ಸನಾತನಿಗಳ ಬಾಲಹಿಡಿದರೆ ತಪ್ಪು ದಾರಿ ಹಿಡಿದಿದ್ದೇವೆ ಎಂದೇ ಅರಿಯಬೇಕು

ಸನಾತನಿಗಳ ಬಾಲಹಿಡಿದರೆ ತಪ್ಪು ದಾರಿ ಹಿಡಿದಿದ್ದೇವೆ ಎಂದೇ ಅರಿಯಬೇಕು

ಸನಾತನವಾದಿಗಳ ಕುಟಿಲತೆ ಅರಿತು ಶರಣರ ಅನುಯಾಯಿಗಳಾದ ಲಿಂಗವಂತರು ಅವರ ವಿರುದ್ಧ ಧ್ವನಿ ಎತ್ತಬೇಕಿದೆ. ಹಿಂದುತ್ವದ ಹೆಸರಲ್ಲಿ  ದೇಶಪ್ರೇಮಿ ಮುಗ್ಧ ಜನತೆಗೆ ನಶೆ ಏರಿಸಿ, ಎಬ್ಬಿಸಿ ಓಡಿಸಿ, ಮುಂದೆ ರಾತ್ರಿ ಕಂಡ ಬಾವಿಗೆ ಹಗಲೇ ಬೀಳಿಸುವ ಸಂಚು ಎಣೆಯುತ್ತಾರೆ ಈ ಪುರೋಹಿತಶಾಹಿಗಳು. ಇದು ಇತಿಹಾಸ ಕಾಲದುದ್ದಕ್ಕೂ ಕಂಡುಂಡ ಕಹಿ ಸತ್ಯ ಕೂಡ.

ನಮ್ಮ ರಾಜ್ಯ ಹಾಗೂ ಕೇಂದ್ರ ಸರಕಾರವು ಕೂಡಲಸಂಗಮ ಅಭಿವೃದ್ಧಿ ಮಾಡ ಹೊರಟಿರುವುದು ಸ್ವಾಗತಾರ್ಹ, ಆದರಣೀಯ, ಶ್ಲಾಘನೀಯ ದಾಖಲರ್ಹ  ಮಹಾಸಂಗತಿ. ಆದರೆ ಸರ್ಕಾರವನ್ನು ಆಡಿಸುವ, ಬೀಳಿಸುವ, ಏಳಿಸುವ ಕುತಂತ್ರ ನಡೆಸಬಲ್ಲ ಈ ಸನಾತನಿಗಳು ಅದನ್ನು ಸ್ಥಾವರಗುಡಿ ಮಾಡಿಟ್ಟು ಅಲ್ಲೂ ಗಂಟೆ ಜಾಗಟೆ ಶಂಖ ಊದುವ ನರಿಬುದ್ಧಿ ತೋರದಂತೆ ಎಚ್ಚರದಿಂದ ಹೆಜ್ಜೆ ಇಡಬೇಕಿದೆ. 

ಅದೊಂದು ಜ್ಞಾನದೇಗುಲ, ವಚನ ಮಂದಿರ, ಚಲನಶೀಲ ಪ್ರಗತಿಪರ ಹಿತ ಚಿಂತನೆ ನಡೆಸುವ ಮೂಲಕ ಶರಣರ ಕಲ್ಯಾಣದ ಮರುಸೃಷ್ಟಿ ಮಾಡುವತ್ತ ಸಾಗುವ ಪ್ರಜ್ಞಾವಂತರ ತಂಗುದಾಣವಾಗುವಂತೆ ನೋಡಿಕೊಳ್ಳಬೇಕಿದೆ.  

