ದಾವಣಗೆರೆ ವಿವಿ ಅಭಿವೃದ್ಧಿಗೆೆ ಎರಡು ಕೋಟಿ ಅನುದಾನ : ಸಚಿವ ಬಿ. ಶ್ರೀರಾಮುಲು

ದಾವಣಗೆರೆ ವಿವಿ ಅಭಿವೃದ್ಧಿಗೆೆ ಎರಡು ಕೋಟಿ ಅನುದಾನ : ಸಚಿವ ಬಿ. ಶ್ರೀರಾಮುಲು

ಹರಿಹರ, ಜ.7- ದಾವಣಗೆರೆ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಎರಡು ಕೋಟಿ ರೂ.ಗಳ ಅನುದಾನ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.

ಉಪ ಕುಲಪತಿ ಪ್ರೊ. ಶರಣಪ್ಪ ಹಲಸೆ ನೇತೃತ್ವದಲ್ಲಿ ಬೆಂಗಳೂರಲ್ಲಿ ಬುಧವಾರ ಭೇಟಿ ಮಾಡಿದ ವಿವಿ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ವಿವಿಗಳ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆ ಸದಾ ಬೆಂಬಲ ನೀಡುತ್ತಿದೆ. ದಾವಣಗೆರೆ ವಿವಿಗೆ ಎರಡು ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.

ಉಪ ಕುಲಪತಿ ಪ್ರೊ. ಶರಣಪ್ಪ ಹಲಸೆ ಮಾತನಾಡಿ, ಹಿಂದುಳಿದ ವರ್ಗಗಳ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಇನ್ನಷ್ಟು ಉತ್ತಮ ಸೌಲಭ್ಯ, ಸವಲತ್ತುಗಳನ್ನು ಒದಗಿಸಲು ಅನುದಾನದ ಅಗತ್ಯವಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಅಗತ್ಯ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ನಂತರ ನಿಯೋಗದಲ್ಲಿನ ಸಿಂಡಿಕೇಟ್ ಸದಸ್ಯರು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಚಿದಾನಂದ ಗೌಡರನ್ನು ಭೇಟಿ ಮಾಡಿ ವಿವಿಯ ಪ್ರಗತಿ ಕುರಿತು ಚರ್ಚಿಸಿ ಮನವಿ ನೀಡಿದರು.

ನಿಯೋಗದಲ್ಲಿ ಕುಲಸಚಿವ (ಆಡಳಿತ) ಡಾ.ಬಸವರಾಜ ಬಣಕಾರ, ಸಿಂಡಿಕೇಟ್ ಸದಸ್ಯರಾದ ಡಾ.ಜಿ.ಪಿ.ರಾಮನಾಥ್, ಟಿ.ಇನಾಯತ್ ಉಲ್ಲಾ, ವಿಜಯಲಕ್ಷ್ಮಿ ಹಿರೇಮಠ, ಜಿ.ಎಂ. ಪವನ್, ಎಂ. ಆಶಿಷ್ ರೆಡ್ಡಿ ಇತರರಿದ್ದರು.

Leave a Reply

Your email address will not be published.