ಜ.26ರಂದು ನೂತನ ರೈಲ್ವೆ ಕಟ್ಟಡ ಉದ್ಘಾಟನೆ: ಸಿದ್ದೇಶ್ವರ

ಜ.26ರಂದು ನೂತನ ರೈಲ್ವೆ ಕಟ್ಟಡ ಉದ್ಘಾಟನೆ: ಸಿದ್ದೇಶ್ವರ

ದಾವಣಗೆರೆ, ನ. 20 – ಮುಂಬರುವ ಜನವರಿ 26ರಂದು ರೈಲ್ವೆ ನಿಲ್ದಾಣದ ನೂತನ ಕಟ್ಟಡ ಉದ್ಘಾಟನೆ ಯಾಗಲಿದೆ ಹಾಗೂ ಅಶೋಕ ಟಾಕೀಸ್ ರೈಲ್ವೆ ಕ್ರಾಸಿಂಗ್ ಸಮಸ್ಯೆ ಬಗೆಹರಿಸಲು ಕಿರು ಕೆಳ ಸೇತುವೆಯ ಕಾಮಗಾರಿ ಆರಂಭವಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈಲ್ವೆ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ರೈಲ್ವೆ ನಿಲ್ದಾಣ ನಿರ್ಮಾಣದ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ಒಳಾವರಣದ ಕೆಲಸ ಗಳನ್ನು ಕೈಗೊಳ್ಳಲಾಗುತ್ತಿದೆ. ಎರಡು ಎಸ್ಕಲೇಟರ್‌ಗಳನ್ನು ಪ್ರಯಾಣಿಕರಿಗಾಗಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಅಶೋಕ ಟಾಕೀಸ್ ಬಳಿಯ ರೈಲ್ವೆ ಕ್ರಾಸಿಂಗ್‌ನಲ್ಲಿ ಲಿಂಗೇಶ್ವರ ದೇವಸ್ಥಾನದ ರಸ್ತೆಯಲ್ಲಿ ಒಂದು ಕಿರು ಕೆಳ ಸೇತುವೆಯನ್ನು ನಿರ್ಮಿಸಲಾ ಗುತ್ತಿದೆ. ಇದು ಕಾರು ಹಾಗೂ ಸಣ್ಣ ವಾಹನಗಳಿಗೆ ಸಾಕಾಗಲಿದೆ. ಎರಡು ತಿಂಗಳಲ್ಲಿ ಕಾಮಗಾರಿ ಪೂ ರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದು 2.75 ಹಾಗೂ 7.5 ಮೀಟರ್ ಗಾತ್ರದ್ದಾಗಿರಲಿದೆ ಎಂದು ಹೇಳಿದರು.

ಇದೇ ಮಾರ್ಗದಲ್ಲಿ ಗೀತಾಂಜಲಿ ಟಾಕೀಸ್ ಬಳಿ ಇನ್ನೊಂದು ಕೆಳ ಸೇತುವೆಯನ್ನು ಬೃಹತ್ ವಾಹನಗಳಿಗೆ ನಿರ್ಮಾಣ ಮಾಡಲಾಗುತ್ತಿದೆ. ಇದು 4.5 ಮೀಟರ್ ಹಾಗೂ 7.5 ಮೀಟರ್ ಗಾತ್ರದ್ದಾಗಿರಲಿದೆ. ಈ ಕೆಳ ಸೇತುವೆಗೆ ಜಾಗ ಪಡೆದ ನಂತರ ಟೆಂಡರ್ ಕರೆ ಯಲಾಗುವುದು ಎಂದು ಸಿದ್ದೇಶ್ವರ ವಿವರಿಸಿದ್ದಾರೆ. ಡಿಸಿಎಂ ಲೇಔಟ್‌ ಬಳಿಯ ರೈಲ್ವೆ ಕೆಳ ಸೇತುವೆ ಕಾಮಗಾರಿ ಆಂತಿಮ ಹಂತಕ್ಕೆ ತಲುಪಿದೆ. ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದವರು ಹೇಳಿದ್ದಾರೆ.

ತೋಳಹುಣಸೆಯಲ್ಲಿ ಮೇಲ್ಸೇತುವೆ ನಿರ್ಮಾಣವಾದ ನಂತರ ರೈಲ್ವೆ ಗೇಟ್ ಬಂದ್ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಸಮಸ್ಯೆ ನೀಗಿಸಲು ಕ್ರಮ ತೆಗೆದುಕೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂಸದರು ಹೇಳಿದರು.

ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲ್ವೆ ಮಾರ್ಗಕ್ಕೆ 226 ಎಕರೆ ಜಾಗ ವಶಪಡಿಸಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ತಿಂಗಳಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. 26 ಎಕರೆಯನ್ನು ಹೆಚ್ಚುವರಿಯಾಗಿ ವಶಪಡಿಸಿಕೊಳ್ಳಲೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದವರು ತಿಳಿಸಿದರು.

Leave a Reply

Your email address will not be published.