ರೈತರ ಪರವಾದ ಎಪಿಎಂಸಿ ಕಾಯ್ದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ

ರೈತರ ಪರವಾದ ಎಪಿಎಂಸಿ ಕಾಯ್ದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ

ಜಗಳೂರು, ನ.21 – ರೈತರು ಬೆಳೆದ ಬೆಳೆಗಳನ್ನು ರಾಜ್ಯವ್ಯಾಪಿ ಮಾರು ಕಟ್ಟೆಗಳಿಗೆ ರಪ್ತುಮಾಡಿ ಮಾರಾಟಕ್ಕೆ ಮುಕ್ತ ಅವಕಾಶವಿದೆ. ರೈತರ ಪರವಾದ ಎಪಿಎಂಸಿ ಕಾಯ್ದೆಯನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿ ರೈತರ ಆರ್ಥಿಕ ಅಭಿವೃದ್ಧಿಗೆ ಅನುಕೂಲ ಕಲ್ಪಿಸಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಿ.ಸಿ. ರಸ್ತೆ, ಕಾಂಪೌಂಡ್ ವಾಲ್, ಸಂತೆಕಟ್ಟೆ, ಕಾಮಗಾರಿ ಶಂಕುಸ್ಥಾಪನೆ ಹಾಗೂ ತಾಲ್ಲೂಕಿನ ಅಸಗೋಡು, ಸೊಕ್ಕೆ, ಅಣಬೂರು ಗ್ರಾಮಗಳಲ್ಲಿನ ಗೋದಾಮು ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಕೊರೊನ ಹಿನ್ನೆಲೆ ಎಪಿಎಂಸಿ ಮಾರುಕಟ್ಟೆಗಳಲ್ಲಿ ಲಾಭ ಗಳಿಕೆ ಇಳಿಮುಖವಾಗಿದೆ. ರೈತರ ಅನುಕೂಲಕ್ಕಾಗಿ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ಗೋದಾಮು, ಸಂತೆಕಟ್ಟೆಗಳನ್ನು ನಿರ್ಮಿಸಲಾಗಿದ್ದು ಸರ್ಕಾರದ  ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಎಪಿಎಂಸಿ ಮಾರುಕಟ್ಟೆ ಅಭಿವೃದ್ದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸಂಸದರ ಜೊತೆಗೂಡಿ ಸರ್ಕಾರದಿಂದ ಶೇಂಗಾ, ಈರುಳ್ಳಿ ಸೇರಿದಂತೆ ಬೆಳೆವಿಮೆ ಸಮರ್ಪಕವಾಗಿ ರೈತರ ಖಾತೆಗೆ ಜಮಾ ಆಗುವಂತೆ ಕ್ರಮ ಕೈಗೊಳ್ಳಲಾಗುವುದು. ರೈತರ ಸಮಸ್ಯೆಗೆ ಸದಾ ಸ್ಪಂದಿಸುತ್ತೇವೆ. ಯಾವುದೇ ಆತಂಕ ಬೇಡ ಎಂದು ಹೇಳಿದರು. ಎಪಿಎಂಸಿ ಅಭಿವೃದ್ಧಿಗೆ ನಾನು ಮತ್ತು ಸಂಸದರು ಎಲ್ಲಾ ರೀತಿಯ ನೆರವು ಕಲ್ಪಿಸಿಕೊಡುತ್ತೇವೆ. ಹೊಸ ಕಾಯ್ದೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಬೇಸಿಗೆ ಕಾಲ ಸಮೀಪಿಸುತ್ತಿದ್ದು ತಾಲೂಕಿನಾದ್ಯಂತ ನೀರಿನ ಸಮಸ್ಯೆ ನಿವಾರಿಸುವ ಜೊತೆ ಗ್ರಾಮೀಣ ಭಾಗ ಸೇರಿದಂತೆ ಶುದ್ದ ಕುಡಿಯುವ ನೀರು ಪೂರೈಕೆ ಹಾಗೂ ಮೂಲ ಸೌಕರ್ಯಕ್ಕೆ ಒತ್ತು ನೀಡಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಸ್ಟೂರು ಮಠದ‌ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಎಪಿಎಂಸಿ  ಅಧ್ಯಕ್ಷ ರೇಣುಕಾನಂದ, ಉಪಾಧ್ಯಕ್ಷ ಗುರುಮೂರ್ತಿ,  ಸದಸ್ಯ ಯು.ಜಿ. ಶಿವಕುಮಾರ್, ಬಿಜೆಪಿ ಮಂಡಲ‌ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟೆ, ಪ.ಪಂ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ವಿಎಸ್‍ಎಸ್‍ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮುಖಂಡರಾದ ಎಂ.ಎಸ್. ಪಾಟೀಲ್, ಎನ್. ಎಸ್. ರಾಜು, ಕೃಷ್ಣಮೂರ್ತಿ, ಶಿವಕುಮಾರ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published.