ಪ್ರಸ್ತುತ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಈ ಪುರೋಹಿತಶಾಹಿಗಳು ತಮ್ಮ ಹಳೆಯ ಪರಂಪರೆಯನ್ನು ವ್ಯವಸ್ಥಿತವಾಗಿ ಭದ್ರಗೊಳಿಸುವ ಹುನ್ನಾರ ಮಾಡುತ್ತಿದ್ದಾರೆ.  ಮೌಢ್ಯ, ಕಂದಾಚಾರ, ಶೋಷಣೆಯ ಕಬಂಧ ಬಾಹು ಚಾಚುತ್ತಾ ಕಪಿಮುಷ್ಟಿಯನ್ನು  ಬಿಗಿಗೊಳಿಸುತ್ತಿದ್ದಾರೆ ಅನ್ನಿಸದಿರದು. 

ಪ್ರಗತಿಪರ ಚಿಂತಕರು ಸಹ ವಯೋಸಹಜ ನಿರಾಸಕ್ತಿಯಿಂದ ಅಥವಾ ಸ್ವಯಂ ಲಾಭಕೋರತನದಿಂದ ಅವಕಾಶವಾದಿಗಳಾಗಿ ಅಧಿಕಾರ, ಹಣ,  ಗೌರವ ಸ್ಥಾನಮಾನ,  ಪ್ರಶಸ್ತಿ ಪುರಸ್ಕಾರಗಳ ಹಾರ ತುರಾಯಿ, ಪೇಟ, ಕಿರೀಟಗಳಿಗೆ ತಲೆಬಾಗಿ  ಬೀಗಿ ರಾಜಿಯಾಗುತ್ತಿದ್ದಾರೆ. ಅವರ ಹೋರಾಟ  ಗಳು ಕೇವಲ ಭಾಷಣ, ವಿಚಾರ ಸಂಕಿರಣ, ಗೋಷ್ಠಿಗಳಿಗೆ ಸೀಮಿತವಾಗಿ ಹೋಗಿವೆ. 

ಸಿಕ್ಕಷ್ಟು ಬಾಚಿಕೊಳ್ಳುವ ಸಂಸ್ಕೃತಿಯು ಸಾಮಾನ್ಯವಾಗಿ ಹೋಗುತ್ತಿದೆ. ತಮ್ಮ ಚಿಂತನೆ, ಬದ್ಧತೆ, ವಿಚಾರಶೀಲತೆ, ಪ್ರಾಮಾಣಿಕತನವನ್ನು ಅಲುಗಾಡಿಸುವ ಆರ್ಥಿಕ ಅಭಿವೃದ್ಧಿಯ ಅನಿವಾರ್ಯತೆಯು ವ್ಯಕ್ತಿತ್ವವನ್ನು ಬದಲಿಸುವಷ್ಟು ಅನಿವಾರ್ಯತೆ ಸೃಷ್ಠಿಸುತ್ತಿದೆ. 

ಜಾಗತೀಕರಣವು ಭಾರತೀಯರ ಬಹುಸಂಸ್ಕೃತಿಗಳ ಸ್ವಂತ ಆಲೋಚನೆ, ಬದುಕು, ಭಾಷೆ ಮರೆಯುವಂತೆ ಮಾಡುತ್ತಿದೆ. ಇದರ ಮರೆಯಲ್ಲಿ ಅವಕಾಶವಾದಿ ಧರ್ಮಾಂಧರು – ಜಾತ್ಯಾಂಧರು ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಮುಂದೆ ಒಗ್ಗಟ್ಟಿನ ಮಂತ್ರ ಪಟಿಸುತ್ತ ಹಿಂದಿನಿಂದ ಎಲ್ಲರನ್ನೂ, ಎಲ್ಲವನ್ನೂ  ತಮ್ಮ ಹಿಡಿತಕ್ಕೆ  ತೆಗೆದುಕೊಳ್ಳುವ  ಕುತಂತ್ರ ರಾಜಕೀಯ ರಾಜಾರೋಸ್ತು ನಡೆಯುತ್ತಿದೆ. 

