ಮಾಧ್ಯಮಗಳ ದೃಶ್ಯ ವೈಭವೀಕರಣ ಆರೋಗ್ಯಕರವಲ್ಲ

ದಾವಣಗೆರೆ, ನ.21- ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ,  ಕಾರ್ಯಾಂಗ,  ನ್ಯಾಯಾಂಗ ಇದರ ಜೊತೆಯಲ್ಲಿ ಪತ್ರಿಕಾ ಮಾಧ್ಯಮ ನಾಲ್ಕನೇ ಅಂಗವಾಗಿಯೂ, ದೃಶ್ಯ ಮಾಧ್ಯಮ ಐದನೇ  ಅಂಗವಾಗಿಯೂ ಕೆಲಸ ನಿರ್ವಹಿಸುತ್ತಿವೆ ಎಂದು ಹಿರಿಯ ನ್ಯಾಯವಾದಿ ರೇವಣ್ಣ ಬಳ್ಳಾರಿ ಹೇಳಿದರು.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ಕನ್ನಡ ನುಡಿ ಹಬ್ಬದ 19ನೇ ದಿನದ ಕಾರ್ಯಕ್ರಮದಲ್ಲಿ ದೃಶ್ಯ ಮಾಧ್ಯಮ ಮತ್ತು ಸಮಾಜ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.  

ದೃಶ್ಯ ಮಾಧ್ಯಮ ಇಂದು ಅಗಾಧವಾಗಿ ಬೆಳೆದಿದ್ದು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಆದರೂ ಕೆಲವು ಸಂದರ್ಭಗಳಲ್ಲಿ ಕೆಲವು ದೃಶ್ಯಗಳನ್ನು ವೈಭವೀಕರಣ ಮಾಡುತ್ತಿವೆ. ಐವತ್ತು ವರ್ಷ ಕೆಲಸ ಮಾಡಿರುವವರ  ಬಗ್ಗೆ ಕೇವಲ ಒಂದೆರಡು ನಿಮಿಷ ತೋರಿಸುತ್ತಾರೆ. ಆದರೆ ಅದೇ ಒಂದು ಕ್ರಿಮಿನಲ್ ಕೆಲಸ ಅಥವಾ ಸಮಾಜದ ವಿಧ್ವಂಸಕ ಕೆಲಸ ಮಾಡಿದವರ ಕುರಿತು  ವೈಭವೀಕರಿಸಿ ಮತ್ತೆ ಮತ್ತೆ ಪ್ರದರ್ಶಿಸುವುದು ಸಮಾಜಕ್ಕೆ ಆರೋಗ್ಯಕರವಲ್ಲ ಎಂದು  ಅವರು ಅಭಿಪ್ರಾಯಪಟ್ಟರು.

 ಇಂದು ಕೆಲವು ದೃಶ್ಯ ಮಾಧ್ಯಮಗಳು ಅದರಲ್ಲಿ ಡಿಡಿ ನ್ಯಾಷನಲ್,  ಡಿಡಿ ಚಂದನ ಇವುಗಳಲ್ಲಿ ಬರುವ ವಾರ್ತೆಗಳು ಯಾವುದೇ ಅಬ್ಬರವಿಲ್ಲದೆ ಬರುತ್ತಿವೆ. ನ್ಯಾಷನಲ್ ಜಿಯೋಗ್ರಾಫಿಕಲ್, ನ್ಯಾಷನಲ್ ಡಿಸ್ಕವರಿ ಇಂತಹ ಕೆಲವು ಮಾಧ್ಯಮಗಳು ವಿವಿಧ ಮೃಗಗಳು, ಸಸ್ಯಗಳು, ಅರಣ್ಯ ಸಂಪತ್ತು, ಖನಿಜ ಸಂಪತ್ತು, ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಾ ಇಂದಿಗೂ ಜನಮಾನಸದಲ್ಲಿ ಉಳಿಯುವಂತಹ ವಿಚಾರಗಳನ್ನು ಬಿತ್ತರಿಸುತ್ತಿವೆ ಎಂದು ಅವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

 ದೃಶ್ಯ ಮಾಧ್ಯಮಗಳು ಸಮಾಜಕ್ಕೆ ಒಳಿತು – ಕೆಡುಕುಗಳ ಸವಿಸ್ತಾರವಾದ ಮಾಹಿತಿಯನ್ನು ರವಾನಿಸುತ್ತವೆ. ದೃಶ್ಯ ಮಾಧ್ಯಮವೆಂದರೆ ಕಣ್ಣಿನಿಂದ ನೋಡಬಹುದಾದಂತಹ ಮಾಧ್ಯಮ. ಆರಂಭದಲ್ಲಿ ರೇಖಾ ಚಿತ್ರಗಳು,  ಮೂಕ ಸಿನಿಮಾ ನಂತರ, ಚಿತ್ರ ಜಗತ್ತು,  ಗೂಗಲ್, ಯೂಟ್ಯೂಬ್, ವಾಟ್ಸಾಪ್ ಇತ್ಯಾದಿ ಪ್ರಕಾರಗಳಲ್ಲಿ ನೋಡಬಹುದಾಗಿದೆ. ಇವು ಜನರ ಮನಸ್ಸನ್ನು ಅರಳಿಸಬಲ್ಲವು. ಜನರಿಗೆ ಜ್ಞಾನ ದೀವಿಗೆಯನ್ನು ಹಂಚುವಂತಹ ಶಕ್ತಿಯನ್ನು ಹೊಂದಿವೆ.  ಅನಗತ್ಯವಾದುದನ್ನು,  ಕೆಟ್ಟದ್ದನ್ನು ಬಿತ್ತರಿಸಿದಂತೆ ಕಾನೂನನ್ನು ಜಾರಿಗೆ ತಂದರೆ ತಪ್ಪಾಗಲಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

ಬಾಡಾ ಕ್ರಾಸ್‌ನ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳವರ ವೀರೇಶ್ವರ ಪುಣ್ಯಾಶ್ರಮದ ಬಗ್ಗೆ ಹಿರಿಯ ವಕೀಲ ಎ. ಎಚ್. ಶಿವಮೂರ್ತಿ ಸ್ವಾಮಿ ಮಾತನಾಡಿದರು.  ವಕೀಲ ಡಿ.ಪಿ. ಪ್ರಸನ್ನಕುಮಾರ್ ಸ್ವಾಗತಿಸಿದರು. ಶ್ರೀ ವೀರೇಶ್ವರ ಆಶ್ರಮದ ಮಕ್ಕಳು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 

Leave a Reply

Your email address will not be published.