ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿಗೆ ಇಂದು ಚಾಲನೆ

ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿಗೆ ಇಂದು ಚಾಲನೆ

ದಾವಣಗೆರೆ, ನ.24- ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿ ನೆನಪಿಗಾಗಿ 13ನೇ ಬಾರಿಗೆ ನಗರದಲ್ಲಿ ಎಸ್.ಎಸ್. ಶಾಮನೂರು ಡೈಮಂಡ್, ಶಿವಗಂಗಾ ಕಪ್ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಗೆ ನಾಳೆ ದಿನಾಂಕ 25ರ ಬುಧವಾರ ಸಂಜೆ 6 ಗಂಟೆಗೆ ಚಾಲನೆ ಸಿಗಲಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ 5 ದಿನಗಳ ಕಾಲ ನಡೆಯುವ ಟೂರ್ನಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಚಾಲನೆ ನೀಡುವರು ಎಂದು ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ರವಿ ಇಳಂಗೋವ್, ದೇವರಮನೆ ಶಿವಕುಮಾರ್, ನಿಟುವಳ್ಳಿ ಶೇಖರಪ್ಪ, ಉದಯ ಶಿವಕುಮಾರ, ರಾಜು ರೆಡ್ಡಿ, ಇಂದ್ರಪ್ಪ, ಮಹಾದೇವ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ಅತಿಥಿಗಳು ಪಾಲ್ಗೊಳ್ಳುವರು. 

ಅಂದಾಜು 30 ಲಕ್ಷ ರೂ. ವೆಚ್ಚದ ಟೂರ್ನಿಯಲ್ಲಿ ಕೇರಳ, ಚೆನೈ, ಗೋವಾ, ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 24 ಆಹ್ವಾನಿತ ತಂಡಗಳು ಭಾಗವಹಿಸಲಿವೆ. 320 ಆಟಗಾರರಿಗೆ ಉಚಿತವಾಗಿ ಊಟ, ವಸತಿ ಮಾಡಲಾಗುವುದು. ವಿಜೇತರಿಗೆ ಪ್ರಥಮ ಬಹುಮಾನ 3,55,555, ದ್ವಿತೀಯ ಬಹುಮಾನ 2,25,555 ರೂ. ಮತ್ತು ತೃತೀಯ ಬಹುಮಾನವಾಗಿ 1,25,555 ರೂ. ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು. ವೈಯಕ್ತಿಕ ಉತ್ತಮ ಆಲ್ ರೌಂಡರ್‍ಗೆ ಹೀರೊ ಹೊಂಡ ಬೈಕ್ ನೀಡಲಾಗುವುದು. ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಗ್ಯಾಲರಿ ವ್ಯವಸ್ಥೆ ಮಾಡಿದ್ದು, ಮೂರನೇ ತೀರ್ಪುಗಾರರ ವ್ಯವಸ್ಥೆ ಇರುತ್ತದೆ ಎಂದು ವಿವರಿಸಿದರು.

ಎಲ್ಲಾ ಪಂದ್ಯಾವಳಿಗಳೂ ಯೂಟ್ಯೂಬ್‍ನಲ್ಲಿ ನೇರ ಪ್ರಸಾರಗೊಳ್ಳಲಿವೆ. ಕಳೆದ ಬಾರಿ ಸುಮಾರು 2 ಲಕ್ಷ ಜನರು ಯೂಟ್ಯೂಬ್‍ನಲ್ಲಿ ಪಂದ್ಯಾವಳಿ ವೀಕ್ಷಿಸಿದ್ದು, ಈ ಬಾರಿ 3 ಲಕ್ಷಕ್ಕೂ ಅಧಿಕ ಜನ ವೀಕ್ಷಿಸುವ ನಿರೀಕ್ಷೆ ಇದೆ. ವಿಶೇಷವಾಗಿ 8 ಅಫಿಷಿಯಲ್ ಕಪ್ ಪಂದ್ಯಾವಳಿ ನಡೆಯಲಿದ್ದು, ಪೊಲೀಸ್, ಪತ್ರಕರ್ತರು, ವರ್ತಕರು, ಪಾಲಿಕೆ ಸದಸ್ಯರು, ವಕೀಲರ ತಂಡ ಭಾಗವಹಿಸಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ ಗೌಡ, ಶಿವಗಂಗಾ ಶ್ರೀನಿವಾಸ, ರಂಗಸ್ವಾಮಿ, ಶಿವಕುಮಾರ, ಮಧು, ರಾಘವೇಂದ್ರ, ಯೋಗೀಶ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.