೆಗಾಲ ದಲ್ಲಿ ಮುಳುಗಡೆಯಾಗಿ ಈ ಎರಡೂ ಗ್ರಾಮಗಳ ಮಧ್ಯೆ ಸಂಪರ್ಕವೇ ಕಡಿತ ವಾಗುತ್ತಿತ್ತು, ಇದನ್ನು ತಪ್ಪಿಸಿ ಹೊಸ ಸೇತುವೆಯನ್ನು ನಿರ್ಮಾಣ ಮಾಡಲು 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೊಂದು ವಾರದೊಳ ಗಾಗಿ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.  ಅನುದಾನ ಬಿಡುಗಡೆ ಮಾಡಿದ ಕಾರಜೋಳ ಅವರಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published.