ಹರಿಹರ : 129 ಕೋಟಿ ರೂ. ಅನುದಾನ ತಡೆಹಿಡಿದ ಬಿಜೆಪಿ ಸರ್ಕಾರ

ಹರಿಹರ : 129 ಕೋಟಿ ರೂ. ಅನುದಾನ ತಡೆಹಿಡಿದ ಬಿಜೆಪಿ ಸರ್ಕಾರ

ಶಾಸಕ ರಾಮಪ್ಪ ಆರೋಪ

ಹರಿಹರ, ನ.26 – ಹರಿಹರ ಕ್ಷೇತ್ರದ ಸುಮಾರು 129 ಕೋಟಿ ರೂ. ರಸ್ತೆ, ಸೇತುವೆ, ಕೆರೆ ಮತ್ತು ಇತರೆ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾದ ಅನುದಾನವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದು ಶಾಸಕ ಎಸ್. ರಾಮಪ್ಪ ಆರೋಪಿಸಿದರು.

ಇಲ್ಲಿನ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಇಂದು ನಡೆದ ಹರಿಹರ ತಾಲ್ಲೂಕು ಕಟ್ಟಡ ಕಾರ್ಮಿಕರ ಸೇವಾ ಸಂಘಗಳ ಹಿತರಕ್ಷಣಾ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ಇತಿಹಾಸದಲ್ಲಿ ಯೋಜನೆಗಳಿಗೆ ಮಂಜೂರಾದ ಅನುದಾನವನ್ನು ತಡೆಹಿಡಿದಿರುವುದು ಇದೇ ಪ್ರಥಮವಾಗಿದ್ದು, ಇದು ಬಿಜೆಪಿಯ ಸಂಸ್ಕೃತಿಯೆಂದು ಹೇಳಿದರು.

ತಾನು ಗುತ್ತಿಗೆ ಕಾರ್ಮಿಕನಾಗಿ, ಕಾರ್ಮಿಕ, ಕಾರ್ಮಿಕ ನಾಯಕನಾಗಿ ನಂತರ ರಾಜಕೀಯ ಪ್ರವೇಶಿಸಿ ನಗರಸಭೆಯ ಸದಸ್ಯ, ಅಧ್ಯಕ್ಷನಾಗಿ ಇಂದು ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ.ಆದ್ದರಿಂದ ಕಾರ್ಮಿಕರ ಕಷ್ಟ, ನೋವುಗಳ ಬಗ್ಗೆ ತಮಗೆ ಸಂಪೂರ್ಣ  ಅರಿವಿರುವುದಾಗಿ ಹೇಳಿದರು.

ನಿಜವಾದ ಕಾರ್ಮಿಕರಿಗೆ ಅನುದಾನಗಳು ದೊರೆಯದಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಬೋಗಸ್ ಕಾರ್ಡುದಾರರ ಖಾತೆಗಳಿಗೆ ಹಣ ಜಮಾ ಆಗಿರುವುದು ತಿಳಿದುಬಂದಿದೆ. ಸರ್ಕಾರ ತಿಳಿಸಿದಂತೆ ಕಾರ್ಮಿಕ ಇಲಾಖೆಯಲ್ಲಿ 8600 ಕೋಟಿ ರೂ. ಅನುದಾನ ಲಭ್ಯವಿದ್ದು, ದೊರೆಯದೇ ಇರುವವರ ಬಗ್ಗೆ ಪ್ರಯತ್ನಿಸಿ ಅವರಿಗೆ ದೊರಕಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಪೌರಾಯುಕ್ತರಾದ ಶ್ರೀಮತಿ ಲಕ್ಷ್ಮಿ, ಇಂಜಿನಿಯರಿಂಗ್ ಸಂಘದ ಅಧ್ಯಕ್ಷ ಶಿವಪ್ರಕಾಶ ಶಾಸ್ತ್ರಿ, ಸಂಘದ ಜಿಲ್ಲಾ ಗೌರವಾಧ್ಯಕ್ಷ ಗಣೇಶಪ್ಪ, ಅಧ್ಯಕ್ಷ
ಎನ್.ಕೆ. ಚಂದ್ರಶೇಖರ್ ಮಾತನಾಡಿದರು. 

ಸಂಘದ ಅಧ್ಯಕ್ಷ ಎಂ.ಹೆಚ್.ಭೀಮಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ರಾಮಗಿರಿ ಭದ್ರಾಚಾರ್ ಮಾತನಾಡಿದರೆ, ಶಿಲ್ಪಿ ನಾಗರಾಜಾಚಾರ್ ಸ್ವಾಗತಿಸಿದರು.

ಗ್ರೇಡ್-1 ತಹಸೀಲ್ದಾರ್ ಚೆನ್ನವೀರ ಸ್ವಾಮಿ, ನಗರ ಠಾಣಾ ಪಿಎಸ್ಐ ಸುನೀಲ್ ಬಸವರಾಜ್ ತೇಲಿ, ಸಂಘದ ಕಾರ್ಯದರ್ಶಿ ಎಂ.ಎಸ್. ಹಾಲೇಶ್ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.