ಪರವಾನಗಿ ಪಡೆಯದ ಎರಡು ನಾಡ ಬಂದೂಕುಗಳ ವಶ: ಎಸ್ಪಿ

ದಾವಣಗೆರೆ, ಡಿ.2- ಪರವಾನಗಿ ಇಲ್ಲದೇ ಅಕ್ರಮ ವಾಗಿ ಮನೆಯಲ್ಲಿದ್ದ ಎರಡು ನಾಡ ಬಂದೂಕುಗಳನ್ನು ವಶಪಡಿಸಿಕೊಂಡು ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಚಾರವಾಗಿ ತಮ್ಮ ಕಚೇರಿಯಲ್ಲಿ ಇಂದು ಸಂಜೆ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ಮಾತನಾಡಿ, ನ್ಯಾಮತಿ ತಾಲ್ಲೂಕು ಚಿನ್ನಿಕಟ್ಟೆ ಗ್ರಾಮದ ತಮಿಳು ಕಾಲೋನಿ ವಾಸಿ ವೀರಸ್ವಾಮಿ ಅಲಿಯಾಸ್ ವೀರಪ್ಪ  ಬಂಧಿತ ಆರೋಪಿ. ಪ್ರಕರಣದ ಮತ್ತೊಬ್ಬ ಆರೋಪಿ ಕುಮ್ರೇಶ ಎಂಬಾತ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು. 

ಚಿನ್ನಿಕಟ್ಟೆ ಗ್ರಾಮದ ತಮಿಳರ ಕಾಲೋನಿಯಲ್ಲಿರುವ ಕುಮ್ರೇಶ ಎಂಬುವರ ವಾಸದ ಮನೆಯಲ್ಲಿ ನಾಡ ಬಂದೂಕುಗಳು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಜಿ. ಮುನ್ನೋಳಿ ನೇತೃತ್ವದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್‌ ಮತ್ತು ನ್ಯಾಮತಿ ಎಸ್‍ಐ ಪಿ.ಎಸ್. ರಮೇಶ, ಸಿಬ್ಬಂದಿಗಳಾದ ಕೆ. ಮಂಜಪ್ಪ, ಎಚ್.ವಿ. ಹರೀಶ, ಚಂದ್ರಶೇಖರ, ಉಮೇಶ, ಚನ್ನೇಶ, ರಾಮಪ್ಪ, ತಿಮ್ಮರಾಜು, ಆನಂದ ಒಳಗೊಂಡ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದೇ ತನ್ನ ವಾಸದ ಮನೆಯಲ್ಲಿ 2 ನಾಡ ಬಂದೂಕುಗಳು ಹಾಗೂ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಉಪಯೋಗಿಸುವ ಸ್ಟೀಲ್ ಬಾಲ್ಸ್ ಗಳು, ಮೊಳೆಗಳು, ಗನ್ ಪೌಡರ್ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

2013 ರಲ್ಲಿ ಚಿನ್ನಿಕಟ್ಟೆಯಲ್ಲಿ 26 ನಾಡ ಬಂದೂಕುಗಳನ್ನು, 2016 ರಲ್ಲಿ 1 ಬಂದೂಕು ವಶಪಡಿಸಿಕೊಳ್ಳಲಾಗಿತ್ತು. ಈ ಭಾಗದಲ್ಲಿ ಈ ರೀತಿಯ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಇದನ್ನು ಮಟ್ಟ ಹಾಕಲಾಗುವುದು ಎಂದರು.

ನಗರದಲ್ಲಿ 175 ಮತ್ತು ಜಿಲ್ಲೆಯಲ್ಲಿ 740 ಜನ ಪರವಾನಗಿ ಹೊಂದಿರುವ ಪಿಸ್ತೂಲು, ರೈಫಲ್ಸ್, ಬಂದೂಕು ಹೊಂದಿದವರು ಇದ್ದಾರೆ. ಗ್ರಾಮ ಪಂಚಾಯಿತಿ  ಚುನಾವಣೆ ಹಿನ್ನೆಲೆಯಲ್ಲಿ ಈ ಎಲ್ಲ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಳ್ಳುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಈ ರೀತಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದುವುದು ಮತ್ತು ಬಳಸುವುದು ತಪ್ಪು, ಕಾನೂನಿನಲ್ಲಿ ಇದಕ್ಕೆ ಕಠಿಣ ಶಿಕ್ಷೆ ಇದೆ. ಆತ್ಮ ರಕ್ಷಣೆಗೆ ಬಂದೂಕಿನ ಅಗತ್ಯ ಇರುವವರು ಜಿಲ್ಲಾಧಿಕಾರಿಗಳ ಬಳಿ ಪರವಾನಿಗೆ ಪಡೆದು ಬಳಸಬೇಕು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ರಾಜೀವ್, ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ, ಹೊನ್ನಾಳಿ ಸಿಪಿಐ ದೇವರಾಜ್ ಇದ್ದರು.