ಜಿಲ್ಲೆಗೆ ಬರುವ ಹೊರರಾಜ್ಯಗಳ ಕೋಳಿ ಮರಿಗಳ ಪರೀಕ್ಷೆಗೆ ಮನವಿ

ದಾವಣಗೆರೆ, ಜ.7- ಕೋಳಿಗಳಿಗೆ ಶೀತ, ಜ್ವರದ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವ ಕೋಳಿ ಮರಿಗಳನ್ನು ರಾಂಡಮ್ ಪರೀಕ್ಷೆಗೆ ಒಳಪಡಿಸಲು ಕೋಳಿ ಸರಬರಾಜು ಮಾಡುವ ಕಂಪನಿಗಳಿಗೆ ಸೂಚನೆ ನೀಡುವಂತೆ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. 

ಜಿಲ್ಲೆಗೆ ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶಗಳಿಂದ ಕೋಳಿ ಮರಿಗಳು ಬರುತ್ತಿದ್ದು, ಈಗಾಗಲೇ ಕೇರಳ ಮತ್ತು ತಮಿಳುನಾಡಿನಲ್ಲಿ ಕೋಳಿ ಶೀತ ಜ್ವರ ಹೆಚ್ಚಾಗಿ ಹರಡುತ್ತಿದೆ. ಅಲ್ಲಿಂದ ಬರುವ ಕೋಳಿ ಮರಿಗಳಿಗೆ ರಾಂಡಮ್‌ ಪರೀಕ್ಷೆ ನಡೆಸಿ, ರೈತರಿಗೆ ಸರಬರಾಜು ಮಾಡಲು ಜಿಲ್ಲಾಧಿಕಾರಿಗಳು ಕೋಳಿ ಮರಿ ಸರಬರಾಜು ಕಂಪನಿಗೆ ಸೂಚನೆ ನೀಡುವ ಮುಖೇನ ಮುಂಜಾಗ್ರತಾ ಕ್ರಮವಾಗಿ ಕೋಳಿ ಶೀತ ಜ್ವರವನ್ನು ತಡೆಗಟ್ಟಬೇಕು. ಇಲ್ಲವಾದಲ್ಲಿ ಕೋಳಿ ಸಾಕಾಣಿಕೆದಾರ ರಾಗಿರುವ ರೈತರು ಅತ್ಯಂತ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಕೋಳಿ ಫಾರಂಗಳಿವೆ. 11 ಲಕ್ಷ ಕೆಜಿಗೂ ಹೆಚ್ಚು ಕೋಳಿಗಳಿವೆ. ಹೊರ ಭಾಗದಿಂದ ಬರುವ ಕೋಳಿ ಮರಿಗಳಲ್ಲಿ ಈ ರೋಗ ಕಂಡು ಬಂದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡಲಾದ ಕೋಳಿಗೆ ರೋಗ ತಗುಲಿ ನಮಗೆ ಸಂಕಷ್ಟು ಉಂಟಾಗಲಿದೆ ಎಂದು ಹೇಳಿದರು.

ಕಳೆದ ಎಂಟು ತಿಂಗಳ ಹಿಂದೆ ಇಂತಹದ್ದೇ ರೋಗ ತಗುಲಿ ಸುಮಾರು 8.50 ಲಕ್ಷ ಕೋಳಿ ಮರಿಗಳನ್ನು ನಾಶ ಮಾಡಿದ್ದು, ಪುನಹ ಈ ರೋಗ ಬಾಧಿಸಿ ದರೆ ಸಾಕಾಣಿಕೆದಾರರು ಲಕ್ಷಾಂತರ ರೂ. ನಷ್ಟ ಅನುಭವಿಸಬೇಕಾಗಲಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಕಾಣಿಕೆ ದಾರರಾದ ಬನ್ನಿಕೋಡು ಅಭಿಷೇಕ್, ಕಲ್ಕೆರೆ ಮಂಜಪ್ಪ ಇದ್ದರು.

Leave a Reply

Your email address will not be published.