ಬಹುಸಂಖ್ಯಾತ ಬಹುಸಂಸ್ಕೃತಿಯ  ಮುಗ್ಧ ಜನತೆಯು ಇವರ ಮೋಸದ ಜಾಲದ ಬಗ್ಗೆ ಅರಿಯದೆ ಏಕತೆಯ ನೆಪದಲ್ಲಿ  ಭಯಾನಕ ಏಕ ಸಂಸ್ಕೃತಿಯ ಭೂತಕ್ಕೆ ಆಹಾರವಾಗಲು ಮುಂದಾಗಿರುವುದು ವಿಷಾದನೀಯ.

ಹನ್ನೆರಡನೆಯ ಶತಮಾನದಲ್ಲಿ ಶರಣರು ಕ್ರಾಂತಿಯ ಕಹಳೆಯೂದಿ  ಬಿದ್ಧ ಜನತೆಯು ತಲೆ ಎತ್ತಿ ನಿಲ್ಲುವಂತೆ ಮಾಡಿದರು. ನಡೆವ, ನುಡಿವ, ಬರೆವ, ಬದುಕುವ ನಿಜಮಾರ್ಗ ನಿರ್ಮಿಸಿಕೊಟ್ಟರು. 

ಅಂದಿನಿಂದಲೂ ತಮ್ಮ ಕುಟಿಲತನದಿಂದ ರಾಜಪ್ರಭುತ್ವದ ವಾರಸುದಾರರನ್ನು  ಎಡಬಿಡಂಗಿಗಳನ್ನಾಗಿ ಮಾಡಿಕೊಂಡು ಶರಣ ಧರ್ಮವನ್ನು ಸರ್ವನಾಶ ಮಾಡಲು ಮಾಡಿದ ಹುನ್ನಾರಗಳು ಐತಿಹಾಸಿಕ ರಕ್ತಸಿಕ್ತ ಹೆಜ್ಜೆಗಳಾಗಿ ಉಳಿದಿವೆ.   

ಬಸವಾಲ್ಲಮರಾದಿ ವಚನಕಾರರು ಕಟ್ಟಿದ  ಶರಣ ಧರ್ಮವನ್ನು ರಕ್ಷಿಸಿದರೆ ಲಿಂಗಾಯತರು ಉಳಿಯುತ್ತೇವೆ. ಇದೆಲ್ಲಾ ಗೊತ್ತಿದ್ದೂ ತಮ್ಮ ಧರ್ಮಶ್ರದ್ಧೆ ಬಿಟ್ಟು ಸನಾತನಿಗಳ ಬಾಲಹಿಡಿದರೆ ತಪ್ಪು ದಾರಿ ಹಿಡಿದಿದ್ದೇವೆ ಎಂದೇ ಅರಿಯಬೇಕು.  ಅವರ ಬಾಲಮುರಿದು ಸವಾರಿ ಮಾಡುವ ಕೌಶಲ್ಯ ಜಾಣ್ಮೆಯನ್ನು  ಕಲಿಯಬೇಕಿದೆ. 

 ನಾವು  ಈ ಸಾನತನಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಶರಣರ ವಚನಗಳೇ ನಮಗೆ ಶ್ರೀರಕ್ಷೆ… ಅವೇ ನಮಗೆ ದಾರಿದೀಪ. ಅವುಗಳಲ್ಲಿ ಆತ್ಮಶಕ್ತಿ, ಆತ್ಮಶೋಧನೆ, ಆತ್ಮಾಭಿಮಾನದ ಜೀವಸೆಲೆ ಇದೆ. ವಚನಗಳ ಓದು, ಅಧ್ಯಯನ, ಪ್ರಸಾರ, ಪ್ರಚಾರ ಕಾರ್ಯವನ್ನು ಎಂದಿಗಿಂತ ಇಂದು ನಡೆಸಲು ಮುಂದಾಗಬೇಕಿದೆ. 

