ಬಿ.ಜೆ.ಪಿ.ಗೆ `ಪ್ರಕೋಷ್ಠ’ ಬಲ

ಬಿ.ಜೆ.ಪಿ.ಗೆ `ಪ್ರಕೋಷ್ಠ’ ಬಲ

ದಾವಣಗೆರೆ, ನ. 24- ಎಲ್ಲಾ ವರ್ಗದ ಜನತೆಯನ್ನೂ ಸೇರಿಸಿಕೊಂಡು `ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಪರಿಕಲ್ಪನೆಯಡಿ ಪಕ್ಷವನ್ನೂ ಬೆಳೆಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರಕೋಷ್ಠಗಳನ್ನು ರಚಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದ ಹೊರ ವಲಯದಲ್ಲಿರುವ ಅಪೂರ್ವ ರೆಸಾರ್ಟ್‌ನಲ್ಲಿ ಮಂಗಳವಾರ ರಾಜ್ಯ ಪ್ರಕೋಷ್ಠಗಳ ಸಂಚಾಲಕರು ಹಾಗೂ ಸಹ ಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈದ್ಯರು, ಶಿಕ್ಷಕರು, ಉದ್ಯಮಶೀಲರು, ವ್ಯಾಪಾರಿಗಳು, ವಕೀಲರು ಹೀಗೆ 20 ಪ್ರಕೋಷ್ಠಗಳ ಘೋಷಣೆಯಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಭಾರತೀಯ ಜನತಾ ಪಕ್ಷವು ಕೆಳ ಹಂತದವರೆಗೂ ತಲುಪಲು ಮನೆ-ಮನೆಗಳಲ್ಲಿ ಪಕ್ಷದ ವಿಚಾರಧಾರೆಗಳನ್ನು ಗಟ್ಟಿಯಾಗಿಸಲು ಪ್ರಕೋಷ್ಠಗಳ ರಚನೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಆತ್ಮನಿರ್ಬರ್ ಭಾರತ್ ಪರಿಕಲ್ಪನೆಯಡಿ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯಮ ಶೀಲತೆ ಬೆಳೆಸುವ ಮೂಲಕ ಉದ್ಯೋಗ ಸೃಷ್ಟಿಸುವ ಕಾರ್ಯಗಳನ್ನು ಮಾಡಲು ಪ್ರಕೋಷ್ಠಗಳ ರಚನಾ ಸಭೆಗಳನ್ನು ಇದೇ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕಾಗಿ ಸೃಷ್ಟಿಯಾದ ಪಕ್ಷವಲ್ಲ. ಪರಿವರ್ತನೆಯ ಗುರಿ ರಾಷ್ಟ್ರಧರ್ಮ ವನ್ನು ಪಕ್ಷದ ಕಾರ್ಯಕರ್ತರು ಹೊಂದಿದ್ದಾರೆ. ರಾಜಕಾರಣಿಗೆ ರಾಜಕಾರಣ ಹಾಗೂ ಸಮಾಜ ಸೇವಾ ಮನೋಭಾವ ಎರಡೂ ಇರಬೇಕು. ಸಮಾಜದ ಸಂಕಷ್ಟಗಳಿಗೆ ಧ್ವನಿಯಾಗದವ ಉತ್ತಮ ರಾಜಕಾರಣಿಯಲ್ಲ. ಹಾಗಾಗಿ ಸಮಾಜ ಸೇವೆಯ ಮೂಲಕ ರಾಜಕಾರಣ ನಮ್ಮ ಪಕ್ಷದ ಚಿಂತನೆಯಾಗಿದೆ ಎಂದರು.

ಜಗತ್ತೊಂದೇ ಭಾರತ ನಿರ್ಮಾಣಕ್ಕೆ ಎಲ್ಲರನ್ನೂ ಜೋಡಿಸಿಕೊಂಡು ಹೋಗ ಬೇಕಿದೆ. ಪ್ರಕೋಷ್ಠ ರಾಜಕಾರಣದ ಬಾಗಿಲು. ರಾಜ್ಯದಲ್ಲಿ ಈಗಾಗಲೇ 90 ಸಾವಿರ ಕಾರ್ಯಕರ್ತರಿಗೆ ಪ್ರಕೋಷ್ಠದ ಮೂಲಕ ಪಕ್ಷದ ಜವಾಬ್ದಾರಿಗಳು ದೊರೆತಿವೆ. ರಾಜ್ಯದ ಪ್ರಕೋಷ್ಠದ ಚಿಂತ ನೆಗೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರತಿದೆ ಎಂದು ಹರ್ಷ ವ್ಯಕ್ತಪಡಿಸಿದ ಕಟೀಲ್, ಪ್ರಕೋಷ್ಠಗಳ ರಚನೆಯಿಂದ ಪಕ್ಷದ ಸಂಘಟನಾ ಶಕ್ತಿ ಮತ್ತಷ್ಟು ವೃದ್ಧಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್, ಪ್ರಕೋಷ್ಠಗಳ ರಚನೆ ಮೂಲಕ ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಮತ್ತಷ್ಟು ಪ್ರಜ್ವಲಿಸಲು ಸಹಾಯಕವಾಗಲಿದೆ ಎಂದು ಹೇಳಿದರು.

ಶಾಸಕ ಎಸ್.ಎ. ರವೀಂದ್ರನಾಥ್, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಠ ಬಹುಮತ ಬರಲು ಪ್ರಕೋಷ್ಠಗಳು ಸಹಕಾರಿಯಾಗಲಿ ಎಂದು ಆಶಿಸಿದರು. ರಾಜ್ಯ ಪ್ರಕೋಷ್ಠಗಳ ಸಂಯೋಜಕ  ಭಾನುಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಜಿ.,  ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಸ್ವಾಗತಿಸಿದರು. ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ ನಿರೂಪಿಸಿದರು. ಸಹನಾ ಮಂಜುನಾಥ್ ವಂದೇ ಮಾತರಂ ಗೀತೆ ಹಾಡಿದರು.

Leave a Reply

Your email address will not be published.