ರೈತ-ಕಾರ್ಮಿಕ ವಿರೋಧಿ ನೀತಿಗೆ ಧಿಕ್ಕಾರ

ರೈತ-ಕಾರ್ಮಿಕ ವಿರೋಧಿ ನೀತಿಗೆ ಧಿಕ್ಕಾರ

ಜೆಸಿಟಿಯು ಕರೆ ನೀಡಿದ್ದ ಮುಷ್ಕರದಲ್ಲಿ ಧುಮುಕಿದ ನಗರದ ಶ್ರಮಿಕ ಸಂಘಟನೆಗಳು

ದಾವಣಗೆರೆ, ನ. 26 – ಕಾರ್ಮಿಕ ವಿರೋಧಿ ಸಂಹಿತೆಗಳ ವಾಪಸ್, ರೈತ ವಿರೋಧಿ ಕಾನೂನು ವಾಪಸಾತಿ, ಕೊರೊನಾ ಸಂಕಷ್ಟದ ನೆರವು, 10 ಕೆಜಿ ಉಚಿತ ಪಡಿತರ, ಸರ್ಕಾರಿ ಕಂಪನಿಗಳ ಖಾಸಗೀಕರಣ ತಡೆ, ಸಾರ್ವತ್ರಿಕ ಪಿಂಚಣಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು.) ವತಿಯಿಂದ ಇಂದು ಕರೆ ನೀಡಲಾಗಿದ್ದ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲೂ ಪ್ರತಿಭಟನೆ ನಡೆಸಲಾಯಿತು.

ಐ.ಎನ್.ಟಿ.ಯು.ಸಿ, ಎ.ಐ.ಟಿ.ಯು.ಸಿ., ಸಿ.ಐ.ಟಿ.ಯು., ಎ.ಐ.ಟಿ.ಯು.ಸಿ., ನೆರಳು ಬೀಡಿ ಯೂನಿಯನ್ ಸೇರಿದಂತೆ ರೈತ, ಕಾರ್ಮಿಕ, ಬ್ಯಾಂಕಿಂಗ್, ಎಲ್.ಐ.ಸಿ., ಕೆ.ಎಸ್.ಆರ್.ಟಿ.ಸಿ., ಬೀದಿ ಬದಿ ವ್ಯಾಪಾರಿಗಳು, ಹಮಾಲಿ ಗಳು ಸೇರಿದಂತೆ ಹಲವಾರು ಶ್ರಮಿಕರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿದವು.

ಕೊರೊನಾ ಸಾಂಕ್ರಾಮಿಕದಿಂದ ಸಂಕಷ್ಟ ದಲ್ಲಿರುವ ಕಾರ್ಮಿಕರ ಹಿತ ಕಾಪಾಡದೇ, ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗಿದೆ. ಅನ್ನದಾತ ರೈತ ಹಾಗೂ ಸಂಪತ್ತು ಸೃಷ್ಟಿಸುವ ಶ್ರಮಿಕನನ್ನು ಗುಲಾಮಗಿರಿಗೆ ತಳ್ಳಲಾಗುತ್ತಿದೆ. ಎಲ್‌ಐಸಿ, ಬ್ಯಾಂಕ್, ರಕ್ಷಣಾ ವಲಯ, ರೈಲ್ವೆ, ಬಿಎಸ್‌ಎನ್‌ಎಲ್‌ಗಳನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಸಿ. ಟಿ.ಯು. ಜಿಲ್ಲಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕಾರ್ಮಿಕರು ಹಾಗೂ ರೈತರ ಬೆನ್ನೆಲುಬು ಮುರಿಯುತ್ತಿದೆ. ಸಂವಿಧಾನದತ್ತವಾಗಿ ನೀಡಲಾದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಎಲ್.ಐ.ಸಿ., ರೈಲ್ವೆ, ಬ್ಯಾಂಕ್ ಮುಂತಾದವುಗಳ ಖಾಸಗೀಕರಣದಿಂದ ಜನರು ಶ್ರಮದ ಕರ್ತವ್ಯ ನಿರ್ವಹಿಸಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದರು.

ಬಿಜೆಪಿ ಹಿಂದಿನಿಂದಲೂ ಸುಳ್ಳು ಹೇಳುತ್ತಲೇ ಬರುತ್ತಿದೆ. ಆರ್.ಎಸ್.ಎಸ್. ಸಂಘಟನೆ ತ್ರಿವರ್ಣ ಧ್ವಜವನ್ನೇ ನಾಗಪುರದಲ್ಲಿ ಹಾರಿಸುವುದಿಲ್ಲ. ಇಂತಹ ಕೋಮುವಾದಿ – ಜಾತಿವಾದಿಗಳಿಗೆ ಜನರ ಕಷ್ಟ ಗೊತ್ತಾಗುವುದಿಲ್ಲ ಎಂದು ಕಿಡಿ ಕಾರಿದರು.

ಬ್ಯಾಂಕಿಂಗ್ ವಲಯವನ್ನು ಕಾರ್ಪೊರೇಟ್‌ಗಳಿಗೆ ಕೊಡಲು ಹೊರಟಿದ್ದಾರೆ. ಹೀಗಾದರೆ ಇಡೀ ಬ್ಯಾಂಕಿಂಗ್ ವಲಯ 70 ವರ್ಷಗಳ ಹಿಂದೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.

ರೈತರು ಹಾಗೂ ಕಾರ್ಮಿಕರು ಒಂದಾದರೆ ಮಾತ್ರ ಸಾರ್ವಜನಿಕ ವಲಯದ ಕಂಪನಿಗಳನ್ನು ಉಳಿಸಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ಕಾರ್ಪೊರೇಟ್‌ಗಳ ಪಾದಗಳಿಗೆ ಅರ್ಪಿಸಲಿದೆ ಎಂದು ರಾಮಚಂದ್ರಪ್ಪ ಹೇಳಿದರು.

ಜಿಲ್ಲಾ  ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ ಮಾತನಾಡಿ, ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಕಾನೂನು ರೂಪಿಸಿ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ. ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ವಂಚಿಸಿರುವ ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಕಾರ್ಮಿಕ ಮುಖಂಡರಾದ ಕೆ.ಹೆಚ್. ಆನಂದರಾಜ್, ಕೈದಾಳೆ ಮಂಜುನಾಥ್, ಜುಬೀನಾ ಖಾನಂ, ದ್ರಾಕ್ಷಾಯಣಮ್ಮ, ಆವರಗೆರೆ ಚಂದ್ರು, ಆವರಗೆರೆ ವಾಸು, ಎಸ್. ನಾಗರಾಜ್, ರಹಮತ್‌ವುಲ್ಲಾ, ಕುಕ್ಕುವಾಡ ಮಂಜುನಾಥ್, ರಾಜೇಂದ್ರ ಬಂಗೇರ, ಪಿ.ಎಸ್. ನಾಗರಾಜ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.