12 ನೆಯ ಶತಮಾನದ ಈ ವಚನ ದೀಪ್ತಿಯ ಆಶಯಗಳನ್ನು 21 ನೇಯ ಶತಮಾನದಲ್ಲಿ ಆರದ ಬೆಳಕಾಗಿಸುವ ಸುಸಂದರ್ಭ ಬಂದಿರುವುದು ಸೌಭಾಗ್ಯವೇ ಸರಿ. ಆದರೆ ಅಲ್ಲಿ ಕಿಂಚಿತ್ತೂ ಶರಣ ವಿರೋಧಿಗಳ ಷಡ್ಯಂತರ ನಡೆಯದಂತೆ ಆಸ್ಥೆ ವಹಿಸಬೇಕಿದೆ. 

ಅಲ್ಲಿ ಕಟ್ಟುವ ಮಂಟಪ ಕೇವಲ ತಾಂತ್ರಿಕ ಅನುಭವ ನೈಪುಣ್ಯತೆಯ ವಿಹಂಗಮ ಸ್ಥಾವರ ಕಟ್ಟಡ ಹಾಗೂ ಪ್ರವಾಸಿ ಸ್ಥಳವಷ್ಟೇ ಆಗದೆ; ಶರಣರ ಜಂಗಮ ಸ್ವರೂಪಿ ಅನುಭಾವ ಪಡೆವ ಶರಣ ಧರ್ಮ ನಿಷ್ಟೆಯ ಅಧ್ಯಯನ, ಅನುಷ್ಠಾನ, ಆಚರಣೆಗಳನ್ನು ಜಗದ ಜನಮಾನಸರಲ್ಲಿ ಮೂಡಿಸುವ, ರೂಢಿಸುವ, ಬೆಳೆಸಿ, ಉಳಿಸುವ ಪ್ರಾಯೋಗಿಕ ಕ್ರಿಯಾಶೀಲ ಅನುಭಾವ ಮಂದಿರವಾಗಿಸಬೇಕಿದೆ.

ಈಗಾಗಲೇ ಈ ಸನಾತನಿಗಳು ತೋಡಿರುವ ಕೆಸರು ಗುಂಡಿಗೆ ಬಿದ್ದಿದ್ದೇವೆ. ಅಲ್ಲಿಂದ ಮೇಲೇಳಲು ಶರಣರ ವಚನಗಳ ಓದು, ವಿಚಾರಗಳ ಅನುಷ್ಠಾನ, ತತ್ವಗಳ ಅನುಸಂಧಾನ ಮಾಡುವುದೊಂದೇ ನಮಗಿರುವ ಮುಕ್ತಿ ಮಾರ್ಗ. ನಾವು ಬೇಗ ಎಚ್ಚರಗೊಳ್ಳೋಣ. ದೇಹವನ್ನೇ ದೇವಾಲಯ ಮಾಡಿಕೊಂಡು ಇಷ್ಟಲಿಂಗ ಧರಿಸಿ ಶರಣರ `ನುಡಿದಂತೆ ನಡೆ ಇದೇ ಜನ್ಮ ಕಡೆ’ ಎಂಬ ಸತ್ಯವನ್ನು ಅರಿತು, ಬೆರೆತು ಬಾಳೋಣ.

ನಿತ್ಯ ಒಂದಾದರೂ ವಚನವನ್ನು ಓದುತ್ತಾ ಸಾಗಿದರೆ ಅವು ನಮ್ಮನ್ನು ನಿಜತ್ವವನ್ನು ತೋರಿಸುತ್ತವೆ. ಬನ್ನಿ ನಾವು ಶರಣ ಪಥ ಹಿಡಿದು ನಡೆಯೋಣ-ನುಡಿಯೋಣ.


ಆರ್. ಶಿವಕುಮಾರಸ್ವಾಮಿ ಕುರ್ಕಿ 
ದಾವಣಗೆರೆ.
shivukurki1@gmail.com

Leave a Reply

Your email address will not be published.